ಹಣದ ದಾಹಕ್ಕಾಗಿ ತಂದೆ ಸಮಾಧಿ ಜೊತೆ ವಿಷ್ಣುವರ್ಧನ್ ಸಮಾಧಿ ಕೂಡ ನೆಲಸಮ ಮಾಡಿಸಿದ್ದ ಬಾಲಣ್ಣ ಕುಟುಂಬಕ್ಕೆ, ಕರ್ನಾಟಕ ಸರ್ಕಾರ ಬಿಗ್ ಶಾಕ್ ನೀಡಿದೆ. ಅಭಿಮಾನ್ ಸ್ಟುಡಿಯೋ ಸೇರಿದಂತೆ ಸುಮಾರು 20 ಎಕರೆ ಜಮೀನನ್ನು ಸರ್ಕಾರ ಅರಣ್ಯ ಭೂಮಿ ಎಂದು ಘೋಷಿಸಿ, ಮುಟ್ಟುಗೋಲು ಹಾಕಿಕೊಂಡಿದೆ. 15 ವರ್ಷಗಳ ವಿಷ್ಣು ಫ್ಯಾನ್ಸ್ ಕಣ್ಣೀರಿಗೆ ನಿಜಕ್ಕೂ ನ್ಯಾಯ ದೊರೆತಂತಾಗಿದೆ. ಈ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
- ‘ಅಭಿಮಾನ್ ಸ್ಟುಡಿಯೋ’ ಮುಟ್ಟುಗೋಲು.. ಜೈಹೋ ದಾದಾ
- 15 ವರ್ಷಗಳ ವಿಷ್ಣು ಅಭಿಮಾನಿಗಳ ಕಣ್ಣೀರಿಗೆ ಸಿಕ್ತು ನ್ಯಾಯ..!
- 1 ಎಕರೆ 14 ಕೋಟಿ 37 ಲಕ್ಷಕ್ಕೆ ಮಾರಾಟ ಮಾಡಲು ಅಗ್ರಿಮೆಂಟ್
- 20ಎಕರೆ ಸರ್ಕಾರದ ವಶಕ್ಕೆ.. ಬಾಲಣ್ಣ ಮೊಮ್ಮಗನಿಗೆ ಮುಖಭಂಗ
ಅಭಿಮಾನ್ ಸ್ಟುಡಿಯೋ, ಕನ್ನಡದ ಮೊಟ್ಟ ಮೊದಲ ಫಿಲ್ಮ್ ಸ್ಟುಡಿಯೋ ಕೂಡ ಹೌದು. 1960ರಲ್ಲಿ ದಿವಂಗತ ಹಿರಿಯನಟ ಬಾಲಕೃಷ್ಣ ಅವರಿಗೆ ಸರ್ಕಾರ, ಸುಮಾರು 20 ಎಕರೆ ಭೂಮಿಯನ್ನ 20 ವರ್ಷಗಳ ಮಟ್ಟಿಗೆ ಲೀಸ್‌ಗೆ ನೀಡಿತ್ತು. ನಂತರ ಅದನ್ನು ಕಲೆಗಾಗಿ ಸದುಪಯೋಗ ಪಡಿಸುವಂತೆ ಹೇಳಿದ ಸರ್ಕಾರ, ಸ್ಟುಡಿಯೋ ನಿರ್ಮಾಣ ಮಾಡುವಂತೆ ಹೇಳಿತ್ತು. ಆದ್ರೆ ಅದ್ಯಾವುದೂ ಆಗಿಲ್ಲ. ಅಲ್ಲಿ ಬಾಲಕೃಷ್ಣ ಅವ್ರ ಸಮಾಧಿ ಜೊತೆ ಸಾಹಸಸಿಂಹ ಡಾ ವಿಷ್ಣವರ್ಧನ್ ಅವರ ಸಮಾಧಿ ಕೂಡ ನೆಲಸಮ ಮಾಡಲಾಗಿದೆ.
