ಚೆನ್ನೈ, ಸೆಪ್ಟೆಂಬರ್ 27: ತಮಿಳುನಾಡಿನ ಕರೂರ್ನಲ್ಲಿ ನಟ ಹಾಗೂ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್ ನೇತೃತ್ವದ ಬೃಹತ್ ರ್ಯಾಲಿಯಲ್ಲಿ ಭೀಕರ ಕಾಲ್ತುಳಿತ ಉಂಟಾಗಿದೆ. ಈ ದುರ್ಘಟನೆಯಲ್ಲಿ 33 ಜನಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. 55ಕ್ಕೂ ಹೆಚ್ಚು ಜನ ಅಸ್ವಸ್ತರಾಗಿದ್ದಾರೆ. ರಸ್ತೆಯ ಉದ್ದಗಲಕ್ಕೂ ಹರಡಿದ್ದ ಹತ್ತಾರು ಸಾವಿರ ಜನರ ಸಮೂಹದಲ್ಲಿ ನೂಕುನುಗ್ಗಲು ಉಂಟಾಗಿ ಈ ದುರಂತ ಸಂಭವಿಸಿದೆ.
ಘಟನೆ ಸಂಭವಿಸಿದಾಗ ವಿಜಯ್ ತಕ್ಷಣ ತಮ್ಮ ಭಾಷಣವನ್ನು ನಿಲ್ಲಿಸಿ, “ಪೊಲೀಸರೇ, ದಯವಿಟ್ಟು ಸಹಾಯ ಮಾಡಿ” ಎಂದು ಕರೆ ಮಾಡಿದ್ದಾರೆ. “ಯಾರೂ ಗಾಬರಿಯಾಗಬೇಡಿ, ಈಗ ಆ್ಯಂಬುಲೆನ್ಸ್ ಬರುತ್ತದೆ” ಎಂದು ಅವರು ಮೈಕ್ ಮೂಲಕ ಜನತೆಯನ್ನು ಶಾಂತಪಡಿಸಲು ಪ್ರಯತ್ನಿಸಿದ್ದಾರೆ. ವಿಜಯ್ ಅವರು ತುರ್ತಾಗಿ ಆ್ಯಂಬುಲೆನ್ಸ್ ಸೇವೆಗಳನ್ನು ಏರ್ಪಡಿಸಿ, ಮೂರ್ಛತಪ್ಪಿದ ಜನರನ್ನು ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದ್ದಾರೆ.
ಕರೂರ್ನಲ್ಲಿ ನಡೆದ ಈ ರ್ಯಾಲಿಯು 2026ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ರಾಜ್ಯಾದ್ಯಂತ ನಡೆಯುತ್ತಿರುವ ವಿಜಯ್ ಅವರ ಪ್ರಚಾರದ ಭಾಗವಾಗಿತ್ತು. ರ್ಯಾಲಿ ಸ್ಥಳದಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು, ಇದರಿಂದಾಗಿ ನಿಯಂತ್ರಣ ಕಳೆದುಕೊಂಡ ಪರಿಸ್ಥಿತಿ ಉಂಟಾಗಿದೆ.
ದುರ್ಘಟನೆಯ ನಂತರ ವಿಜಯ್ ಅವರು ಉಸಿರಾಟದ ತೊಂದರೆ ಅನುಭವಿಸುತ್ತಿರುವ ಜನರಿಗೆ ನೀರು ವಿತರಿಸಲು ಮತ್ತು ಆಂಬ್ಯುಲೆನ್ಸ್ ಸೇವೆಗಳನ್ನು ಸಂಘಟಿಸಲು ಮುಂದಾದರು. ಅಗತ್ಯವಿರುವವರನ್ನು ತಲುಪಲು ತುರ್ತು ಆಂಬ್ಯುಲೆನ್ಸ್‌ಗಳಿಗೆ ದಾರಿ ಮಾಡಿಕೊಡುವಂತೆ ತಮ್ಮ ಬೆಂಬಲಿಗರನ್ನು ಅವರು ಒತ್ತಾಯಿಸಿದರು.
ಪೊಲೀಸರು ಇನ್ನೂ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ. ಸ್ಥಳೀಯ ಆಸ್ಪತ್ರೆಗಳಲ್ಲಿ ಗಾಯಗಾರರ ಚಿಕಿತ್ಸೆ ನಡೆಸಲಾಗುತ್ತಿದೆ. ಮೃತರ ವಿವರಗಳನ್ನು ದಾಖಲಿಸಲಾಗುತ್ತಿದೆ ಮತ್ತು ಗುರುತಿಸಲಾಗುತ್ತಿದೆ.