ರಾತ್ರಿ ನಿದ್ದೆಯಲ್ಲಿ ಎದ್ದು ನಡೆಯುವ ಸಮಸ್ಯೆ ನಿಮಗಿದ್ದರೆ, ನೀವು ಒಂಟಿಯಲ್ಲ. ಅಂದಾಜು 6.9% ಜನರು ಈ ‘ಸ್ಲೀಪ್ ವಾಕಿಂಗ್’ ಸಮಸ್ಯೆಯಿಂದ ಬಳಲುತ್ತಾರೆ. ಇದು ವಯಸ್ಕರಿಗಿಂತ ಮಕ್ಕಳಲ್ಲಿ ಹೆಚ್ಚು ಸಾಮಾನ್ಯ. ವ್ಯಕ್ತಿ ಗಾಢ ನಿದ್ರೆಯಲ್ಲಿದ್ದರೂ ಕಣ್ಣು ತೆರೆದುಕೊಂಡು ನಡೆಯುವ, ಗೊಣಗುವ ಅಥವಾ ವಿಚಿತ್ರವಾಗಿ ವರ್ತಿಸುವ ಸ್ಥಿತಿ ಇದು. ಇದು ಆರೋಗ್ಯ, ಔಷಧಿ ಅಥವಾ ಆನುವಂಶಿಕ ಕಾರಣಗಳಿಂದ ಉಂಟಾಗಬಹುದು.
ಸ್ಲೀಪ್ ವಾಕಿಂಗ್ ಎಂದರೇನು?
ಸ್ಲೀಪ್ ವಾಕಿಂಗ್ ಒಂದು ರೀತಿಯ ನಿದ್ರಾ ಅಸ್ವಸ್ಥತೆ. ಇದರಲ್ಲಿ ವ್ಯಕ್ತಿ ನಿದ್ರೆಯಲ್ಲಿದ್ದರೂ ಕೂಡ ಎದ್ದು ನಡೆಯಲು, ಮಾತನಾಡಲು ಅಥವಾ ಇತರ ಚಟುವಟಿಕೆಗಳಲ್ಲಿ ಈಡಾಗಬಹುದು. ಇದನ್ನು ಮಾಡುವಾಗ ಅವರ ಕಣ್ಣುಗಳು ತೆರೆದಿರುತ್ತವೆ, ಆದರೆ ಮೆದುಳು ಸಂಪೂರ್ಣವಾಗಿ ನಿದ್ರೆಯಲ್ಲೇ ಇರುತ್ತದೆ. ಇದು ದಿನನಿತ್ಯದ ಜೀವನದ ಮೇಲೆ ಪರಿಣಾಮ ಬೀರುವಷ್ಟು ತೀವ್ರತರವಾದಾಗ ಮಾತ್ರ ಅಸ್ವಸ್ಥತೆಯೆಂದು ಪರಿಗಣಿಸಲಾಗುತ್ತದೆ.
ಸ್ಲೀಪ್ ವಾಕಿಂಗ್ನ ಮುಖ್ಯ ಲಕ್ಷಣಗಳು:
ಸಾಮಾನ್ಯವಾಗಿ ರಾತ್ರಿ ಮಲಗಿದ 2-3 ಗಂಟೆಗಳ ನಂತರ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಕೆಲವು ನಿಮಿಷಗಳಿಂದ ಗಂಟೆಗಳವರೆಗೆ ಇದು ನಡೆಯಬಹುದು. ಇದರ ಪ್ರಮುಖ ಲಕ್ಷಣಗಳು
-
ಹಾಸಿಗೆಯಿಂದ ಎದ್ದು ಅಲ್ಲಲ್ಲಿ ತಿರುಗಾಡುವುದು.
-
ಕಣ್ಣುಗಳು ತೆರೆದಿದ್ದರೂ ನಿದ್ರೆಯಲ್ಲೇ ಇರುವುದು.
-
ಮಾತನಾಡದೆ ಇರುವುದು ಅಥವಾ ಅರ್ಥವಾಗದಂತೆ ಗೊಣಗುವುದು.
-
ಇತರರು ಕರೆದರೂ ಪ್ರತಿಕ್ರಿಯಿಸದಿರುವುದು.
-
ಎದ್ದ ನಂತರ ದಿಗ್ಭ್ರಮೆ ಅಥವಾ ಗೊಂದಲದಿಂದಿರುವುದು.
-
ರಾತ್ರಿ ನಡೆದದ್ದು ಏನೂ ನೆನಪಿರದಿರುವುದು.
-
ರಾತ್ರಿ ನಿದ್ರೆ ಸರಿಯಾಗಿ ಆಗದೆ ಹಗಲು ಸಮಯದಲ್ಲಿ ಆಯಾಸ ಮತ್ತು ನಿದ್ರೆ.