ಬಾಲಕೃಷ್ಣ ಅವ್ರ ಮಕ್ಕಳು, ಮೊಮ್ಮಕ್ಕಳ ಹಣದ ದಾಹಕ್ಕೆ ಕೋಟ್ಯಂತರ ಮಂದಿ ಅಭಿಮಾನಿಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಅಭಿನಯ ಭಾರ್ಗವ ವಿಷ್ಣುವರ್ಧನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೌದು, ಸರ್ಕಾರ ನೀಡಿದ ಆ ಜಮೀನನ್ನು ಪರಭಾರೆ ಮಾಡಬಾರದು ಅಂತ ಕಾನೂನಿದ್ದರೂ ಸಹ, ನಿಯಮಬಾಹಿರವಾಗಿ 12 ಎಕರೆ ಜಮೀನು ಮಾರಾಟ ಮಾಡಲು ಅಗ್ರಿಮೆಂಟ್ ಮಾಡಿಕೊಂಡು, ಅಡ್ವಾನ್ಸ್ ಪಡೆದಿದ್ರು ಬಾಲಣ್ಣ ಮೊಮ್ಮಗ ಕಾರ್ತಿಕ್. ಒಂದು ಎಕರೆಗೆ 14 ಕೋಟಿ 37 ಲಕ್ಷ 15 ಸಾವಿರ ರೂಪಾಯಿಯಂತೆ ಸುಮಾರು 12 ಎಕರೆಯನ್ನ ನುಂಗಲು ಸ್ಕೆಚ್ ಹಾಕಿದ್ರು.
ಕೋರ್ಟ್, ಕಾನೂನು, ವಿಷ್ಣು ಕುಟುಂಬ, ಅಸಂಖ್ಯಾತ ಅಭಿಮಾನಿಗಳನ್ನ ತಪ್ಪು ದಾರಿ ಹಿಡಿಸೋ ಕಾರ್ಯ ಮಾಡಿದ್ರು ಕಾರ್ತಿಕ್. ಆದ್ರೀಗ ಎಲ್ಲಕ್ಕೂ ತಾರ್ಕಿಕ ಅಂತ್ಯ ಸಿಗಲಿದೆ. ಸರ್ಕಾರ ಈ ವಿಚಾರದಲ್ಲಿ ಕೊನೆಗೂ ಎಚ್ಚೆತ್ತುಕೊಂಡಿದೆ. ಬಾಲಣ್ಣಗೆ ನೀಡಿದ್ದ ಆ 20 ಎಕರೆ ಜಮೀನನ್ನು ಮುಟ್ಟುಗೋಲು ಹಾಕಿಕೊಂಡಿದೆ. ಹೀಗಂತ ಆದೇಶ ಕೂಡ ಹೊರಡಿಸಿದೆ.
ಅದು ಅರಣ್ಯ ಭೂಮಿಯಾಗಿದ್ದು, ಕಾನೂನು ಬಾಹಿರವಾಗಿ ಮಾರಾಟ ಮಾಡಿದ್ದು ತಪ್ಪು. ಕೂಡಲೇ ಜಮೀನನ್ನು ವಶಕ್ಕೆ ತೆಗೆದುಕೊಳ್ಳಲಾಗುವುದು ಎಂದು ಡಿಸಿ ಆರ್ಡರ್ ಪಾಸ್ ಮಾಡಿದ್ದಾರೆ. ಇದು ವಿಷ್ಣು ಅವರ ಅಭಿಮಾನಿಗಳು ಸೇರಿದಂತೆ, ಅದಕ್ಕಾಗಿ ದಶಕದಿಂದ ಹೋರಾಟ ಮಾಡ್ತಿದ್ದ ವೀರಕಪುತ್ರ ಶ್ರೀನಿವಾಸ್, ರಾಜು ಗೌಡರಿಗೆ ಖುಷಿ ಕೊಟ್ಟಿದೆ. ಸರ್ಕಾರದ ಈ ನಿಲುವು, ಅತ್ತ ವಿಷ್ಣುದಾದಾ ಅಳಿಯ ಅನಿರುದ್ದ್ ಕೂಡ ಖುಷಿ ವ್ಯಕ್ತಪಡಿಸಿ, ಅಲ್ಲಿ 10 ಗುಂಟೆ ಜಾಗ ನೀಡಲು ಸರ್ಕಾರಕ್ಕೆ ಮನವಿ ಮಾಡ್ತೀವಿ ಎಂದಿದ್ದಾರೆ.
