ಕಲಬುರಗಿ: ಮದ್ದೂರಿನಲ್ಲಿ ಗಣೇಶ ವಿಸರ್ಜನೆ ಕಾರ್ಯಕ್ರಮದ ಸಂದರ್ಭದಲ್ಲಿ ಉಂಟಾದ ಗಲಭೆಗೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಮದ್ದೂರಿಗೆ ಭೇಟಿ ನೀಡಿದ್ದಾರೆ. ಇಂದು ಸಾಮೂಹಿಕ ಗಣೇಶ ವಿಸರ್ಜನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬಿಜೆಪಿ ನಿಯೋಗದ ಭೇಟಿಯನ್ನು ಖಂಡಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, “ನಿಮ್ಮ ಮಕ್ಕಳನ್ನು ವಿದೇಶದಿಂದ ಕರೆಸಿ ಮದ್ದೂರು ಚಲೋ ಮಾಡಿ, ಬಡವರ ಮಕ್ಕಳನ್ನು ಯಾಕೆ ಬಳಸಿಕೊಳ್ಳುತ್ತೀರಿ?” ಎಂದು ಕಿಡಿಕಾರಿದ್ದಾರೆ.
ಇಂದು ಕಲಬುರ್ಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, “ಬಿಜೆಪಿಯವರಿಗೆ ಕೆಲಸವಿಲ್ಲ, ನಾಚಿಕೆ, ಮಾನ, ಮರ್ಯಾದೆ ಇಲ್ಲ. ಉರಿಗೌಡ, ನಂಜೇಗೌಡ ಕಥೆ ಕಟ್ಟಿದ್ದೀರಿ, ಎಲ್ಲಿ ಹೋದರು ಅವರು? ಅಮಾಯಕರನ್ನು ಮುಂದಿಟ್ಟುಕೊಂಡು ಪ್ರತಿಭಟನೆ ಮಾಡಬೇಡಿ. ನಿಮ್ಮ ಮಕ್ಕಳನ್ನು ವಿದೇಶದಿಂದ ಕರೆತಂದು ಮದ್ದೂರು ಚಲೋ ಆಯೋಜಿಸಿ,” ಎಂದು ವ್ಯಂಗ್ಯವಾಡಿದರು. ಮದ್ದೂರು ಗಲಭೆಗೆ ಸಂಬಂಧಿಸಿದಂತೆ ಕಲ್ಲು ತೂರಾಟ ಪ್ರಕರಣದ ತನಿಖೆ ನಡೆಯುತ್ತಿದ್ದು, ಈಗಾಗಲೇ 21 ಜನರ ಬಂಧನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಮಿತ್ ಶಾ ಭೇಟಿಗೂ ಟೀಕೆ
ಬಿಜೆಪಿ ನಾಯಕರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಚರ್ಚಿಸಿದ್ದಕ್ಕೆ ಸಂಬಂಧಿಸಿದಂತೆಯೂ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದರು. “ಅಮಿತ್ ಶಾ ಅವರು ಯಾವುದೇ ಪ್ರಕರಣವನ್ನು ಸಿಬಿಐಗೆ ಕೊಡಬೇಡಿ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಸಿಬ್ಬಂದಿ ಕೊರತೆ ಇದೆ ಎಂದು ಹೇಳುತ್ತಾರೆ. ಈಗ ಅವರು ಶಾ ಅವರ ಬಳಿ ಹೋಗಿ ಏನು ಹೇಳುತ್ತಾರೆ?” ಎಂದು ಪ್ರಿಯಾಂಕ್ ಖರ್ಗೆ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.
ಮದ್ದೂರಿನ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರವು ತನಿಖೆಯನ್ನು ಚುರುಕುಗೊಳಿಸಿದೆ. ಕಲ್ಲು ತೂರಾಟ ಪ್ರಕರಣದಲ್ಲಿ ಈಗಾಗಲೇ 21 ಜನರನ್ನು ಬಂಧಿಸಲಾಗಿದ್ದು, ಕಾನೂನು ಕ್ರಮಗಳು ಮುಂದುವರಿಯುತ್ತಿವೆ. ಬಿಜೆಪಿಯವರು ರಾಜಕೀಯ ಲಾಭಕ್ಕಾಗಿ ಈ ಘಟನೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.





