ಬೆಂಗಳೂರು, ಅಕ್ಟೋಬರ್ 12: ಮುಖ್ಯಮಂತ್ರಿ ಬದಲಾವಣೆ ಮತ್ತು ಸಂಪುಟ ಪುನಾರಚನೆಯ ಚರ್ಚೆಗಳು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿವೆ. ಈ ಬೆಳವಣಿಗೆಗಳ ಬೆನ್ನಲ್ಲೇ ಬಿಜೆಪಿ ತನ್ನ ರಾಜಕೀಯ ತಂತ್ರವನ್ನು ರೂಪಿಸಲು ಅಲರ್ಟ್ ಆಗಿದೆ. ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಕಾಂಗ್ರೆಸ್‌ನ ಆಂತರಿಕ ಗೊಂದಲವನ್ನು ಗಮನಿಸಿ, ಮುಂದಿನ ನಡೆಗಳನ್ನು ಯೋಜಿಸಲು ಮಹತ್ವದ ಚರ್ಚೆಗಳು ನಡೆದಿವೆ. ಪಕ್ಷ ಸಂಘಟನೆ, ಬೆಂಗಳೂರು ಪಾಲಿಕೆ ಚುನಾವಣೆ, ಬಿಹಾರ ಚುನಾವಣೆಯ ಫಂಡಿಂಗ್ ಆರೋಪಗಳು ಮತ್ತು ಜಾತಿ ಜನಗಣತಿ ವರದಿಗೆ ಪ್ರತಿಕ್ರಿಯೆ ಸೇರಿದಂತೆ ಹಲವು ವಿಷಯಗಳು ಸಭೆಯಲ್ಲಿ ನಡೆದವು.
ಕಾಂಗ್ರೆಸ್‌ನಿಂದ ಬಿಹಾರ ಚುನಾವಣೆಗೆ ಹಣ ರವಾನೆಯಾಗುತ್ತಿದೆ ಎಂಬ ಆರೋಪವೂ ಸಭೆಯಲ್ಲಿ ಚರ್ಚೆಗೆ ಬಂದಿತ್ತು. ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಅವರಿಂದ 300 ಕೋಟಿ ರೂ. ಫಂಡಿಂಗ್ ಆಗುತ್ತಿದೆ ಎಂಬ ಆರೋಪವನ್ನು ಬಿಜೆಪಿ ಅಸ್ತ್ರವಾಗಿ ಬಳಸಲು ತೀರ್ಮಾನಿಸಿದೆ. ಈ ಆರೋಪವನ್ನು ರಾಜಕೀಯವಾಗಿ ಕಾಂಗ್ರೆಸ್‌ಗೆ ಇಕ್ಕಟ್ಟು ಉಂಟುಮಾಡಲು ಬಿಜೆಪಿ ತಂತ್ರ ರೂಪಿಸಿದೆ. ಜೊತೆಗೆ, ಕಾಂಗ್ರೆಸ್‌ನ ಆಂತರಿಕ ಚಟುವಟಿಕೆಗಳ ಮೇಲೆ ನಿರಂತರ ನಿಗಾ ಇರಿಸಿ, ಹೈಕಮಾಂಡ್‌ಗೆ ಕಾಲಕಾಲಕ್ಕೆ ವರದಿ ಸಲ್ಲಿಸಲು ನಾಯಕರು ನಿರ್ಧರಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಬಿಜೆಪಿಯ ಭಿನ್ನಮತ ಶಮನಗೊಳಿಸಲು ಕೋರ್ ಕಮಿಟಿ ಸಭೆಗೂ ಮುನ್ನ ಸಂಧಾನ ಸಭೆ ನಡೆಯಿತು. ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ರಾಧಾಮೋಹನ್ ದಾಸ್ ಅಗರ್ವಾಲ್ ನೇತೃತ್ವದಲ್ಲಿ ಎರಡು ಬಣಗಳ ವಾದವನ್ನು ಆಲಿಸಲಾಯಿತು. ಮಾಜಿ ಸಂಸದ ಜಿಎಂ ಸಿದ್ದೇಶ್ವರ್ ಬಣ, ರೇಣುಕಾಚಾರ್ಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದೆ. ಸಿದ್ದೇಶ್ವರ್ ಅವರ ಪತ್ನಿ ಗಾಯತ್ರಿ ಅವರ ಸೋಲಿಗೆ ರೇಣುಕಾಚಾರ್ಯ ಕಾರಣ ಎಂದು ಆರೋಪಿಸಿ, ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ರೇಣುಕಾಚಾರ್ಯ ಬಣವು ಸಿದ್ದೇಶ್ವರ್ ಅವರನ್ನು ಗಬ್ಬರ್ ಸಿಂಗ್‌ಗೆ ಹೋಲಿಸಿ, ಜಿಲ್ಲೆಯಲ್ಲಿ ಕಾರ್ಯಕರ್ತರ ಆಕ್ರೋಶವಿದೆ ಎಂದು ವಾದಿಸಿತ್ತು. ಎರಡೂ ಬಣಗಳಿಗೆ ಬಹಿರಂಗವಾಗಿ ಮಾತನಾಡದಂತೆ ಸೂಚಿಸಿ, ವಿಷಯವನ್ನು ಹೈಕಮಾಂಡ್‌ಗೆ ವರದಿಗೊಳಿಸಲಾಗಿದೆ.