ನಿದ್ದೆಯಲ್ಲಿ ನಡಿಗೆ ಮತ್ತು ನಿದ್ರೆಯ ಭಯ (ಸ್ಲೀಪ್ ಟೆರರ್):
ನಿದ್ದೆಯಲ್ಲಿ ನಡಿಗೆಯ ಜೊತೆಗೆ, ‘ನಿದ್ರೆಯ ಭಯ’ ಎಂಬ ಇನ್ನೊಂದು ಸಮಸ್ಯೆಯೂ ಇದೆ. ಇದರಲ್ಲಿ ವ್ಯಕ್ತಿ ಹಠಾತ್ತನೆ ನಿದ್ರೆಯಿಂದ ಎಚ್ಚರಗೊಂಡು ಭಯಭೀತರಾಗಿ, ಗೊಂದಲಕ್ಕೊಳಗಾಗಿ ಅಥವಾ ಹಿಂಸಾತ್ಮಕವಾಗಿ ವರ್ತಿಸಬಹುದು. ಇವೆರಡೂ ಸಮಸ್ಯೆಗಳು ಆನುವಂಶಿಕತೆ, ಜ್ವರ, ಒತ್ತಡ ಅಥವಾ ಮದ್ಯಪಾನದಿಂದ ಉಂಟಾಗಬಹುದು.
ಸ್ಲೀಪ್ ವಾಕಿಂಗ್ ನಿವಾರಣೆ ಮತ್ತು ನಿರ್ವಹಣೆ
ಈ ಸಮಸ್ಯೆಯನ್ನು ನಿಯಂತ್ರಿಸಲು ಜೀವನಶೈಲಿಯಲ್ಲಿ ಸರಳ ಬದಲಾವಣೆಗಳು ಬಹಳಷ್ಟು ಸಹಾಯ ಮಾಡಬಹುದು.
-
ಸರಿಯಾದ ನಿದ್ರೆಯ ಚಟುವಟಿಕೆ: ನಿಗದಿತ ಸಮಯದಲ್ಲಿ ಮಲಗಿ ಮತ್ತು ಎದ್ದರೆ ಪ್ರಯೋಜನ.
-
ವಿಷಯುಕ್ತ ಪದಾರ್ಥಗಳನ್ನು ತ್ಯಜಿಸಿ: ಆಲ್ಕೋಹಾಲ್ ಮತ್ತು ಸಿಗರೇಟ್ ಸೇವನೆ ಕಡಿಮೆ ಮಾಡಿ.
-
ಒತ್ತಡ ನಿರ್ವಹಣೆ: ಧ್ಯಾನ, ಯೋಗಾ ಅಥವಾ ಉಸಿರಾಟದ ವ್ಯಾಯಾಮಗಳಿಂದ ಚಿಂತೆ ಮತ್ತು ಒತ್ತಡವನ್ನು ನಿಯಂತ್ರಿಸಿ.
-
ವ್ಯಾಯಾಮ: ದೈನಂದಿನ ದಿನಚರಿಯಲ್ಲಿ ನಿಯಮಿತ ವ್ಯಾಯಾಮವನ್ನು ಸೇರಿಸಿಕೊಳ್ಳಿ.
-
ಸುರಕ್ಷತಾ ಜಾಗೃತಿ: ಮಲಗುವ ಕೋಣೆಯಲ್ಲಿ ತೊಂದರೆ ಉಂಟುಮಾಡುವ ವಸ್ತುಗಳನ್ನು ದೂರ ಮಾಡಿ ಮತ್ತು ಕಿಟಕಿ-ಬಾಗಿಲು ಬಂಧಿಸಿ.
ವೈದ್ಯರನ್ನು ಯಾವಾಗ ಸಂಪರ್ಕಿಸಬೇಕು?
ಸ್ಲೀಪ್ ವಾಕಿಂಗ್ ಸಾಮಾನ್ಯವಾಗಿ ಅಪಾಯಕಾರಿ ಅಲ್ಲ ಮತ್ತು ಮಕ್ಕಳಲ್ಲಿ ವಯಸ್ಸಾದಂತೆ ತಾನಾಗೆ ಕಡಿಮೆಯಾಗುತ್ತದೆ. ಆದರೆ, ವ್ಯಕ್ತಿ ತನಗೆ ಅಥವಾ ಇತರರಿಗೆ ಹಾನಿ ಮಾಡಿಕೊಳ್ಳುವ ಸಾಧ್ಯತೆ ಇದ್ದರೆ, ರೋಜಿನ ಕೆಲಸಗಳಲ್ಲಿ ಹೆಚ್ಚು ತೊಂದರೆ ಆಗುತ್ತಿದ್ದರೆ, ಅಥವಾ ಇದು ಹೊಸದಾಗಿ ಪ್ರಾರಂಭವಾಗಿದ್ದರೆ ವೈದ್ಯರ ಸಲಹೆ ತೆಗೆದುಕೊಳ್ಳುವುದು ಅತ್ಯಗತ್ಯ.