ಉತ್ತರ ಪ್ರದೇಶದ ಝಾನ್ಸಿ ರೈಲು ನಿಲ್ದಾಣದಲ್ಲಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರಿಗೆ ಸೇನಾ ವೈದ್ಯರೊಬ್ಬರು ತಮ್ಮ ಸಮಯಪ್ರಜ್ಞೆಯಿಂದ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ. ಈ ಅದ್ಭುತ ಘಟನೆ ಉತ್ತರ ಪ್ರದೇಶದ ಝಾನ್ಸಿ ರೈಲು ನಿಲ್ದಾಣದಲ್ಲಿ ನಡೆದಿದೆ.
ಝಾನ್ಸಿಯ ಮಿಲಿಟರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿರುವ ರೋಹಿತ್ ಬಚ್ಚಾಲಾ ಎಂಬ ಯೋಧ, ಒಂದು ತಿಂಗಳ ರಜೆಯ ಮೇಲೆ ಬೆಂಗಳೂರು ಮೂಲಕ ಹೈದರಾಬಾದ್‌ಗೆ ತೆರಳುತ್ತಿದ್ದ ವೇಳೆ ಝಾನ್ಸಿ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.
ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ತಮ್ಮ ಊರಿಗೆ ಹೋಗುವ ರೈಲಿಗಾಗಿ ಕಾಯುತ್ತಿದ್ದಾಗ, ರೋಹಿತ್ ಬಚ್ಚಾಲಾ ಅವರು ಗರ್ಭಿಣಿ ಮಹಿಳೆಯೊಬ್ಬರು ಹೆರಿಗೆ ನೋವಿನಿಂದ ಒದ್ದಾಡುತ್ತಿರುವುದನ್ನು ಗಮನಿಸಿದರು. ತಕ್ಷಣ ಅವರು, ತಮ್ಮ ಬಳಿಯಿದ್ದ ಪಾಕೆಟ್ ಚಾಕು, ಹೇರ್ ಕ್ಲಿಪ್‌ಗಳು ಮತ್ತು ಧೋತಿಯನ್ನು ಬಳಸಿಕೊಂಡು ಗರ್ಭಿಣಿಯ ಹೆರಿಗೆಗೆ ಸಹಾಯ ಮಾಡಿದರು. ರೈಲ್ವೆಯ ಮಹಿಳಾ ಸಿಬ್ಬಂದಿಯೂ ಈ ಸಂದರ್ಭದಲ್ಲಿ ಸಹಕಾರ ನೀಡಿದರು. ಜೊತೆಗೆ, ವೈದ್ಯರಿಗೆ ಕೈಗವಸುಗಳನ್ನು ಒದಗಿಸಿ ಸಹಾಯ ಮಾಡಿದರು.
ಗರ್ಭಿಣಿ ಮಹಿಳೆಯ ಪತಿ, ತನ್ನ ಗರ್ಭಿಣಿ ಪತ್ನಿಗೆ ವೈದ್ಯಕೀಯ ಸಹಾಯ ಬೇಕೆಂದು ರೈಲ್ವೆಯ SOS ಸೇವೆಗೆ ಕರೆ ಮಾಡಿದ್ದರು. ಈ ಕರೆಯನ್ನು ರೈಲ್ ಮದದ್ ಆ್ಯಪ್ ಮೂಲಕ ರೈಲ್ವೆ ಅಧಿಕಾರಿಗಳಿಗೆ ತಿಳಿಸಲಾಯಿತು. ತಕ್ಷಣವೇ ಝಾನ್ಸಿ ರೈಲು ನಿಲ್ದಾಣದ ನಿಯಂತ್ರಣ ಕೊಠಡಿಯನ್ನು ಸಿದ್ಧಪಡಿಸಲಾಯಿತು ಮತ್ತು ವೈದ್ಯಕೀಯ ತಂಡವನ್ನು ರವಾನಿಸಲಾಯಿತು.
ರೈಲು ನಿಲ್ದಾಣದಲ್ಲಿ ಹೆರಿಗೆ
ಈ ಘಟನೆಯಲ್ಲಿ ಗರ್ಭಿಣಿ ಮಹಿಳೆ ಪನ್ವೇಲ್‌ನಿಂದ ಬಾರಾಬಂಕಿಗೆ ತನ್ನ ಪತಿ ಮತ್ತು ಮಗುವಿನೊಂದಿಗೆ ಪ್ರಯಾಣಿಸುತ್ತಿದ್ದರು. ಆದರೆ, ಝಾನ್ಸಿಯಲ್ಲಿ ರೈಲು ತಲುಪಿದಾಗ ಅವರಿಗೆ ತೀವ್ರವಾದ ಹೆರಿಗೆ ನೋವು ಕಾಣಿಸಿಕೊಂಡಿತ್ತು. ರೈಲ್ವೆ ಸಿಬ್ಬಂದಿ ಮತ್ತು ರೋಹಿತ್ ಬಚ್ಚಾಲಾ ಅವರ ಸಮಯೋಚಿತ ಕ್ರಿಯೆಯಿಂದಾಗಿ ಸಹಜ ಹೆರಿಗೆ ಸಾಧ್ಯವಾಯಿತು. ಹೆರಿಗೆಯ ನಂತರ ತಾಯಿ ಮತ್ತು ಮಗು ಆರೋಗ್ಯವಾಗಿದ್ದು, ಆಂಬುಲೆನ್ಸ್ ಮೂಲಕ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು.
“ಮಹಿಳಾ ಸಿಬ್ಬಂದಿಯೊಬ್ಬರು ಗರ್ಭಿಣಿ ಮಹಿಳೆಯನ್ನು ವೀಲ್‌ಚೇರ್‌ನಲ್ಲಿ ಕರೆದೊಯ್ಯುತ್ತಿದ್ದರು. ಫುಟ್‌ಓವರ್ ಸೇತುವೆಯ ಲಿಫ್ಟ್‌ನಿಂದ ಹೊರಬರುವಾಗ ಗರ್ಭಿಣಿ ಮಹಿಳೆ ತೀವ್ರ ನೋವಿನಿಂದ ಕೂಗುತ್ತಿದ್ದರು. ಆಗ ನಾನು ತಕ್ಷಣವೇ ಅವರ ಬಳಿಗೆ ಧಾವಿಸಿ, ನನ್ನ ಬಳಿಯಿದ್ದ ಕೆಲವು ಸಾಧನಗಳನ್ನು ಬಳಸಿಕೊಂಡು ಸಹಜ ಹೆರಿಗೆಗೆ ಸಹಾಯ ಮಾಡಿದೆ,” ಎಂದು ರೋಹಿತ್ ಬಚ್ಚಾಲಾ ಹೇಳಿದ್ದಾರೆ. ಅವರ ಈ ಕಾರ್ಯಕ್ಕೆ ರೈಲ್ವೆ ಸಿಬ್ಬಂದಿ ಮತ್ತು ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.





