ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿಬೆನ್ ಪಟೇಲ್, ಯುವತಿಯರಿಗೆ ಲಿವ್-ಇನ್ ಸಂಬಂಧಗಳ ಬಗ್ಗೆ ಗಂಭೀರ ಎಚ್ಚರಿಕೆಯನ್ನು ನೀಡಿದ್ದಾರೆ. ವಾರಣಾಸಿಯ ಮಹಾತ್ಮ ಗಾಂಧಿ ಕಾಶಿ ವಿದ್ಯಾಪೀಠದ 47ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಲಿವ್-ಇನ್ ಸಂಬಂಧಗಳು ಇತ್ತೀಚಿನ ಟ್ರೆಂಡ್ ಆಗಿದ್ದರೂ, ಇವು ಯುವತಿಯರ ಜೀವನಕ್ಕೆ ಅಪಾಯಕಾರಿಯಾಗಬಹುದು ಎಂದು ತಿಳಿಸಿದ್ದಾರೆ.
“ಲಿವ್-ಇನ್ ಸಂಬಂಧಗಳಿಂದ ದೂರವಿರಿ, ಇಲ್ಲವಾದರೆ ದೆಹಲಿಯ ಶ್ರದ್ಧಾ ಪ್ರಕರಣದಂತೆ ನಿಮ್ಮ ಜೀವನವೂ ದುರಂತಕ್ಕೆ ಸಿಲುಕಬಹುದು,” ಎಂದು ಎಚ್ಚರಿಕೆ ನೀಡಿದರು. ಶ್ರದ್ಧಾ ಪ್ರಕರಣದಲ್ಲಿ, ಲಿವ್-ಇನ್ ಸಂಬಂಧದಲ್ಲಿದ್ದ ಯುವತಿಯ ದೇಹವನ್ನು 50 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿ ಇಡಲಾಗಿತ್ತು, ಇದು ದೇಶವನ್ನೇ ಬೆಚ್ಚಿಬಿಳಿಸಿತ್ತು.
ಆನಂದಿಬೆನ್ ಪಟೇಲ್, ಈ ರೀತಿಯ ಸಂಬಂಧಗಳಿಂದ ಉಂಟಾಗುವ ಗಂಭೀರ ಸಮಸ್ಯೆಗಳ ಬಗ್ಗೆ ವಿವರಿಸಿದರು. ಕಳೆದ ಒಂದು ದಶಕದಲ್ಲಿ ಲಿವ್-ಇನ್ ಸಂಬಂಧಗಳಿಂದಾಗಿ ಕೊಲೆ ಪ್ರಕರಣಗಳು ಹೆಚ್ಚಾಗಿರುವುದನ್ನು ಉಲ್ಲೇಖಿಸಿದ ಅವರು, ಇಂತಹ ಘಟನೆಗಳು ಮನಸ್ಸಿಗೆ ನೋವುಂಟುಮಾಡುತ್ತವೆ ಎಂದು ಬೇಸರ ವ್ಯಕ್ತಪಡಿಸಿದರು. “ಯುವತಿಯರೇ, ನಿಮ್ಮ ಜೀವನದ ಬಗ್ಗೆ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಿ. ಇಂತಹ ಸಂಬಂಧಗಳ ಸುಳಿಗೆ ಸಿಲುಕಬೇಡಿ,” ಎಂದು ಸಲಹೆ ನೀಡಿದರು.
ಲಿವ್-ಇನ್ ಸಂಬಂಧದಿಂದ ಸಮಸ್ಯೆಗೊಳಗಾದ ಹಲವು ಯುವತಿಯರನ್ನು ಭೇಟಿಯಾದ ಅನುಭವವನ್ನು ಆನಂದಿಬೆನ್ ಹಂಚಿಕೊಂಡರು. “ಒಬ್ಬೊಬ್ಬರೂ ತಮ್ಮ ದುಃಖದಾಯಕ ಕಥೆಯನ್ನು ಹೇಳಿದರು. ಇದೇ ರೀತಿ ನ್ಯಾಯಾಧೀಶರೊಂದಿಗೆ ಮಾತನಾಡಿದಾಗ, ಅವರೂ ಯುವತಿಯರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು,” ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಯುವತಿಯರಿಗೆ ಜಾಗೃತಿ ಮೂಡಿಸುವ ಅಭಿಯಾನಗಳನ್ನು ಆಯೋಜಿಸುವ ಅಗತ್ಯವನ್ನು ಒತ್ತಿ ಹೇಳಿದರು.
ಬಲ್ಲಿಯಾದ ಒಂದು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಎರಡು ದಿನಗಳ ಹಿಂದೆ ಮಾತನಾಡಿದ ಆನಂದಿಬೆನ್, ಅನಾಥಾಶ್ರಮಗಳಲ್ಲಿ ಲಿವ್-ಇನ್ ಸಂಬಂಧದಿಂದ ಬಂದ ಯುವತಿಯರ ದುಃಸ್ಥಿತಿಯನ್ನು ವಿವರಿಸಿದ್ದರು. “15-20 ವರ್ಷದ ಯುವತಿಯರು ಒಂದು ವರ್ಷದ ಮಕ್ಕಳನ್ನು ಹೊತ್ತುಕೊಂಡು ಅನಾಥಾಶ್ರಮದ ಬಾಗಿಲಲ್ಲಿ ನಿಂತಿರುವ ದೃಶ್ಯ ಗಾಬರಿಯುಂಟುಮಾಡುತ್ತದೆ. ಯುವತಿಯರನ್ನು ಆಮಿಷಕ್ಕೆ ಒಳಪಡಿಸಿ, ಶೋಷಣೆ ಮಾಡಿ, ನಂತರ ಕೈಬಿಡಲಾಗುತ್ತಿದೆ,” ಎಂದು ಆತಂಕ ವ್ಯಕ್ತಪಡಿಸಿದರು.
ಯುವತಿಯರಿಗೆ ಶಿಕ್ಷಣದ ಮೇಲೆ ಗಮನವಿರಿಸುವಂತೆ ಸಲಹೆ ನೀಡಿದ ಆನಂದಿಬೆನ್, ಮಾದಕ ದ್ರವ್ಯಗಳ ದುರುಪಯೋಗದ ಬಗ್ಗೆಯೂ ಕಳವಳ ವ್ಯಕ್ತಪಡಿಸಿದರು. “ತಾಯಿಯ ಕುಟುಂಬವಾಗಲಿ, ಗಂಡನ ಕುಟುಂಬವಾಗಲಿ, ನಿಮ್ಮನ್ನು ಯಾವಾಗಲೂ ನೋಡಿಕೊಳ್ಳುವುದಿಲ್ಲ. ಆದ್ದರಿಂದ, ಶಿಕ್ಷಣ ಮತ್ತು ಉತ್ತಮ ಗುರಿಗಳ ಮೇಲೆ ಗಮನ ಕೇಂದ್ರೀಕರಿಸಿ,” ಎಂದು ಹೇಳಿದರು.





