ಹೈದರಾಬಾದ್: ತೆಲಂಗಾಣದ ರಾಜಧಾನಿಯಲ್ಲಿ ಮತ್ತೆ ಗುಂಡಿನ ಶಬ್ದ ಕೇಳಿಬಂದಿದೆ. ಎಂಎಲ್‌ಸಿ ಮಲ್ಲಣ್ಣ ಅವರ ಗನ್‌ಮ್ಯಾನ್, ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಕಾರ್ಯಕರ್ತರ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆಯಿಂದ ನಗರದಲ್ಲಿ ನಡೆದಿದೆ. ಈ ಘಟನೆಯಲ್ಲಿ ಐದು ರೌಂಡ್ ಗುಂಡುಗಳನ್ನು ಹಾರಿಸಲಾಗಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಈ ಘಟನೆಗೆ ಮೂಲ ಕಾರಣವೆಂದರೆ, ಎಂಎಲ್‌ಸಿ ಮಲ್ಲಣ್ಣ ಅವರು ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ. ಕವಿತಾ ಅವರ ಬಗ್ಗೆ ನೀಡಿದ ಆಕ್ಷೇಪಾರ್ಹ ಹೇಳಿಕೆ ಎಮದು ತಿಳಿದು ಬಂದಿದೆ. ಈ ಹೇಳಿಕೆಯನ್ನು ಖಂಡಿಸಲು ಬಿಆರ್‌ಎಸ್ ಕಾರ್ಯಕರ್ತರು ತೀವ್ರ ಪ್ರತಿಭಟನೆಗೆ ಇಳಿದಿದ್ದರು. ಪ್ರತಿಭಟನೆ ನಡೆಸಿ, ಎಂಎಲ್‌ಸಿ ಮಲ್ಲಣ್ಣ ಅವರ ಕಚೇರಿಯ ಮೇಲೆ ದಾಳಿ ನಡೆಸಲಾಯಿತು. ಕಾರ್ಯಕರ್ತರು ಕಚೇರಿಯ ಬಾಗಿಲನ್ನು ಮುರಿದು, ಒಳಗಿನ ಪೀಠೋಪಕರಣಗಳನ್ನು ಧ್ವಂಸಗೊಳಿಸಿದರು. ಈ ಗಲಭೆಯ ಸಂದರ್ಭದಲ್ಲಿ, ಎಂಎಲ್‌ಸಿ ಅವರ ಗನ್‌ಮ್ಯಾನ್ ಕಾರ್ಯಕರ್ತರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಗುಂಡಿನ ದಾಳಿಯಿಂದ ಘಟನಾ ಸ್ಥಳದಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಯಿತು. ಪ್ರತಿಭಟನಾಕಾರರ ಪೈಕಿ ಕೆಲವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳೀಯ ಪೊಲೀಸರು ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಈ ಘಟನೆಯ ಬಗ್ಗೆ ತನಿಖೆ ಆರಂಭವಾಗಿದ್ದು, ಗನ್‌ಮ್ಯಾನ್‌ನ ದಾಳಿ ಹಿಂದಿನ ನಿಖರ ಕಾರಣಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಗುಂಡಿನ ದಾಳಿಯು ಆತ್ಮರಕ್ಷಣೆಗಾಗಿಯೇ ಆಗಿತ್ತೇ ಅಥವಾ ಇದರ ಹಿಂದೆ ಬೇರೆ ಉದ್ದೇಶವಿತ್ತೇ ಎಂಬುದನ್ನು ತನಿಖೆಯಿಂದ ತಿಳಿಯಲಾಗುವುದು. ಗಾಯಗೊಂಡವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬಿಆರ್‌ಎಸ್ ಪಕ್ಷದ ನಾಯಕರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಎಂಎಲ್‌ಸಿ ಮಲ್ಲಣ್ಣ ಅವರ ಹೇಳಿಕೆಯಿಂದ ಆರಂಭವಾದ ಈ ವಿವಾದವು, ರಾಜಕೀಯ ಪಕ್ಷಗಳ ನಡುವಿನ ಸಂಘರ್ಷವನ್ನು ಮತ್ತಷ್ಟು ಉಲ್ಬಣಗೊಳಿಸಿದೆ. ಕೆ. ಕವಿತಾ ಅವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕಾಗಿ ಮಲ್ಲಣ್ಣ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಬಿಆರ್‌ಎಸ್ ಕಾರ್ಯಕರ್ತರು ಒತ್ತಾಯಿಸಿದ್ದಾರೆ.





