ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ತೂಗುದೀಪ ಇದೀಗ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಆದರೆ, ಅವರನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸುವ ಕುರಿತು ಜೈಲು ಅಧಿಕಾರಿಗಳು ಸಲ್ಲಿಸಿದ ಅರ್ಜಿಯ ವಿಚಾರಣೆ ಬೆಂಗಳೂರಿನ 64ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಡೆದಿತ್ತು. ವಾದ-ಪ್ರತಿವಾದ ಆಲಿಸಿ ಸೆಪ್ಟೆಂಬರ್ 9ಕ್ಕೆ ಆದೇಶ ಕಾಯ್ದಿರಿಸಲಾಗಿತ್ತು.ಜೊತೆಗೆ ದರ್ಶನ್ ಸ್ವತಃ ಸಲ್ಲಿಸಿದ್ದ ಮನೆ ಊಟ, ಹಾಸಿಗೆ, ದಿಂಬು ಮತ್ತು ಕಂಬಳಿಯಂತಹ ಮೂಲಭೂತ ಸೌಲಭ್ಯಗಳನ್ನು ಕೋರಿರುವ ಅರ್ಜಿಯ ತೀರ್ಪು ಇಂದೇ ಬರಲಿದೆ. ಈ ಎರಡು ಅರ್ಜಿಗಳ ಆದೇಶಕ್ಕಾಗಿ ದರ್ಶನ್ ಮತ್ತು ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ದರ್ಶನ್‌ಗೆ ಈಗ ಡಬಲ್ ಟೆನ್ಶನ್ ಎದುರಾಗಿದೆ. ಒಂದೆಡೆ, ಬಳ್ಳಾರಿ ಜೈಲಿಗೆ ಸ್ಥಳಾಂತರದ ಭಯ, ಮತ್ತೊಂದೆಡೆ ಜೈಲಿನಲ್ಲಿ ಕನಿಷ್ಠ ಸೌಲಭ್ಯಗಳಾದ ಹಾಸಿಗೆ, ದಿಂಬು, ಮನೆ ಊಟದಂತಹ ವಿಷಯಗಳಿಗೆ ಕೋರಿರುವ ಅರ್ಜಿಯ ತೀರ್ಪು ಬರಲಿದೆ. ಬಳ್ಳಾರಿ ಜೈಲಿನಲ್ಲಿ ದರ್ಶನ್‌ಗಾಗಿ ಈಗಾಗಲೇ ಸಿದ್ಧತೆಗಳು ಆರಂಭವಾಗಿವೆ. ಬ್ಯಾರಕ್‌ಗಳನ್ನು ಸ್ವಚ್ಛಗೊಳಿಸಲಾಗಿದ್ದು, ಜೈಲಿನ ಸುತ್ತಮುತ್ತ ಅಭಿಮಾನಿಗಳ ಗುಂಪು ಸೇರದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಬಳ್ಳಾರಿ ಪೊಲೀಸರು ಮತ್ತು ಜೈಲಾಧಿಕಾರಿಗಳು ಹೈ ಅಲರ್ಟ್‌ನಲ್ಲಿದ್ದಾರೆ. ದರ್ಶನ್‌ಗೆ ಈ ಹಿಂದೆಯೂ 63 ದಿನಗಳ ಕಾಲ ಬಳ್ಳಾರಿ ಜೈಲಿನ ಅನುಭವವಿದೆ. ಆದರೆ, ಈ ಬಾರಿ ಸ್ಥಳಾಂತರವಾದರೆ, ವಿಚಾರಣೆಗೆ ಹಾಜರಾಗುವ ಸವಾಲು ಜೊತೆಗೆ ಕುಟುಂಬದವರ ಭೇಟಿಯ ತೊಂದರೆಯೂ ಎದುರಾಗಲಿದೆ.
ಇಂದಿನ ಕೋರ್ಟ್ ತೀರ್ಪು ದರ್ಶನ್ ಅವರ ಜೈಲು ಭವಿಷ್ಯವನ್ನು ನಿರ್ಧರಿಸಲಿದೆ. ಅವರು ಪರಪ್ಪನ ಅಗ್ರಹಾರದಲ್ಲೇ ಉಳಿಯುತ್ತಾರಾ, ಅಥವಾ ಬಳ್ಳಾರಿಗೆ ಸ್ಥಳಾಂತರಗೊಳ್ಳುತ್ತಾರಾ? ಮನೆ ಊಟ, ಮೆತ್ತನೆಯ ಬೆಡ್‌ನಂತಹ ಸೌಲಭ್ಯಗಳು ಸಿಗುತ್ತವೆಯೇ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಇಂದು ಕೋರ್ಟ್ ಆದೇಶವೇ ನೀಡಲಿದೆ. ಈ ತೀರ್ಪಿಗಾಗಿ ದರ್ಶನ್ ಅಭಿಮಾನಿಗಳ ಜೊತೆಗೆ ಸ್ಯಾಂಡಲ್‌ವುಡ್ ಕೂಡ ಕಾತರದಿಂದ ಕಾಯುತ್ತಿದೆ.





