ಎಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಆಲ್‌ರೌಂಡರ್ ರವೀಂದ್ರ ಜಡೇಜಾ ತಮ್ಮ ಟೆಸ್ಟ್ ವೃತ್ತಿಜೀವನದ 22ನೇ ಅರ್ಧಶತಕವನ್ನು ದಾಖಲಿಸಿದ್ದಾರೆ. ಇದರ ಜೊತೆಗೆ, ಇಂಗ್ಲೆಂಡ್‌ನ ನೆಲದಲ್ಲಿ 700ಕ್ಕೂ ಅಧಿಕ ರನ್‌ಗಳನ್ನು ಮತ್ತು 25 ವಿಕೆಟ್‌ಗಳನ್ನು ಕಬಳಿಸಿದ ಮೊದಲ ಭಾರತೀಯ ಆಲ್‌ರೌಂಡರ್ ಎಂಬ ಐತಿಹಾಸಿಕ ದಾಖಲೆಗೆ ಜಡೇಜಾ ಭಾಜನರಾಗಿದ್ದಾರೆ. ಈ ಸಾಧನೆಯ ಮೂಲಕ ಅವರು ಗ್ಯಾರಿ ಸೋಬರ್ಸ್, ಜಾಕ್ ಕಾಲಿಸ್ ಮುಂತಾದ ದಿಗ್ಗಜರ ಸಾಲಿನಲ್ಲಿ ಸ್ಥಾನ ಪಡೆದಿದ್ದಾರೆ.
ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ತಮ್ಮ ಆಲ್‌ರೌಂಡ್ ಕೌಶಲ್ಯವನ್ನು ಪ್ರದರ್ಶಿಸಲು ವಿಫಲರಾಗಿದ್ದ ಜಡೇಜಾ, ಎರಡನೇ ಟೆಸ್ಟ್‌ನಲ್ಲಿ ತಮ್ಮ ಆಟದ ಮೂಲಕ ಭಾರತ ತಂಡಕ್ಕೆ ಆಸರೆಯಾದರು. ಭಾರತ ತಂಡ 212 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ, ಜಡೇಜಾ ಕ್ರೀಸ್‌ಗೆ ಇಳಿದು ನಾಯಕ ಶುಭಮನ್ ಗಿಲ್ (168* ರನ್) ಜೊತೆಗೂಡಿ ಆರನೇ ವಿಕೆಟ್‌ಗೆ 213 ರನ್‌ಗಳ ಜೊತೆಯಾಟವನ್ನು ಆಡಿದರು.
ಮೊದಲ ದಿನದಾಟದಲ್ಲಿ ಇಂಗ್ಲೆಂಡ್‌ನ ಬೌಲರ್‌ಗಳಾದ ಬೆನ್ ಸ್ಟೋಕ್ಸ್, ಶೋಯಿಬ್ ಬಷೀರ್, ಮತ್ತು ಜಾಶ್ ಟಾಂಗ್‌ರನ್ನು ದಿಟ್ಟವಾಗಿ ಎದುರಿಸಿದ ಜಡೇಜಾ, 10 ಬೌಂಡರಿ ಮತ್ತು ಒಂದು ಸಿಕ್ಸರ್ ಸಮೇತ 89 ರನ್‌ಗಳನ್ನು ಕಲೆಹಾಕಿದರು. ಶತಕದ ಭರವಸೆ ಮೂಡಿಸಿದ್ದ ಜಡೇಜಾ, ಜಾಶ್ ಟಾಂಗ್‌ನ ಎಸೆತದಲ್ಲಿ ವಿಕೆಟ್ ಕೀಪರ್ ಜೇಮಿ ಸ್ಮಿತ್‌ಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು. ಆದರೆ, ಈ ಇನಿಂಗ್ಸ್‌ನಲ್ಲಿ ಎರಡು ಮಹತ್ವದ ದಾಖಲೆಗಳನ್ನು ತಮ್ಮದಾಗಿಸಿಕೊಂಡರು. ಇಂಗ್ಲೆಂಡ್‌ನಲ್ಲಿ 739 ರನ್‌ಗಳನ್ನು ಮತ್ತು 28 ವಿಕೆಟ್‌ಗಳನ್ನು ಪಡೆದ ಜಡೇಜಾ, ಈ ಸಾಧನೆಯನ್ನು ತಲುಪಿದ ಭಾರತದ ಮೊದಲ ಆಲ್‌ರೌಂಡರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಇಂಗ್ಲೆಂಡ್‌ನಲ್ಲಿ 700+ ರನ್ ಮತ್ತು 25+ ವಿಕೆಟ್‌ನ ದಿಗ್ಗಜರು
-
ಗ್ಯಾರಿ ಸೋಬರ್ಸ್ (ವೆಸ್ಟ್ ಇಂಡೀಸ್): 1820 ರನ್, 62 ವಿಕೆಟ್
-
ಚಾರ್ಲ್ಸ್ ಮೆಕ್ಕರ್ಟ್ನಿ (ಆಸ್ಟ್ರೇಲಿಯಾ): 1118 ರನ್, 28 ವಿಕೆಟ್
-
ಮೋಂಟಿ ನೋಬೆಲ್ (ಆಸ್ಟ್ರೇಲಿಯಾ): 848 ರನ್, 37 ವಿಕೆಟ್
-
ಜಾಕ್ ಕಾಲಿಸ್ (ದಕ್ಷಿಣ ಆಫ್ರಿಕಾ): 848 ರನ್, 39 ವಿಕೆಟ್
-
ರವೀಂದ್ರ ಜಡೇಜಾ (ಭಾರತ): 739 ರನ್, 28 ವಿಕೆಟ್
2013ರ ಡಿಸೆಂಬರ್ 13ರಂದು ಇಂಗ್ಲೆಂಡ್ ವಿರುದ್ಧವೇ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ರವೀಂದ್ರ ಜಡೇಜಾ, 7ನೇ ಕ್ರಮಾಂಕದಲ್ಲಿ 20 ಅರ್ಧಶತಕಗಳನ್ನು ಬಾರಿಸಿದ್ದಾರೆ. ಈ ಸಾಧನೆಯೊಂದಿಗೆ, ಈ ಕ್ರಮಾಂಕದಲ್ಲಿ ಅತಿ ಹೆಚ್ಚು ಅರ್ಧಶತಕ ಬಾರಿಸಿದ ಆಟಗಾರರ ಪೈಕಿ ಅಗ್ರಸ್ಥಾನವನ್ನು ಅಲಂಕರಿಸಿದ್ದಾರೆ. ಈ ಪಟ್ಟಿಯಲ್ಲಿ ಪಾಕಿಸ್ತಾನದ ಸರ್ಫರಾಜ್ ಅಹಮದ್ (19), ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ (16), ಮತ್ತು ವೆಸ್ಟ್ ಇಂಡೀಸ್‌ನ ಜೇಸನ್ ಹೋಲ್ಡರ್ (14) ಜಡೇಜಾ ಅವರನ್ನು ಹಿಂಬಾಲಿಸುತ್ತಿದ್ದಾರೆ.





