ಮಂಗಳೂರು: ಚಿನ್ನಯ್ಯನ ಬುರುಡೆ ಎಲ್ಲಿಂದ ಬಂತು ಎಂಬ ಯಕ್ಷ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ವಿಶೇಷ ತನಿಖಾ ದಳ (SIT) 10 ದಿನಗಳ ಕಾಲ ಚಿನ್ನಯ್ಯನನ್ನು ಕಸ್ಟಡಿಯಲ್ಲಿ ವಿಚಾರಣೆಗೆ ಒಳಪಡಿಸಿ, ಈ ಪ್ರಕರಣದ ಹಿಂದಿನ ಸ್ಫೋಟಕ ರಹಸ್ಯಗಳನ್ನು ಬಯಲಿಗೆಳೆಯುತ್ತಿದೆ. ಚಿನ್ನಯ್ಯ ತಂದಿದ್ದ ಬುರುಡೆ ಧರ್ಮಸ್ಥಳಕ್ಕಿಂತ ಮೊದಲೇ ದೆಹಲಿಯನ್ನು ಕಂಡಿತ್ತು ಎಂಬ ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ.
ಹೌದು, ಚಿನ್ನಯ್ಯನ ಗ್ಯಾಂಗ್ ಈ ಬುರುಡೆಯನ್ನು ದೆಹಲಿಗೆ ಕೊಂಡೊಯ್ದು, ಅಲ್ಲಿ ಪ್ರತಿಷ್ಠಿತ ವ್ಯಕ್ತಿಗಳನ್ನು ಭೇಟಿಯಾಗಿ, ಬುರುಡೆಯನ್ನು ಪ್ರದರ್ಶಿಸಿತ್ತು. ಈ ಭೇಟಿಯ ಸಂದರ್ಭದಲ್ಲಿ ಬುರುಡೆಯ ಕತೆಯನ್ನು ವಿವರಿಸಿ, ಒಂದು ಮೆಗಾ ಡೀಲ್ ಕೂಡ ನಡೆದಿತ್ತು ಎಂಬ ರಹಸ್ಯ ಈಗ ತಿಳಿದುಬಂದಿದೆ. ಈ ಷಡ್ಯಂತ್ರದ ಹಿಂದಿನ ಗುಪ್ತ ಒಡಂಬಡಿಕೆಗಳು SIT ತನಿಖೆಯಿಂದ ಒಂದೊಂದೇ ಬಯಲಿಗೆ ಬರುತ್ತಿವೆ.
ವಿಧಿವಿಜ್ಞಾನ ಪ್ರಯೋಗಾಲಯದ (FSL) ವರದಿಯು ಈ ಬುರುಡೆಯ ಮಣ್ಣು ಧರ್ಮಸ್ಥಳದ ಪರಿಸರದ್ದಲ್ಲ ಎಂಬುದನ್ನು ದೃಢಪಡಿಸಿದೆ. ಈ ಸತ್ಯ ದೊರೆತ ಕೂಡಲೇ SIT ಅಧಿಕಾರಿಗಳು ಚಿನ್ನಯ್ಯನನ್ನು ತಮ್ಮ ಶೈಲಿಯಲ್ಲಿ ವಿಚಾರಣೆಗೆ ಒಳಪಡಿಸಿದರು. ವಿಚಾರಣೆಯ ಸಂದರ್ಭದಲ್ಲಿ ಚಿನ್ನಯ್ಯ ಬಾಯಿಬಿಟ್ಟಿದ್ದು, “ನಾನು ಈ ಬುರುಡೆಯನ್ನು ಬೇರೆ ಜಾಗದಿಂದ ತಂದಿದ್ದೇನೆ. ಬೇರೆಯವರ ಸೂಚನೆಯಂತೆ ಈ ಪ್ರಕರಣಕ್ಕೆ ಬಂದಿದ್ದೇನೆ” ಎಂದು ತಿಳಿಸಿದ್ದಾನೆ. ಈ ಹೇಳಿಕೆಯಿಂದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ಚಿನ್ನಯ್ಯ ಈ ಹಿಂದೆ 17 ವಿಭಿನ್ನ ಜಾಗಗಳ ಹೆಸರನ್ನು ಉಲ್ಲೇಖಿಸಿದ್ದ. ಒಮ್ಮೆ ಬೋಳಿಯಾರ್, ಮತ್ತೊಮ್ಮೆ ಕಲ್ಲೇರಿ, ಇನ್ನೊಮ್ಮೆ ಬೇರೆ ಜಾಗಗಳನ್ನು ಹೇಳುತ್ತಾ ತನಿಖಾ ತಂಡವನ್ನು ಗೊಂದಲಕ್ಕೀಡು ಮಾಡಿದ್ದ. ಆದರೆ FSL ವರದಿಯಿಂದ ಈ ಬುರುಡೆ ಧರ್ಮಸ್ಥಳದ್ದಲ್ಲ ಎಂಬುದು ಸ್ಪಷ್ಟವಾದಾಗ, ಚಿನ್ನಯ್ಯನ ಗೊಂದಲದ ತಂತ್ರ ವಿಫಲವಾಯಿತು.
