ಹಿಂದೂ ಧರ್ಮದ ಪವಿತ್ರ ಕ್ಷೇತ್ರಗಳಲ್ಲಿ ಸಂಪ್ರದಾಯ ಮತ್ತು ಆಚಾರಗಳು ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾಗಿರುವುದು ವಸ್ತ್ರ ಸಂಹಿತೆ. ದೇವಸ್ಥಾನಗಳಿಗೆ ಬರುವ ಭಕ್ತರು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಬೇಕು ಎಂಬ ನಿಯಮ ಬಹುತೇಕ ದೇಗುಲಗಳಲ್ಲಿ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಾಡರ್ನ್ ಫ್ಯಾಷನ್ ಮತ್ತು ಸಂಪ್ರದಾಯದ ನಡುವಿನ ಸಂಘರ್ಷ ಹೆಚ್ಚುತ್ತಿದೆ. ಇದಕ್ಕೆ ಮಾದರಿಯಂತೆ ಹರಿದ್ವಾರದ ದಕ್ಷಿಣ ಕಾಳಿ ದೇಗುಲದಲ್ಲಿ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಒಬ್ಬ ಯುವತಿ ಅರೆಬರೆ ಬಟ್ಟೆಯಲ್ಲಿ ದೇಗುಲಕ್ಕೆ ಬಂದು ಪ್ರವೇಶ ನಿರಾಕರಣೆಗೆ ಸಿಟ್ಟಿಗೆದ್ದು ಅರ್ಚಕರು ಮತ್ತು ಪೊಲೀಸರೊಂದಿಗೆ ಗಲಾಟೆ ಮಾಡಿದ ಘಟನೆ ನಡೆದಿದೆ.
ಘಟನೆಯ ವಿವರ
ಯುವತಿಯೊಬ್ಬಳು ಮೊಣಕಾಲಿಗಿಂತ ಮೇಲೆ ನಿಲ್ಲುವ ಶಾರ್ಟ್ಸ್ ಮತ್ತು ಟೀ ಶರ್ಟ್ ಧರಿಸಿ ದೇಗುಲಕ್ಕೆ ಬಂದಿದ್ದಳು. ದೇಗುಲದ ಪ್ರವೇಶದ್ವಾರದಲ್ಲಿ ಅರ್ಚಕರು ಮತ್ತು ಪೊಲೀಸರು ಆಕೆಯ ವೇಷಭೂಷಣವನ್ನು ಗಮನಿಸಿ ಒಳಗೆ ಬಿಡಲು ನಿರಾಕರಿಸಿದರು. ಹಿಂದೂ ದೇವಸ್ಥಾನಗಳಲ್ಲಿ ಮೈತೋರಿಸುವ ಬಟ್ಟೆಗಳಿಗೆ ಅನುಮತಿ ಇಲ್ಲ ಎಂಬ ನಿಯಮವನ್ನು ಅವರು ಉಲ್ಲೇಖಿಸಿದರು. ಆದರೆ ಈ ನಿರಾಕರಣೆಯಿಂದ ಕುಪಿತಳಾದ ಯುವತಿ ಅಲ್ಲಿ ಜಗಳ ಶುರುಮಾಡಿದಳು. “ಇಂತಹ ನಿಯಮಗಳನ್ನು ದೇವರು ಮಾಡಿಲ್ಲ, ಜನರು ಮಾಡಿದ್ದು” ಎಂದು ಆಕೆ ಆಕ್ರೋಶಗೊಂಡು ಹೇಳಿದಳು. ಈ ದೃಶ್ಯವನ್ನು ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ.
ವೀಡಿಯೋದಲ್ಲಿ ಯುವತಿ ಪೊಲೀಸರೊಂದಿಗೆ ವಾಗ್ವಾದ ಮಾಡುವುದು, “ನಾನು ಯಾರ ಮಾತನ್ನೂ ಕೇಳುವುದಿಲ್ಲ, ನೀವು ಜನರೊಂದಿಗೆ ಹೇಗೆ ಮಾತನಾಡಬೇಕು ಎಂಬುದನ್ನು ಕಲಿಯಬೇಕು” ಎಂದು ಹೇಳುವುದು ಸ್ಪಷ್ಟವಾಗಿ ಕಾಣುತ್ತದೆ. ಈ ಹಿನ್ನೆಲೆಯಲ್ಲಿ ವೀಡಿಯೋ ಮಾಡಿದ ಮಹಿಳೆಯೊಬ್ಬರ ಧ್ವನಿ ಕೇಳುತ್ತಿದ್ದು, “ಇವಳು ಶಾರ್ಟ್ಸ್ ಧರಿಸಿ ಬಂದಿದ್ದಾಳೆ, ಇದು ಸರಿಯಲ್ಲ. ಪೊಲೀಸರು ಸರಿಯಾಗಿ ಮಾಡಿದ್ದಾರೆ” ಎಂದು ಕಾಮೆಂಟ್ ಮಾಡುತ್ತಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವೀಡಿಯೋ ವೈರಲ್ ಆದ ನಂತರ ಭಾರಿ ಚರ್ಚೆ ನಡೆದಿದೆ. ಅನೇಕರು ಅರ್ಚಕರು ಮತ್ತು ಪೊಲೀಸರ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. “ದೇಗುಲಗಳು ಪವಿತ್ರ ಸ್ಥಳಗಳು, ಅಲ್ಲಿ ಸಂಪ್ರದಾಯಿಕ ಉಡುಪುಗಳು ಅಗತ್ಯ. ಇದು ಬಾಲ್ಯದಿಂದಲೇ ಕಲಿಸಬೇಕಾದ ಸಾಮಾನ್ಯ ಜ್ಞಾನ” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು “ದೇವಾಲಯದ ನಿಯಮಗಳನ್ನು ಪಾಲಿಸದಿದ್ದರೆ ಹೊರಗೆ ಪ್ರಾರ್ಥನೆ ಮಾಡಿ, ಸೀನ್ ಸೃಷ್ಟಿಸಬೇಡಿ” ಎಂದು ಹೇಳಿದ್ದಾರೆ. ಇದರ ಜೊತೆಗೆ ಕೆಲವರು ಮಹಿಳೆಯ ಬೆಂಬಲಕ್ಕೆ ನಿಂತಿದ್ದಾರೆ. “ವಸ್ತ್ರ ಸಂಹಿತೆ ಲಿಂಗ ತಾರತಮ್ಯದಂತಿದೆ, ಆಧುನಿಕ ಕಾಲದಲ್ಲಿ ಬದಲಾವಣೆ ಬೇಕು” ಎಂದು ಕೆಲವರು ವಾದಿಸಿದ್ದಾರೆ.