ನವದೆಹಲಿ: ದೆಹಲಿಯ ವಸಂತ್ ಕುಂಜ್ ಪ್ರದೇಶದಲ್ಲಿ ನಡೆದಿರುವ ಒಂದು ಆಘಾತಕಾರಿ ಘಟನೆಯು ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. ಪ್ರಸಿದ್ಧ ಆಶ್ರಮವೊಂದರ ನಿರ್ದೇಶಕರಾದ ಸ್ವಾಮಿ ಚೈತನ್ಯಾನಂದ ಸರಸ್ವತಿ (ಹಿಂದೆ ಸ್ವಾಮಿ ಪಾರ್ಥಸಾರಥಿ ಎಂದು ಕರೆಯಲ್ಪಡುತ್ತಿದ್ದರು) ಅವರ ವಿರುದ್ಧ 17 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳದ ಆರೋಪಗಳನ್ನು ಮಾಡಿದ್ದಾರೆ. ಈ ಆರೋಪಗಳು ಶ್ರೀ ಶಾರದಾ ಇನ್ಸಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್‌ಮೆಂಟ್-ರಿಸರ್ಚ್‌ನಲ್ಲಿ ನಡೆದಿರುವುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಸ್ಥೆಯು ಮ್ಯಾನೇಜ್‌ಮೆಂಟ್ ಡಿಪ್ಲೊಮಾ ಕೋರ್ಸ್‌ಗಳನ್ನು ನೀಡುತ್ತಿದ್ದು, ಇಡಬ್ಲ್ಯೂಎಸ್ ವಿದ್ಯಾರ್ಥಿವೇತನದ ಮೇಲೆ ಕಲಿಯುತ್ತಿರುವ ವಿದ್ಯಾರ್ಥಿನಿಯರೇ ಈ ಆರೋಪಗಳನ್ನು ಮಾಡಿದ್ದಾರೆ.
ಸ್ವಾಮೀಜಿ ಅವರು ತಮ್ಮ ಸಂಸ್ಥೆಯಲ್ಲಿ ವಿದ್ಯಾರ್ಥಿನಿಯರೊಂದಿಗೆ ಅನುಚಿತ ವರ್ತಿಸಿದ್ದಾರೆ ಎಂಬ ಆರೋಪವಿದೆ. ವಿದ್ಯಾರ್ಥಿನಿಯರ ಹೇಳಿಕೆಗಳ ಆಧಾರದ ಮೇಲೆ ವಸಂತ್ ಕುಂಜ್ ಉತ್ತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ದೂರನ್ನು ಶ್ರೀ ಶೃಂಗೇರಿ ಮಠದ ಆಡಳಿತಾಧಿಕಾರಿ ಪಿಎ ಮುರಳಿ ಅವರು ಸಲ್ಲಿಸಿದ್ದಾರೆ. ದೂರಿನಲ್ಲಿ, ಸಂಸ್ಥೆಯ ಪಿಜಿಡಿಎಂ ವಿದ್ಯಾರ್ಥಿನಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಈ ಆರೋಪಗಳು ಕೇವಲ ಒಂದು ಅಥವಾ ಇಬ್ಬರಿಂದಲ್ಲ, ಬದಲಿಗೆ 17 ಮಂದಿ ವಿದ್ಯಾರ್ಥಿನಿಯರಿಂದ ಆರೋಪ ಕೇಳಿ ಬಂದಿದೆ.
ಆಶ್ರಮದಿಂದ ಬಿಡುಗಡೆಯಾದ ಹೇಳಿಕೆಯು ಈ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿ, ಸ್ವಾಮಿ ಚೈತನ್ಯಾನಂದ ಸರಸ್ವತಿ ಅವರು ಕಾನೂನುಬಾಹಿರ ಮತ್ತು ಅನುಚಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ದೃಢಪಡಿಸಿದೆ. “ಸ್ವಾಮಿ ಪಾರ್ಥಸಾರಥಿ ಎಂದು ಹಿಂದೆ ಕರೆಯಲ್ಪಡುತ್ತಿದ್ದ ಸ್ವಾಮಿ ಚೈತನ್ಯಾನಂದ ಸರಸ್ವತಿ ಅವರು ಅನೈತಿಕ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ. ಪರಿಣಾಮವಾಗಿ, ಪೀಠವು ಅವರೊಂದಿಗಿನ ಎಲ್ಲಾ ಸಂಬಂಧಗಳನ್ನು ಕಡಿದುಕೊಂಡಿದೆ. ಇದಲ್ಲದೆ, ಸಂಬಂಧಿತ ಅಧಿಕಾರಿಗಳಿಗೆ ದೂರುಗಳನ್ನು ಸಲ್ಲಿಸಲಾಗಿದೆ,” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ವಿಚಾರಣೆಯ ಸಮಯದಲ್ಲಿ, ಒಟ್ಟು 32 ವಿದ್ಯಾರ್ಥಿನಿಯರು ಪೊಲೀಸರ ಮುಂದೆ ತಮ್ಮ ಹೇಳಿಕೆಗಳನ್ನು ದಾಖಲಿಸಿದ್ದಾರೆ. ಇದರಲ್ಲಿ 17 ಮಂದಿ ನೇರವಾಗಿ ಲೈಂಗಿಕ ಕಿರುಕುಳದ ಆರೋಪಗಳನ್ನು ಮಾಡಿದ್ದಾರೆ. ಅವರು ಸ್ವಾಮೀಜಿ ಅವರು ತಮ್ಮನ್ನು ನಿಂದಿಸಿದ್ದಾರೆ, ಅಶ್ಲೀಲ ವೀಡಿಯೊಗಳನ್ನು ತೋರಿಸಿದ್ದಾರೆ ಮತ್ತು ಅನಗತ್ಯ ದೈಹಿಕ ಸಂಪರ್ಕವನ್ನು ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಸಾಕ್ಷ್ಯಗಳೊಂದಿಗೆ ಆರೋಪ ಮಾಡಿದ್ದಾರೆ. ದೆಹಲಿ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸಿಸಿಟಿವಿ ದೃಶ್ಯಾವಳಿಗಳು, ಹಾರ್ಡ್ ಡಿಸ್ಕ್‌ಗಳು ಮತ್ತು ಎನ್ವಿಆರ್‌ಗಳಂತಹ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಾಕ್ಷ್ಯಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ.
ಆರೋಪಿ ಸ್ವಾಮಿ ಚೈತನ್ಯಾನಂದ ಸರಸ್ವತಿ ಅವರು ಇನ್ನೂ ತಲೆಮರೆಸಿಕೊಂಡಿದ್ದಾರೆ. ಪೊಲೀಸರು ಹಲವಾರು ತಂಡಗಳನ್ನು ರಚಿಸಿ, ಆತನ ಹುಡುಕಾಟವನ್ನು ನಡೆಸುತ್ತಿದ್ದಾರೆ. ಆರೋಪಿಯ ಸ್ಥಳವನ್ನು ಪತ್ತೆಹಚ್ಚಲು ಪೊಲೀಸರು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ.