ಚಿನ್ನಯ್ಯ ಈ ಬುರುಡೆಯನ್ನು ಇಟ್ಟುಕೊಂಡು ನ್ಯಾಯಾಲಯದಿಂದ ಸಾಕ್ಷಿ ಸಂರಕ್ಷಣಾ ಕಾಯ್ದೆಯಡಿ ಭದ್ರತೆ ಪಡೆದುಕೊಂಡಿದ್ದ. ಈ ಕಾರಣಕ್ಕೆ SIT ಕೂಡ ಆತನ ಮಾತಿಗೆ ತಕ್ಕಂತೆ ಕಾರ್ಯನಿರ್ವಹಿಸುತ್ತಿತ್ತು. ಚಿನ್ನಯ್ಯನ ಹೇಳಿಕೆಗಳನ್ನು ಆಧರಿಸಿ SIT 17 ಜಾಗಗಳಲ್ಲಿ ಗುಂಡಿ ತೋಡಿದರೂ, ಬುರುಡೆಯ ಬಗ್ಗೆ ಯಾವುದೇ ಗುರುತು ಸಿಗಲಿಲ್ಲ. , ಚಿನ್ನಯ್ಯನ ಬುರುಡೆಯ ಹಿಂದೆ ದೊಡ್ಡ ಷಡ್ಯಂತ್ರವಿದೆ ಎಂದು ತಿಳಿದುಬಂದಿದೆ.
ಚಿನ್ನಯ್ಯನ ಗ್ಯಾಂಗ್ ಈ ಬುರುಡೆಯನ್ನು ದೆಹಲಿಗೆ ಕೊಂಡೊಯ್ದು, ಅಲ್ಲಿ ಪ್ರಮುಖ ವ್ಯಕ್ತಿಗಳಿಗೆ ತೋರಿಸಿತ್ತು. ಈ ಭೇಟಿಯಲ್ಲಿ ಬುರುಡೆಯ ಕತೆಯನ್ನು ವಿವರಿಸಲಾಗಿತ್ತು. ಈ ಒಡಂಬಡಿಕೆಯ ಹಿಂದೆ ದೊಡ್ಡ ಮಟ್ಟದ ಆರ್ಥಿಕ ಒಪ್ಪಂದವೂ ನಡೆದಿತ್ತು ಎಂಬ ಮಾಹಿತಿ ಈಗ ಲಭ್ಯವಾಗಿದೆ. ಈ ಒಡಂಬಡಿಕೆಯಲ್ಲಿ ಯಾರೆಲ್ಲ ಭಾಗಿಯಾಗಿದ್ದರು, ಯಾವ ಉದ್ದೇಶಕ್ಕಾಗಿ ಈ ಷಡ್ಯಂತ್ರ ರೂಪಿಸಲಾಗಿತ್ತು ಎಂಬುದರ ಬಗ್ಗೆ SIT ತನಿಖೆ ತೀವ್ರಗೊಳಿಸಿದೆ.
SIT ಈಗ ಚಿನ್ನಯ್ಯನ ಹೇಳಿಕೆಗಳನ್ನು ಆಧರಿಸಿ ದೆಹಲಿಯ ಸಂಪರ್ಕಗಳನ್ನು ಗುರುತಿಸುವ ಕೆಲಸದಲ್ಲಿದೆ. ಈ ಪ್ರಕರಣದಲ್ಲಿ ಭಾಗಿಯಾದ ಇತರ ಆರೋಪಿಗಳನ್ನು ಗುರುತಿಸಲು ತೀವ್ರ ಪ್ರಯತ್ನ ನಡೆಯುತ್ತಿದೆ.