ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಮದ್ದೂರಿನಲ್ಲಿ ನಡೆದ ಕಲ್ಲು ತೂರಾಟ ಮತ್ತು ನಂತರ ನಡೆದ ಘಟನಾವಳಿಗಳು, ಈ ಸರಕಾರದ ಹಿಂದೂ ವಿರೋಧಿ ಮನಸ್ಥಿತಿಗೆ, ಅಮಾನವೀಯ ನಡವಳಿಕೆಗೆ ಹಿಡಿದ ಕೈಗನ್ನಡಿ ಎಂದು ವಿಧಾನಪರಿಷತ್ ಶಾಸಕ, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ಟಿ.ಎ ಶರವಣ ಹೇಳಿದ್ದಾರೆ.
ಅಲ್ಪಸಂಖ್ಯಾತರ ಓಲೈಕೆ ರಾಜಕೀಯವನ್ನು ಮಾಡುವುದರ ಮೂಲಕ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿರುವ ಮುಖ್ಯಮಂತ್ರಿಗಳೇ ಮದ್ದೂರು ಗಲಭೆಯ ಹೊಣೆ ಹೊರಬೇಕು. ಇದು ಮುಖ್ಯಮಂತ್ರಿಗಳ ಹಿಂದೂ ವಿರೋಧಿ ಮನಸ್ಥಿತಿಯ ಪರಿಣಾಮ ಎಂದು ಶರವಣ ವಾಗ್ದಾಳಿ ನಡೆಸಿದರು. ಸರಿಯಾಗಿ ಕಾನೂನು ಸುವ್ಯವಸ್ಥೆ ನಿರ್ವಹಣೆಯಲ್ಲಿ ಈ ಸರಕಾರ ಎಡವಿದೆ. ಘಟನೆ ಬಳಿಕವೂ ಸಿಎಂ ಹೇಳಿಕೆ ಗಮನಿಸಿದರೆ ಅಲ್ಪಸಂಖ್ಯಾತರ ತುಷ್ಟೀಕರಣ ಎದ್ದು ಕಾಣುತ್ತೆ ಎಂದು ಖಾರವಾಗಿ ಹೇಳಿದ್ದಾರೆ.
ಹಿಂದೂಗಳ ಧಾರ್ಮಿಕ ನಂಬಿಕೆಯ ಅಭೂತಪೂರ್ವ ಶ್ರದ್ಧಾ ಕೇಂದ್ರ ಚಾಮುಂಡೇಶ್ವರಿ ವಿಚಾರದಲ್ಲೂ ಭಾವನೆಗಳಿಗೆ ನೋವಾಗುವ ರೀತಿಯಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಸರಕಾರ ನಡೆದುಕೊಂಡಿದೆ ಎಂದು ಅವರು ಟೀಕಿಸಿದ್ದಾರೆ. ಚಾಮುಂಡೇಶ್ವರಿ ದೇಗುಲ, ಬೆಟ್ಟ ಹಿಂದೂಗಳ ಆಸ್ತಿಯೇ ಎಂದು ಈ ಸರ್ಕಾರದ ಡಿಸಿಎಂ ಪ್ರಶ್ನಿಸಿದ್ದು, ಒಂದು ರೀತಿಯಲ್ಲಿ ನಾಡಿನ ಜನ ಅವರ ಪ್ರತಿಕ್ರಿಯೆಗೆ ಬೆಚ್ಚಿಬೀಳುವಂತೆ ಮಾಡಿದ್ದಾರೆ ಎಂದು ಶರವಣ ಹೇಳಿದ್ದಾರೆ.
ಮುಜರಾಯಿ ಇಲಾಖೆ ಆಸ್ತಿ ಎಂದು ಅಧಿಕೃತವಾಗಿ ಘೋಷಣೆ ಆಗಿರುವ ಚಾಮುಂಡೇಶ್ವರಿ ದೇಗುಲವನ್ನು ಹಿಂದೂಗಳ ಆಸ್ತಿ ಅಲ್ಲ ಅನ್ನುವ ಸರ್ಕಾರ, ವಕ್ಫ್ ಬೋರ್ಡ್ ಆಸ್ತಿಪಾಸ್ತಿಗಳ ರಕ್ಷಣೆ ವಿಚಾರದಲ್ಲಿ ಅಲ್ಪಸಂಖ್ಯಾತರ ಕೃಪೆಗೆ ಪಾತ್ರರಾಗುವ ನಿರ್ಧಾರ ಕೈಗೊಳ್ಳುತ್ತಿದೆ. ಅಲ್ಪಸಂಖ್ಯಾತರಲ್ಲಿ ಅದರಲ್ಲೂ ಮುಸ್ಲಿಮರ ಬಗ್ಗೆ ಅಷ್ಟೊಂದು ಪ್ರೀತಿ, ವಿಶ್ವಾಸ ಇಟ್ಟಿರುವ ಈ ಸಿಎಂ, ಡಿಸಿಎಂ ಚಾಮುಂಡೇಶ್ವರಿ ದೇಗುಲವನ್ನು ವಕ್ಫ್ ಬೋರ್ಡ್ ಗೆ ಬರೆದುಕೊಡಲು ನಿರ್ಧಾರ ಕೈಗೊಂಡಿದ್ದಾರೆಯೇ ಎಂಬ ಬಗ್ಗೆ ಹೇಳಿಕೆ ಕೊಡಲಿ ಎಂದು ಶರವಣ ಗೇಲಿ ಮಾಡಿದ್ದಾರೆ.