ಬೆಂಗಳೂರು: ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಜಗದೀಶ್ ಅಲಿಯಾಸ್ ಜಗ್ಗನನ್ನು ಸಿಐಡಿ ಅಧಿಕಾರಿಗಳು ದೆಹಲಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಈ ಕೊಲೆ ಪ್ರಕರಣದಲ್ಲಿ ಜಗ್ಗ ಎ1 ಆರೋಪಿಯಾಗಿದ್ದು, ಕೃತ್ಯದ ನಂತರ ವಿದೇಶದಲ್ಲಿ ತಲೆಮರೆಸಿಕೊಂಡಿದ್ದನು. ಸಿಐಡಿಯ ಎಸ್‌ಪಿ ವೆಂಕಟೇಶ್ ನೇತೃತ್ವದ ತಂಡವು ಜಗ್ಗನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಜುಲೈ 15ರಂದು ಬೆಂಗಳೂರಿನ ಹಲಸೂರು ಕೆರೆ ಬಳಿ ಬಿಕ್ಲು ಶಿವನನ್ನು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆಗೈಯಲಾಗಿತ್ತು. ಈ ಕೃತ್ಯದ ಹಿಂದೆ ಜಮೀನು ವಿವಾದವೇ ಕಾರಣ ಎಂದು ಮೃತನ ತಾಯಿ ದೂರಿನಲ್ಲಿ ತಿಳಿಸಿದ್ದರು. ಈ ಸಂಬಂಧ ಭಾರತಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಐವರು ಆರೋಪಿಗಳ ವಿರುದ್ಧ ಕೇಸ್ ದಾಖಲಾಗಿತ್ತು. ಆರೋಪಿಗಳ ಪೈಕಿ ಜಗದೀಶ್ ಅಲಿಯಾಸ್ ಜಗ್ಗ (ಎ1), ಕಿರಣ್ (ಎ2), ವಿಮಲ್ (ಎ3), ಅನಿಲ್ (ಎ4) ಮತ್ತು ಕೆ.ಆರ್. ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್ (ಎ5) ಸೇರಿದ್ದಾರೆ.
ಕೊಲೆಯಾದ ನಂತರ ಜಗ್ಗನಿಗಾಗಿ ಸಿಐಡಿ ತೀವ್ರ ಹುಡುಕಾಟ ನಡೆಸಿತ್ತು. ಆತ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಮಾಹಿತಿ ಲಭಿಸಿದ್ದರಿಂದ, ಅಂತರರಾಷ್ಟ್ರೀಯ ಪೊಲೀಸ್ ಸಂಸ್ಥೆ ಇಂಟರ್‌ಪೋಲ್ ಮೂಲಕ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಲಾಗಿತ್ತು. ಈ ನೋಟಿಸ್‌ನಿಂದ ಜಗ್ಗನ ಚಲನವಲನಗಳನ್ನು ಗಮನಿಸಿದ ಸಿಐಡಿ, ದೆಹಲಿಯ ವಿಮಾನ ನಿಲ್ದಾಣದಲ್ಲಿ ಆತನನ್ನು ಬಂಧಿಸಿತ್ತು. ಸದ್ಯ ಜಗ್ಗನನ್ನು ಬೆಂಗಳೂರಿಗೆ ಕರೆತರಲಾಗುತ್ತಿದ್ದು, ಮುಂದಿನ ವಿಚಾರಣೆಗೆ ಒಳಪಡಿಸಲಾಗುವುದು.





