ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಮತ್ತು ಅವರ ಗ್ಯಾಂಗ್‌ನ ಸದಸ್ಯರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ರಾಜ್ಯದ ಬೇರೆ ಬೇರೆ ಜೈಲುಗಳಿಗೆ ಶಿಫ್ಟ್ ಮಾಡುವಂತೆ ಜೈಲು ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯು ಇಂದು 64ನೇ ಸೆಷನ್ಸ್ ಕೋರ್ಟ್‌ನಲ್ಲಿ ನಡೆಯಿತು. ಈ ಅರ್ಜಿಯಲ್ಲಿ ದರ್ಶನ್‌ರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವಂತೆ ಕೋರಲಾಗಿತ್ತು. ಆದರೆ, ದರ್ಶನ್ ಪರ ವಕೀಲರು ಇದಕ್ಕೆ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದರು. ಅಲ್ಲದೆ, ಆರೋಪಿಗಳಾದ ಲಕ್ಷ್ಮಣ್ ಮತ್ತು ನಾಗರಾಜ್ ಪರ ವಕೀಲರೂ ಆಕ್ಷೇಪಣೆ ಸಲ್ಲಿಸಿದರು.
ದರ್ಶನ್ ಪರ ವಕೀಲ ಸುನೀಲ್ ಕುಮಾರ್ ವಾದ ಮಂಡಿಸುತ್ತಾ, ಕೊಲೆ ಪ್ರಕರಣದ ಟ್ರಯಲ್ ಶೀಘ್ರದಲ್ಲೇ ಪ್ರಾರಂಭವಾಗಲಿದ್ದು, ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿದರೆ ವಕೀಲರ ಭೇಟಿ ಕಷ್ಟವಾಗುತ್ತದೆ ಎಂದರು. ಪ್ರತಿ ವಿಚಾರಣೆಗೆ ಹಾಜರುಪಡಿಸುವುದು ಸಾಧ್ಯವಿಲ್ಲ ಮತ್ತು ದರ್ಶನ್‌ರ ತಾಯಿ ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಅವರಿಗೆ ಬಳ್ಳಾರಿಗೆ ಹೋಗಿ ಮಗನನ್ನು ನೋಡುವುದು ಕಷ್ಟವಾಗುತ್ತದೆ ಎಂದು ಆಕ್ಷೇಪಿಸಿದರು. ಇದಕ್ಕೆ ಪ್ರಾಸಿಕ್ಯೂಷನ್ ಪರ ವಕೀಲರು ಆಕ್ಷೇಪಣೆಯನ್ನು ಕೋರ್ಟ್‌ಗೆ ಸಲ್ಲಿಸಿದರು.
ಮತ್ತೊಂದೆಡೆ, ಕೇಸ್‌ನ ಎ1 ಆರೋಪಿ ಪವಿತ್ರಾ ಗೌಡ ತಾಂತ್ರಿಕ ಕಾರಣಗಳ ಆಧಾರದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅವರ ಪರ ಹಿರಿಯ ವಕೀಲ ಬಾಲನ್ ವಾದ ಮಂಡಿಸುತ್ತಾ, CRPC ಮತ್ತು BNSS ನಡುವಿನ ವ್ಯತ್ಯಾಸವನ್ನು ಉಲ್ಲೇಖಿಸಿದರು. ಪ್ರಾಸಿಕ್ಯೂಷನ್ CRPC ಅಡಿಯಲ್ಲಿ ಚಾರ್ಜ್‌ಶೀಟ್ ಸಲ್ಲಿಸಿದ್ದು ಸರಿಯಲ್ಲ, BNSS ಅಡಿಯಲ್ಲಿ ಸಲ್ಲಿಸಬೇಕಿತ್ತು ಎಂದರು. ಕಳೆದ ಸೆಪ್ಟೆಂಬರ್‌ನಲ್ಲಿ ಚಾರ್ಜ್‌ಶೀಟ್ ಸಲ್ಲಿಸಲಾಗಿದ್ದು, IPC ಅಡಿಯಲ್ಲಿ ಕೇಸ್ ದಾಖಲಾಗಿದ್ದರೂ BNSS ಅಡಿಯಲ್ಲಿ ತನಿಖೆ ನಡೆಯಬೇಕು ಎಂದು ವಾದಿಸಿದರು. ತಾಂತ್ರಿಕ ಲೋಪದಿಂದಾಗಿ ಪವಿತ್ರಾ ಗೌಡಗೆ ಕಡ್ಡಾಯ ಜಾಮೀನು ನೀಡಬೇಕು ಎಂದು ಕೋರಿದರು. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆದೇಶಗಳನ್ನು ಉಲ್ಲೇಖಿಸಿ ವಾದ ಮಂಡಿಸಿದರು.
