ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಹೊಸ ರೀತಿಯ ಜೆಲ್ಲಿ ಗಾಂಜಾ ದಂಧೆ ತಲೆ ಎತ್ತಿದೆ. ಜೆಲ್ಲಿ ಚಾಕೊಲೇಟ್ನಲ್ಲಿ ಗಾಂಜಾವನ್ನು ಮಿಶ್ರಣ ಮಾಡಿ ಮಾರಾಟ ಮಾಡಲಾಗುತ್ತಿದ್ದು, ವಿಶೇಷವಾಗಿ ಮೆಡಿಕಲ್ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಈ ವ್ಯಾಪಾರ ನಡೆಯುತ್ತಿದೆ. ಬ್ಯಾಟರಾಯನಪುರ ಪೊಲೀಸರಿಗೆ ಖಚಿತ ಮಾಹಿತಿ ದೊರೆತ ನಂತರ, ಈ ಗಾಂಜಾ ಜಾಲದ ಇಬ್ಬರು ಆರೋಪಿಗಳಾದ ಮೊಹಮದ್ ಜಾಹೀದ್ ಮತ್ತು ಇಸ್ಮಾಯಿಲ್ ಅದ್ನಾನ್ರನ್ನು ಬಂಧಿಸಲಾಗಿದೆ. ಇನ್ನೊಬ್ಬ ಆರೋಪಿಯು ತಲೆಮರೆಸಿಕೊಂಡಿದ್ದು, ಅವನಿಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಮೂರು ಲಕ್ಷ ಮೌಲ್ಯದ ಗಾಂಜಾ ವಶ
ಬ್ಯಾಟರಾಯನಪುರ ಇನ್ಸ್ಪೆಕ್ಟರ್ ಕೆ. ಜೀವನ್ ನೇತೃತ್ವದ ತಂಡವು ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿತ್ತು. ಒಟ್ಟು 1440 ಗ್ರಾಂ ಜೆಲ್ಲಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದ್ದು, ಇದರ ಮೌಲ್ಯ ಸುಮಾರು ಮೂರು ಲಕ್ಷ ರೂಪಾಯಿಗಳಾಗಿದೆ. ತನಿಖೆಯ ವೇಳೆ ಗಾಂಜಾದ ಬಟ್ಟಿ ಇಳಿಸಿದ ರಸವನ್ನು ಜೆಲ್ಲಿ ಚಾಕೊಲೇಟ್ನೊಂದಿಗೆ ಬೆರೆಸಿ ಮಾರಾಟ ಮಾಡುತ್ತಿದ್ದ ರೀತಿಯನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
ಜೆಲ್ಲಿ ಗಾಂಜಾದ ವಿಶೇಷತೆ
ಈ ಜೆಲ್ಲಿ ಗಾಂಜಾದ ಒಂದು ಪ್ಯಾಕ್ಗೆ ಬರೋಬ್ಬರಿ 6,000 ರೂಪಾಯಿ ಬೆಲೆ ಇದೆ. ಜೆಲ್ಲಿ ಚಾಕೊಲೇಟ್ನ ರೂಪದಲ್ಲಿ ತಯಾರಿಸಲಾದ ಈ ಗಾಂಜಾವನ್ನು ಬಾಯಿಯಲ್ಲಿ ಇಟ್ಟ ತಕ್ಷಣ ಕರಗುತ್ತದೆ. ಸಾಮಾನ್ಯ ಗಾಂಜಾ ಸೊಪ್ಪು ಅಥವಾ ಹ್ಯಾಶ್ ಆಯಿಲ್ಗಿಂತ ಈ ಜೆಲ್ಲಿ ಗಾಂಜಾದ ಕಿಕ್ ಹೆಚ್ಚು ಎಂದು ಹೇಳಲಾಗುತ್ತಿದೆ. ಇದನ್ನು ಪಾಕೆಟ್ನಲ್ಲಿ ಇಟ್ಟುಕೊಂಡರೂ ಯಾರಿಗೂ ಅನುಮಾನ ಬರದಂತೆ ತಯಾರಿಸಲಾಗಿದೆ. ಪೊಲೀಸರು ತಪಾಸಣೆ ನಡೆಸಿದರೂ ಇದು ಗಾಂಜಾ ಎಂದು ಪತ್ತೆಹಚ್ಚುವುದು ಕಷ್ಟವಾಗಿದೆ.
ವಿದೇಶಿ ಡ್ರಗ್ ಪೆಡ್ಲರ್ ಬಂಧನ
ಬೆಂಗಳೂರು ಹೊರವಲಯದ ಸೋಲದೇವನಹಳ್ಳಿಯಲ್ಲಿ ನೈಜೀರಿಯಾ ಮೂಲದ ಡ್ರಗ್ ಪೆಡ್ಲರ್ ಡೇನಿಯಲ್ ಎಂಬಾತನನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳವು ಬಂಧಿಸಿದ್ದಾರೆ. ಆತನಿಂದ 2.5 ಕೆಜಿ ಎಂಡಿಎಂಎ ಕ್ರಿಸ್ಟೆಲ್ ವಶಪಡಿಸಿಕೊಳ್ಳಲಾಗಿದ್ದು, ಇದರ ಮೌಲ್ಯ ಸುಮಾರು ನಾಲ್ಕು ಕೋಟಿ ರೂಪಾಯಿಗಳಾಗಿದೆ. ಆರೋಪಿಯು ಬ್ಯುಸಿನೆಸ್ ವೀಸಾದಡಿ ಬೆಂಗಳೂರಿಗೆ ಬಂದು, ತನ್ನ ದೇಶದಿಂದ ಡ್ರಗ್ಸ್ ತಂದು ಡೀಲರ್ಗಳಿಗೆ ಮಾರಾಟ ಮಾಡುತ್ತಿದ್ದ. ಈ ಕಾನೂನುಬಾಹಿರ ವ್ಯಾಪಾರಕ್ಕೆ ಸೆಕೆಂಡ್ ಹ್ಯಾಂಡ್ ಬೈಕ್ ಬಳಸುತ್ತಿದ್ದ ಆತನನ್ನು ಖಚಿತ ಮಾಹಿತಿಯ ಮೇರೆಗೆ ಜೈಲಿಗಟ್ಟಲಾಗಿದೆ.
ಜೆಲ್ಲಿ ಗಾಂಜಾವನ್ನು ಎಲ್ಲಿ ತಯಾರಿಸಲಾಗುತ್ತಿತ್ತು ಎಂಬುದನ್ನು ಕಂಡುಹಿಡಿಯಲು ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.