ದುಬೈ, ಸೆಪ್ಟೆಂಬರ್ 28: ಕ್ರಿಕೆಟ್ ಜಗತ್ತಿನ ಎರಡು ದೈತ್ಯ ತಂಡಗಳಾದ ಭಾರತ ಮತ್ತು ಪಾಕಿಸ್ತಾನ ಏಷ್ಯಾ ಕಪ್ 2025ರ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಈ ಐತಿಹಾಸಿಕ ಕದನಕ್ಕೆ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣ ಸಜ್ಜಾಗಿದ್ದು, 28,000 ಆಸನಗಳ ಟಿಕೆಟ್‌ಗಳು ಸಂಪೂರ್ಣವಾಗಿ ಮಾರಾಟವಾಗಿವೆ ಎಂದು ಸಂಘಟಕರು ದೃಢಪಡಿಸಿದ್ದಾರೆ.
ಏಷ್ಯಾ ಕಪ್‌ನ 41 ವರ್ಷಗಳ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನ ಫೈನಲ್‌ನಲ್ಲಿ ಎದುರಾಗುತ್ತಿರುವುದು ಇದೇ ಮೊದಲ ಬಾರಿ. 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ನಂತರ ಈ ಎರಡು ತಂಡಗಳು ಟೂರ್ನಿಯ ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಈ ಟೂರ್ನಿಯ ಗುಂಪು ಹಂತದ ಪಂದ್ಯದಲ್ಲಿ (ಸೆಪ್ಟೆಂಬರ್ 14) 20,000 ಅಭಿಮಾನಿಗಳು ಭಾರತ-ಪಾಕಿಸ್ತಾನ ಕದನವನ್ನು ವೀಕ್ಷಿಸಿದ್ದರು. ಸೂಪರ್ ಫೋರ್ ಹಂತದಲ್ಲಿ (ಸೆಪ್ಟೆಂಬರ್ 21) 17,000 ಜನ ಈ ಎರಡು ತಂಡಗಳ ಪಂದ್ಯಕ್ಕೆ ಸಾಕ್ಷಿಯಾಗಿದ್ದರು. ಈ ಎರಡೂ ಪಂದ್ಯಗಳಲ್ಲಿ ಭಾರತ ಗೆಲುವಿನ ನಗೆ ಬೀರಿತ್ತು. ಈಗ ಫೈನಲ್‌ನಲ್ಲಿ ಭಾರತ ತನ್ನ ಗೆಲುವಿನ ಓಟವನ್ನು ಮುಂದುವರಿಸಲು ತವಕಿಸುತ್ತಿದ್ದರೆ, ಪಾಕಿಸ್ತಾನ ಟ್ರೋಫಿಯನ್ನು ಗೆಲ್ಲುವ ಛಲದಲ್ಲಿದೆ.
ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡವು ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಸಮತೋಲನ ಹೊಂದಿದೆ. ಆದರೆ, ಯುವ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಮೇಲೆ ತಂಡದ ಅವಲಂಬನೆ ಹೆಚ್ಚಾಗಿದೆ. ಜಸ್ಪ್ರೀತ್ ಬುಮ್ರಾ ಈ ಟೂರ್ನಿಯಲ್ಲಿ ತಮ್ಮ ಗರಿಷ್ಠ ಫಾರ್ಮ್‌ನಲ್ಲಿ ಇಲ್ಲದಿರುವುದು ತಂಡಕ್ಕೆ ಸ್ವಲ್ಪ ಆತಂಕದ ವಿಷಯವಾಗಿದೆ.