ನವದೆಹಲಿ: ಕೇಂದ್ರ ಸರ್ಕಾರವು ಪ್ಯಾನ್ ಕಾರ್ಡ್‌ಗೆ ಸಂಬಂಧಿಸಿದಂತೆ ಒಂದು ಪ್ರಮುಖ ನಿಯಮವನ್ನು ಜಾರಿಗೆ ತರುತ್ತಿದೆ. ಇದು ತೆರಿಗೆ ವಂಚನೆಯನ್ನು ತಡೆಯುವ ಗುರಿಯನ್ನು ಹೊಂದಿದೆ. ಈ ಹೊಸ ಕ್ರಮದಿಂದ ಹಣಕಾಸಿನ ವಹಿವಾಟುಗಳು ಇನ್ನಷ್ಟು ಪಾರದರ್ಶಕವಾಗಲಿವೆ ಮತ್ತು ತೆರಿಗೆ ವಂಚಕರಿಗೆ ಕಡಿವಾಣ ಬೀಳಲಿದೆ. ಜುಲೈ 1 ರಿಂದ ಯಾರು ಹೊಸದಾಗಿ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವವರಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿರುತ್ತದೆ. ಇದುವರೆಗೆ ವೋಟರ್ ಐಡಿ, ಪಾಸ್‌ಪೋರ್ಟ್ ಅಥವಾ ಜನ್ಮ ಪ್ರಮಾಣಪತ್ರದಂತಹ ದಾಖಲೆಗಳನ್ನು ನೀಡಿ ಪ್ಯಾನ್ ಕಾರ್ಡ್ ಪಡೆಯಬಹುದಿತ್ತು. ಆದರೆ, ಇನ್ಮುಂದೆ ಆಧಾರ್ ಕಾರ್ಡ್ ಇಲ್ಲದೆ ಪ್ಯಾನ್ ಕಾರ್ಡ್ ಸಿಗುವುದಿಲ್ಲ.
ಕೇಂದ್ರ ಸರ್ಕಾರವು ಈ ಕಠಿಣ ಕ್ರಮವನ್ನು ತೆಗೆದುಕೊಂಡಿರುವುದು, ತೆರಿಗೆ ವಂಚಕರು ಬೇರೆಯವರ ಹೆಸರಿನಲ್ಲಿ ಅಥವಾ ನಕಲಿ ದಾಖಲೆಗಳನ್ನು ನೀಡಿ ಬಹುಸಂಖ್ಯೆಯ ಪ್ಯಾನ್ ಕಾರ್ಡ್‌ಗಳನ್ನು ಮಾಡಿಸಿ ವಂಚನೆ ಮಾಡುವುದನ್ನು ತಡೆಯಲು. ಈ ನಿಯಮವು ಹೊಸದಾಗಿ ಪ್ಯಾನ್ ಕಾರ್ಡ್ ಪಡೆಯುವವರಿಗೆ ಮಾತ್ರವಲ್ಲ, ಈಗಾಗಲೇ ಪ್ಯಾನ್ ಕಾರ್ಡ್ ಹೊಂದಿರುವವರಿಗೂ ಅನ್ವಯವಾಗುತ್ತದೆ. ದೇಶದ ಎಲ್ಲಾ ಪ್ಯಾನ್ ಕಾರ್ಡ್‌ದಾರರು ತಮ್ಮ ಪ್ಯಾನ್‌ನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲೇಬೇಕು. ಇದಕ್ಕಾಗಿ ಸರ್ಕಾರವು ಡಿಸೆಂಬರ್ 31, 2025 ರ ಗಡುವನ್ನು ನಿಗದಿಪಡಿಸಿದೆ. ಒಂದು ವೇಳೆ ಈ ಗಡುವಿನೊಳಗೆ ಲಿಂಕ್ ಮಾಡದಿದ್ದರೆ, ಜನವರಿ 1, 2026 ರಿಂದ ಲಿಂಕ್ ಆಗದ ಪ್ಯಾನ್ ಕಾರ್ಡ್‌ಗಳು ನಿಷ್ಕ್ರಿಯವಾಗುತ್ತವೆ.
ಆಧಾರ್-ಪ್ಯಾನ್ ಲಿಂಕ್ ಮಾಡುವುದು ಹೇಗೆ?
ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡುವುದು ತುಂಬಾ ಸರಳವಾಗಿದೆ. ಸರ್ಕಾರವು ಈ ಪ್ರಕ್ರಿಯೆಯನ್ನು ಸುಗಮಗೊಳಿಸಲು ಎರಡು ಸುಲಭ ವಿಧಾನಗಳನ್ನು ಒದಗಿಸಿದೆ. ಆನ್‌ಲೈನ್ ವಿಧಾನ ಮತ್ತು SMS ವಿಧಾನ.