ಆದರೆ, ಪ್ರಾಸಿಕ್ಯೂಷನ್ ಪರ ವಕೀಲರು ಇದಕ್ಕೆ ಆಕ್ಷೇಪಿಸಿ, BNSS ಸೆಕ್ಷನ್ 531ರಲ್ಲಿ ಸ್ಪಷ್ಟವಾಗಿದ್ದು, ಜುಲೈ 1, 2024ಕ್ಕಿಂತ ಮುಂಚಿನ ಅಪರಾಧಗಳ ತನಿಖೆ ಹಿಂದಿನ ಕಾನೂನುಗಳ ಅನುಸಾರ ನಡೆಯಬೇಕು ಎಂದು ವಾದಿಸಿದರು. ಪವಿತ್ರಾ ಗೌಡರ ಜಾಮೀನು ಅರ್ಜಿಯನ್ನು CRPC ಅಡಿಯಲ್ಲೇ ಸಲ್ಲಿಸಲಾಗಿದೆ ಎಂದು ಹೇಳಿದರು.
ಇದಲ್ಲದೆ, ದರ್ಶನ್ ಪರ ವಕೀಲರು ಜೈಲಿನಲ್ಲಿ ಮೂಲಭೂತ ಸೌಲಭ್ಯಗಳು ಲಭ್ಯವಿಲ್ಲ ಎಂದು ಆರೋಪಿಸಿ, ತಲೆದಿಂಬು, ಬೆಡ್‌ಶೀಟ್, ಬಟ್ಟೆ ಮತ್ತು ಹಾಸಿಗೆಗಳನ್ನು ನೀಡುವಂತೆ ಅರ್ಜಿ ಸಲ್ಲಿಸಿದರು. ಚಳಿಗಾಲದಲ್ಲಿ ಬೆಡ್‌ಶೀಟ್ ಕೂಡಾ ನೀಡದಿರುವುದು ಅಮಾನವೀಯ ಎಂದು ವಾದಿಸಿದರು. ಜೈಲು ಮ್ಯಾನ್ಯುಯಲ್ ಪ್ರಕಾರ ವಿಚಾರಣಾಧೀನ ಖೈದಿಗಳಿಗೆ ಈ ಸೌಲಭ್ಯಗಳು ನೀಡಬೇಕು ಎಂದು ಕೋರಿದರು.
ಕೋರ್ಟ್ ಈ ಎಲ್ಲಾ ಅರ್ಜಿಗಳ ವಿಚಾರಣೆಯನ್ನು ಮುಂದೂಡಿ, ಸೆಪ್ಟೆಂಬರ್ 2ರಂದು ತೀರ್ಪು ಪ್ರಕಟಿಸಲಿದೆ. ಪವಿತ್ರಾ ಗೌಡರ ಜಾಮೀನು ಅರ್ಜಿ, ದರ್ಶನ್‌ರ ಬಳ್ಳಾರಿ ಶಿಫ್ಟ್ ಅರ್ಜಿ ಮತ್ತು ಸೌಲಭ್ಯಗಳ ಅರ್ಜಿ ಬಗ್ಗೆ ಸೆಪ್ಟೆಂಬರ್ 2ರಂದು ಆದೇಶ ಹೊರಬೀಳಲಿದೆ.