ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಮೆಘಾ ಗ್ರಾಮದಲ್ಲಿ ಡೈನೋಸರ್‌ಗೆ ಸಂಬಂಧಿಸಿದೆ ಎಂದು ಶಂಕಿಸಲಾದ ಮೂಳೆಗಳು ಪತ್ತೆಯಾಗಿವೆ. ಗ್ರಾಮದ ಕೆರೆಯ ಬಳಿ ಕಾಮಗಾರಿಯ ವೇಳೆ ಸ್ಥಳೀಯ ಕಾರ್ಮಿಕರು ಈ ಅಸಾಮಾನ್ಯ ಮೂಳೆಗಳನ್ನು ಕಂಡುಕೊಂಡಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಕುತೂಹಲ ಮೂಡಿಸಿದ್ದು, ತಜ್ಞರ ತಂಡವು ಉತ್ಖನನ ಕಾರ್ಯವನ್ನು ಆರಂಭಿಸಿದೆ.
ಮೆಘಾ ಗ್ರಾಮದ ಕೆರೆಯ ಬಳಿ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕರ ಗಮನಕ್ಕೆ ವಿಚಿತ್ರ ಆಕಾರದ ವಸ್ತುವೊಂದು ಕಣ್ಣಿಗೆ ಬಿದ್ದಿತ್ತು. ಹತ್ತಿರದಿಂದ ಪರಿಶೀಲಿಸಿದಾಗ, ಇದು ಪ್ರಾಣಿಯ ಮೂಳೆಯಂತೆ ಕಾಣಿಸಿತ್ತು. ಸ್ಥಳೀಯರು ಈ ಮೂಳೆಯನ್ನು ಡೈನೋಸರ್‌ಗೆ ಸಂಬಂಧಿಸಿದೆ ಎಂದು ಶಂಕಿಸಿ, ಜಿಲ್ಲಾಧಿಕಾರಿ ಕಚೇರಿಗೆ ಮಾಹಿತಿ ನೀಡಿದರು. ತಕ್ಷಣವೇ ತಹಶೀಲ್ದಾರ್ ಸೇರಿದಂತೆ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಪ್ರಾಥಮಿಕ ತಪಾಸಣೆಯಿಂದ ಈ ಮೂಳೆಗಳು ಡೈನೋಸರ್ ಕಾಲದವು ಎಂದು ಅಂದಾಜಿಸಲಾಗಿದೆ. ಆದರೆ ಇದನ್ನು ಖಚಿತಪಡಿಸಲು ಮುಂದಿನ ಸಂಶೋಧನೆ ಅಗತ್ಯವಿದೆ.
ಈ ಆವಿಷ್ಕಾರದ ಕುರಿತು ಭಾರತೀಯ ಪುರಾತತ್ವ ಇಲಾಖೆಗೆ ಮಾಹಿತಿ ರವಾನೆಯಾಗಿದೆ. ಜೊತೆಗೆ, ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾದ ಸಂಶೋಧಕರಿಗೂ ವಿವರಗಳನ್ನು ತಿಳಿಸಲಾಗಿದೆ. ಜಿಯೋಲಾಜಿಕಲ್ ವಿಭಾಗದ ತಜ್ಞ ನಾರಾಯಣ ದಾಸ್ ಸ್ಥಳಕ್ಕೆ ಭೇಟಿ ನೀಡಿ, ಉತ್ಖನನ ಕಾರ್ಯವನ್ನು ಆರಂಭಿಸಿದ್ದಾರೆ. “ಮೇಲ್ನೋಟಕ್ಕೆ ಈ ಮೂಳೆಗಳು ಡೈನೋಸರ್‌ನವು ಎಂದು ಕಾಣುತ್ತವೆ. ಆದರೆ, ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿದ ಬಳಿಕವೇ ಇದರ ನಿಖರತೆ ದೃಢಪಡಲಿದೆ,” ಎಂದು ಅವರು ತಿಳಿಸಿದ್ದಾರೆ.
#WATCH | Jaisalmer, Rajasthan: Vertebrate fossils, potentially related to the Jurassic Era, found in Megha Village of Fatehgarh sub-division. pic.twitter.com/6KsZb9Q7NN
— ANI (@ANI) August 21, 2025
ಭಾರತದಲ್ಲಿ ಡೈನೋಸರ್‌ಗಳ ಇತಿಹಾಸಕ್ಕೆ ಸಂಬಂಧಿಸಿದಂತೆ ಇಂತಹ ಸ್ಪಷ್ಟ ಕುರುಹುಗಳು ಇದಕ್ಕೂ ಮುನ್ನ ಪತ್ತೆಯಾಗಿರಲಿಲ್ಲ. ಈ ಮೂಳೆಗಳು ಯಾವ ಪ್ರಾಣಿಗಳದ್ದ, ಎಷ್ಟು ವರ್ಷ ಹಳೆಯದು ಎಂಬುದನ್ನು ಪ್ರಯೋಗಾಲಯ ಪರೀಕ್ಷೆಯಿಂದ ಖಚಿತಪಡಿಸಲಾಗುವುದು. ಈ ಆವಿಷ್ಕಾರವು ಜಗತ್ತಿನ ಪ್ರಾಣಿ ಸಂಕುಲದ ಉಗಮ ಮತ್ತು ನಾಶದ ಕುರಿತು ಹೊಸ ಮಾಹಿತಿಗಳನ್ನು ಒದಗಿಸಬಹುದು.