ಆನ್‌ಲೈನ್ ವಿಧಾನ:
-
ಆದಾಯ ತೆರಿಗೆ ಇ-ಫೈಲಿಂಗ್ ವೆಬ್‌ಸೈಟ್‌ಗೆ (www.incometax.gov.in) ಭೇಟಿ ನೀಡಿ.
-
‘ಲಿಂಕ್ ಆಧಾರ್’ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
-
ನಿಮ್ಮ ಪ್ಯಾನ್ ಸಂಖ್ಯೆ, ಆಧಾರ್ ಸಂಖ್ಯೆ ಮತ್ತು ಇತರ ಅಗತ್ಯ ವಿವರಗಳನ್ನು ಭರ್ತಿ ಮಾಡಿ.
-
ನಿಮ್ಮ ಆಧಾರ್‌ನೊಂದಿಗೆ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ OTP ಯನ್ನು ನಮೂದಿಸಿ.
-
‘ಸಬ್ಮಿಟ್’ ಕ್ಲಿಕ್ ಮಾಡಿದರೆ, ನಿಮ್ಮ ಆಧಾರ್ ಮತ್ತು ಪ್ಯಾನ್ ಯಶಸ್ವಿಯಾಗಿ ಲಿಂಕ್ ಆಗುತ್ತದೆ.
SMS ವಿಧಾನ:
ಇಂಟರ್ನೆಟ್ ಸೌಲಭ್ಯ ಇಲ್ಲದವರಿಗೂ ಸರ್ಕಾರವು SMS ಮೂಲಕ ಲಿಂಕ್ ಮಾಡುವ ಸೌಲಭ್ಯವನ್ನು ಕಲ್ಪಿಸಿದೆ.
-
ನಿಮ್ಮ ಮೊಬೈಲ್‌ನ ಮೆಸೇಜ್ ಬಾಕ್ಸ್‌ನಲ್ಲಿ ಈ ಫಾರ್ಮ್ಯಾಟ್‌ನಲ್ಲಿ ಟೈಪ್ ಮಾಡಿ.
UIDPAN <12-ಅಂಕಿಯ ಆಧಾರ್ ಸಂಖ್ಯೆ> <10-ಅಂಕಿಯ ಪ್ಯಾನ್ ಸಂಖ್ಯೆ> -
ಉದಾಹರಣೆಗೆ, ನಿಮ್ಮ ಆಧಾರ್ ಸಂಖ್ಯೆ 987654321012 ಮತ್ತು ಪ್ಯಾನ್ ಸಂಖ್ಯೆ ABCDE1234F ಆಗಿದ್ದರೆ, UIDPAN 987654321012 ABCDE1234F ಎಂದು ಟೈಪ್ ಮಾಡಿ.
-
ಈ ಸಂದೇಶವನ್ನು 567678 ಅಥವಾ 56161 ಸಂಖ್ಯೆಗೆ ಕಳುಹಿಸಿ.
-
ನಿಮ್ಮ ಆಧಾರ್ ಮತ್ತು ಪ್ಯಾನ್ ಲಿಂಕ್ ಆಗುವುದು ದೃಢೀಕರಣ ಸಂದೇಶದ ಮೂಲಕ ತಿಳಿಯುತ್ತದೆ.
ಈ ನಿಯಮದಿಂದ ಏನು ಪ್ರಯೋಜನ?
ಈ ಕ್ರಮವು ತೆರಿಗೆ ವಂಚನೆಯನ್ನು ತಡೆಗಟ್ಟುವ ಜೊತೆಗೆ, ಹಣಕಾಸಿನ ವಹಿವಾಟುಗಳನ್ನು ಇನ್ನಷ್ಟು ಸುರಕ್ಷಿತವಾಗಿಸುತ್ತದೆ. ಆಧಾರ್-ಪ್ಯಾನ್ ಲಿಂಕ್‌ನಿಂದ ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್‌ಗಳನ್ನು ದುರ್ಬಳಕೆ ಮಾಡುವ ಸಾಧ್ಯತೆ ಕಡಿಮೆಯಾಗುತ್ತದೆ.
ಗಡುವಿನೊಳಗೆ ಆಧಾರ್-ಪ್ಯಾನ್ ಲಿಂಕ್ ಮಾಡದಿದ್ದರೆ, ಬ್ಯಾಂಕ್ ಖಾತೆಗಳು, ಷೇರು ವಹಿವಾಟು, ಆಸ್ತಿ ಖರೀದಿ ಮುಂತಾದ ಹಣಕಾಸಿನ ಚಟುವಟಿಕೆಗಳಲ್ಲಿ ತೊಂದರೆ ಎದುರಾಗಬಹುದು. ಆದ್ದರಿಂದ, ಈಗಲೇ ಕ್ರಮ ಕೈಗೊಂಡು ಡಿಸೆಂಬರ್ 31, 2025 ರ ಒಳಗೆ ನಿಮ್ಮ ಪ್ಯಾನ್ ಕಾರ್ಡ್‌ನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಿ.