ಹಣಕ್ಕಾಗಿ ತಾತನ ಸಮಾಧಿಯನ್ನ ಕೂಡ ಕೆಡವಿ, ಅದ್ರಿಂದ ಬರೋ ದುಡ್ಡಿಂದ ಜೀವನ ನಡೆಸಲು ಸಜ್ಜಾಗಿದ್ದ ಬಾಲಣ್ಣನ ಮೊಮ್ಮಗ ಕಾರ್ತಿಕ್‌ಗೆ ಭಾರೀ ಮುಖಭಂಗವಾಗಿದೆ. 5 ಎಕರೆ ಪಾಲು ಬೇಕು ಅಂತ ಒದ್ದಾಡ್ತಿದ್ದ ಬಾಲಣ್ಣ ಪುತ್ರಿ ಗೀತಾಬಾಲಿಗೂ ಇದು ಶಾಕ್ ನೀಡಿದೆ. ಮಗಧೀರ ಚಿತ್ರದಲ್ಲಿರೋ ಡೈಲಾಗ್ ಪ್ರಸ್ತುತ ನೆನಪಿಸಿಕೊಳ್ಳಬೇಕಾದ ಅಗತ್ಯವಿದೆ. ನನಗೆ ಸಿಗದೇ ಇರೋದು ಬೇರೆ ಯಾರಿಗೂ ಸಿಗೋಕೆ ಬಿಡಲ್ಲ ಅನ್ನೋ ವಿಲನ್ ಮಾತಿನಂತೆ, ವಿಷ್ಣು ಸಮಾಧಿಗೆ ಸಿಗದೇ ಇರೋ ಜಾಗ ಬಾಲಣ್ಣ ಕುಟುಂಬಕ್ಕೆ ಯಾಕೆ ಸಿಗಬೇಕು ಅಲ್ಲವೇ..?
ಅಭಿಮಾನ್ ಸ್ಟುಡಿಯೋಗೆ ಅಡಿಪಾಯ ಹಾಕಿ, ಗಣಪತಿ ಆಲಯದ ಪ್ರತಿಷ್ಠಾಪನಾ ಪೂಜೆಗೆ ಕುಳಿತು, ಅದನ್ನ ಸಾಕಾರ ಮಾಡಿದ್ದು ಇದೇ ಡಾ. ವಿಷ್ಣುವರ್ಧನ್ ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ. ಆದ್ರೀಗ ಸುದೀಪ್ ಅರ್ಧ ಎಕರೆ ಜಾಗ ಖರೀದಿಸಿದ್ದು, ಈಗ ಈ ಅಭಿಮಾನ್ ಸ್ಟುಡಿಯೋ ಜಮೀನನ್ನ ಸರ್ಕಾರವೇ ವಶಕ್ಕೆ ಪಡೆದಿರೋದ್ರಿಂದ, ವಿಷ್ಣುರನ್ನ ಅಂತ್ಯಕ್ರಿಯೆ ಮಾಡಿದ ಜಾಗದಲ್ಲೇ ಪುಣ್ಯಸ್ಮಾರಕ ನಿರ್ಮಿಸಿದ್ರೆ ಅದ್ರ ಪಾವಿತ್ರ್ಯತೆ ಉಳಿಯಲಿದೆ. ಈ ವಿಚಾರದಲ್ಲಿ ಸರ್ಕಾರದ ಈ ಮಹತ್ವದ ನಿರ್ಧಾರಕ್ಕೆ ಕನ್ನಡಿಗರು ಸಿಕ್ಕಾಪಟ್ಟೆ ಖುಷಿ ಪಡ್ತಿದ್ದಾರೆ.