ಮಧ್ಯಪ್ರದೇಶ: ಎಂಟು ವರ್ಷದ ಬಾಲಕನೊಬ್ಬ ತನ್ನ ತಾಯಿ ಮತ್ತು ಸಹೋದರಿಯ ವಿರುದ್ಧ ಪೊಲೀಸ್ ತುರ್ತು ಸಂಖ್ಯೆ 112ಕ್ಕೆ ಕರೆ ಮಾಡಿ ದೂರು ನೀಡಿದ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಘಟನೆ ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯ ಚಿತರ್‌ವೈ ಕಲಾ ಗ್ರಾಮದಲ್ಲಿ ನಡೆದಿದೆ. ಕೇವಲ 20 ರೂಪಾಯಿಗಳ ಕುರ್ಕುರೆ ಪ್ಯಾಕೆಟ್ ಖರೀದಿಸಲು ಹಣ ಕೇಳಿದ್ದಕ್ಕೆ ತಾಯಿ ಮತ್ತು ಸಹೋದರಿ ಅವನನ್ನು ಥಳಿಸಿದ್ದಾರೆ ಎಂದು ಬಾಲಕ ಆರೋಪಿಸಿದ್ದಾನೆ.
ಬಾಲಕ ಫೋನ್‌ನಲ್ಲಿ ಅಳುತ್ತಾ ತನ್ನ ದೂರನ್ನು ವಿವರಿಸಿದಾಗ, ಕರ್ತವ್ಯದಲ್ಲಿದ್ದ ಪೊಲೀಸರು ಆಶ್ಚರ್ಯಚಕಿತರಾದರು. ಅವನನ್ನು ಸಮಾಧಾನಪಡಿಸಿದ ಪೊಲೀಸರು, ಸಹಾಯಕ್ಕಾಗಿ ತಕ್ಷಣ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಡಯಲ್ 112 ಪೊಲೀಸ್ ಸಿಬ್ಬಂದಿಯಾದ ಉಮೇಶ್ ವಿಶ್ವಕರ್ಮ ಸ್ಥಳಕ್ಕೆ ಧಾವಿಸಿ, ಬಾಲಕ ಮತ್ತು ಅವನ ತಾಯಿಯೊಂದಿಗೆ ಮಾತನಾಡಿದರು. ಅವರು ತಾಯಿಗೆ ಮಗುವನ್ನು ಹೊಡೆಯದಂತೆ ಸಲಹೆ ನೀಡಿದರು ಮತ್ತು ಬಾಲಕನಿಗೆ ಕುರ್ಕುರೆ ಪ್ಯಾಕೆಟ್ ಖರೀದಿಸಿ ಕೊಟ್ಟರು. ಈ ಘಟನೆಯ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಎಲ್ಲರ ಗಮನ ಸೆಳೆದಿದೆ.
ಪೊಲೀಸರ ಈ ಸಹಾನುಭೂತಿಯ ಕ್ರಮವು ಸಮಾಜದಲ್ಲಿ ಸಕಾರಾತ್ಮಕ ಸಂದೇಶವನ್ನು ರವಾನಿಸಿದೆ. ಕಿರಿಯ ಬಾಲಕನ ದೂರಿಗೆ ಸ್ಪಂದಿಸಿದ ಪೊಲೀಸ್ ಅಧಿಕಾರಿಗಳ ಕಾರ್ಯವೈಖರಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಜನರು ಶ್ಲಾಘಿಸಿದ್ದಾರೆ.





