ಬೆಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ತಮಿಳುನಾಡಿನ ತಿರುವಳ್ಳೂರ್ ಕಾಂಗ್ರೆಸ್ ಸಂಸದ ಸಸಿಕಾಂತ್ ಸೆಂಥಿಲ್ ಅವರನ್ನು ಪ್ರಕರಣದ ರೂವಾರಿ ಎಂದು ಆರೋಪಿಸಿದ್ದರು. ಈ ಆರೋಪಕ್ಕೆ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಸಸಿಕಾಂತ್ ಸೆಂಥಿಲ್, ರೆಡ್ಡಿಯವರ ಆರೋಪಗಳನ್ನು “ಕಟ್ಟುಕತೆ” ಎಂದು ಕರೆದು ತಿರಸ್ಕರಿಸಿದ್ದಾರೆ.
ಸೆಂಥಿಲ್ ಹೇಳಿಕೆಯಲ್ಲಿ, “ರೆಡ್ಡಿಯವರ ಆರೋಪ ಕೇಳಿ ನಗು ಬರುತ್ತಿದೆ. ಈ ಆರೋಪಗಳು ಕೇವಲ ಊಹಾಪೋಹಗಳು. ನಾನು ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿ ಆರು ವರ್ಷಗಳಾಗಿವೆ. ಈಗ ನಾನು ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಬಳ್ಳಾರಿಯಲ್ಲಿ ಕರ್ತವ್ಯದಲ್ಲಿದ್ದಾಗ ರೆಡ್ಡಿಯವರ ಬಂಧನವಾಗಿತ್ತು, ಆಗ ಮಾತ್ರ ಅವರನ್ನು ಭೇಟಿಯಾಗಿದ್ದೆ. ಈ ಪ್ರಕರಣದ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ, ಮತ್ತು ರಾಜ್ಯ ಸರ್ಕಾರಕ್ಕೆ ಯಾವುದೇ ಒತ್ತಡ ಹೇರಲು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಜನಾರ್ದನ ರೆಡ್ಡಿ ತಮ್ಮ ಆರೋಪಗಳನ್ನು ಮಂಗಳವಾರ ಮಾಡಿದ್ದು, ಧರ್ಮಸ್ಥಳದ ವಿರುದ್ಧದ ಷಡ್ಯಂತ್ರದ ಹಿಂದೆ ಸಸಿಕಾಂತ್ ಸೆಂಥಿಲ್ ಕೈವಾಡವಿದೆ ಎಂದು ಆರೋಪಿಸಿದ್ದರು. “ಕರ್ನಾಟಕ ಕಾಂಗ್ರೆಸ್ ಸರ್ಕಾರವು ಸೆಂಥಿಲ್ ಅವರ ಒತ್ತಡದಿಂದ ಎಸ್‌ಐಟಿ ರಚಿಸಿದೆ. ಅನಾಮಿಕ ಮಾಸ್ಕ್ ಮ್ಯಾನ್ ತಮಿಳುನಾಡಿನವನಾಗಿದ್ದು, ಸೆಂಥಿಲ್ ಅವರ ಆಪ್ತನಾಗಿದ್ದಾನೆ” ಎಂದು ರೆಡ್ಡಿ ದೂಷಿಸಿದ್ದರು. ತಮ್ಮ ಆರೋಪಗಳನ್ನು ಸಾಬೀತುಪಡಿಸಲು ಸಿದ್ಧರಿರುವುದಾಗಿಯೂ ರೆಡ್ಡಿ ಹೇಳಿದ್ದರು.
ಈ ಆರೋಪಗಳಿಗೆ ತಿರುಗೇಟು ನೀಡಿರುವ ಸೆಂಥಿಲ್, ತಮ್ಮ ವಿರುದ್ಧದ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಈ ಪ್ರಕರಣದ ತನಿಖೆಯನ್ನು ಎಸ್‌ಐಟಿ ಮುಂದುವರಿಸುತ್ತಿದ್ದು, ಇದರ ಕುರಿತು ಹೆಚ್ಚಿನ ವಿವರಗಳು ಶೀಘ್ರದಲ್ಲಿ ಬಹಿರಂಗಗೊಳ್ಳುವ ಸಾಧ್ಯತೆಯಿದೆ.





