ಲಂಡನ್ನ ಐತಿಹಾಸಿಕ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ 22 ರನ್ಗಳಿಂದ ಸೋಲು ಕಂಡಿದೆ. ರವೀಂದ್ರ ಜಡೇಜಾ ಅವರ ಶ್ರಮದ ಏಕಾಂಗಿ ಹೋರಾಟವೂ ತಂಡವನ್ನು ಗೆಲುವಿನ ದಡ ಸೇರಿಸಲಾಗಲಿಲ್ಲ. ಇಂಗ್ಲೆಂಡ್ನ ಜೋಫ್ರಾ ಆರ್ಚರ್ ಮತ್ತು ಬೆನ್ ಸ್ಟೋಕ್ಸ್ ಅವರ ಮಾರಕ ಬೌಲಿಂಗ್ ದಾಳಿಯ ಎದುರು ಭಾರತದ ಬ್ಯಾಟಿಂಗ್ ಶರಣಾಯಿತು. ಈ ಗೆಲುವಿನೊಂದಿಗೆ ಇಂಗ್ಲೆಂಡ್ ತಂಡ ಸರಣಿಯಲ್ಲಿ 2-1ರ ಮುನ್ನಡೆಯನ್ನು ಕಾಯ್ದುಕೊಂಡಿದೆ, ಭಾರತದ ಸರಣಿ ಗೆಲುವಿನ ಕನಸು ಭಗ್ನವಾಯಿತು.
ಸೋಮವಾರ ಬೆಳಿಗ್ಗೆ ಐದನೇ ದಿನದಾಟವನ್ನು 4 ವಿಕೆಟ್ ಕಳೆದುಕೊಂಡು 58 ರನ್ಗಳಿಂದ ಆರಂಭಿಸಿದ ಭಾರತಕ್ಕೆ ಕಠಿಣ ವಾತಾವರಣ ಕಾದಿತ್ತು. ಮೋಡ ಕವಿದ ಆಕಾಶದಡಿ ಬ್ಯಾಟಿಂಗ್ ಕಷ್ಟಕರವಾಗಿತ್ತು. ರಿಷಭ್ ಪಂತ್ 12 ಎಸೆತಗಳಲ್ಲಿ 9 ರನ್ ಗಳಿಸಿ ಆರ್ಚರ್ನ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಕೆಎಲ್ ರಾಹುಲ್ 58 ಎಸೆತಗಳಲ್ಲಿ 33 ರನ್ ಗಳಿಸಿ ಭರವಸೆ ಮೂಡಿಸಿದ್ದರೂ, ಸ್ಟೋಕ್ಸ್ನ ಎಸೆತದಲ್ಲಿ ಎಲ್ಬಿಡಬ್ಲ್ಯು ಆಗಿ ನಿರಾಸೆ ಮೂಡಿಸಿದರು. ವಾಷಿಂಗ್ಟನ್ ಸುಂದರ್ ಡಕ್ಔಟ್ ಆಗಿ ಆರ್ಚರ್ಗೆ ಕ್ಯಾಚ್ ಕೊಟ್ಟರು. ಇದರಿಂದ ಭಾರತ 82 ರನ್ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಎಂಟನೇ ವಿಕೆಟ್ಗೆ ಜೊತೆಯಾದ ರವೀಂದ್ರ ಜಡೇಜಾ ಮತ್ತು ನಿತೀಶ್ ಕುಮಾರ್ ರೆಡ್ಡಿ 30 ರನ್ಗಳ ಜೊತೆಯಾಟವಾಡಿ ಭರವಸೆಯನ್ನು ಚಿಗುರಿಸಿದರು. ನಿತೀಶ್ 53 ಎಸೆತಗಳಲ್ಲಿ 13 ರನ್ ಗಳಿಸಿದರೂ, ಕ್ರಿಸ್ ವೋಕ್ಸ್ ಎಸೆತದಲ್ಲಿ ವಿಕೆಟ್ ಕಳೆದುಕೊಂಡರು. ಇದರೊಂದಿಗೆ ಭಾರತದ ಗೆಲುವಿನ ಆಸೆ ಕ್ಷೀಣಿಸಿತ್ತು. ಆದರೆ, ಜಡೇಜಾ ಜೊತೆಗೆ ಜಸ್ಪ್ರೀತ್ ಬುಮ್ರಾ 9ನೇ ವಿಕೆಟ್ಗೆ 35 ರನ್ಗಳ ಜೊತೆಯಾಟವಾಡಿದರು. ಬುಮ್ರಾ 54 ಎಸೆತಗಳಲ್ಲಿ 5 ರನ್ ಗಳಿಸಿ ಸ್ಟೋಕ್ಸ್ಗೆ ವಿಕೆಟ್ ಒಪ್ಪಿಸಿದರು. ಕೊನೆಯ ವಿಕೆಟ್ನಲ್ಲಿ ಮೊಹಮ್ಮದ್ ಸಿರಾಜ್ ಜೊತೆ ಜಡೇಜಾ ಕೊನೆಯವರೆಗೂ ಹೋರಾಡಿದರೂ, ಶೋಯೆಬ್ ಬಷೀರ್ ಎಸೆತದಲ್ಲಿ ಸಿರಾಜ್ ಔಟ್ ಆಗಿ ಭಾರತ ಸೋಲು ಕಂಡಿತ್ತು.
ರವೀಂದ್ರ ಜಡೇಜಾ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡಿದರು. ಕಠಿಣ ಪರಿಸ್ಥಿತಿಯಲ್ಲಿಯೂ 181 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 4 ಬೌಂಡರಿಗಳೊಂದಿಗೆ ಅಜೇಯ 61 ರನ್ ಗಳಿಸಿದರು. ಆದರೆ, ಕೆಎಲ್ ರಾಹುಲ್ (33 ರನ್) ಬಿಟ್ಟರೆ ಯಾವ ಬ್ಯಾಟ್ಸ್ಮನ್ 20ರ ಗಡಿಯನ್ನೂ ದಾಟಲಿಲ್ಲ. ಇಂಗ್ಲೆಂಡ್ನ ಬೌಲಿಂಗ್ ದಾಳಿಯ ಒತ್ತಡದ ಎದುರು ಭಾರತದ ಬ್ಯಾಟಿಂಗ್ ಕುಸಿಯಿತು. ಜಡೇಜಾ ಒಬ್ಬರೇ ಇಂಗ್ಲಿಷ್ ಬೌಲರ್ಗಳಿಗೆ ತಲೆನೋವಾದರು. ಆದರೆ, ಇತರರಿಂದ ಬೆಂಬಲ ಸಿಗದ ಕಾರಣ ಭಾರತ ಕೇವಲ 22 ರನ್ಗಳಿಂದ ಸೋಲನ್ನು ಒಪ್ಪಿಕೊಂಡಿತ್ತು.





