ಇಷ್ಟು ದಿನ ತಂಡದವರ ಮೇಲೆ ಮುನಿಸಿಕೊಂಡಿದ್ದ ಪಂಜುರ್ಲಿ ದೈವ, ಇದೀಗ ಡೈರೆಕ್ಟ್ ಆಗಿ ರಿಷಬ್ ಶೆಟ್ಟಿ ಬುಡಕ್ಕೆ ಬಂದಂತಿದೆ. ಕೊನೆಯ ಹಂತ ತಲುಪಿರೋ ಕಾಂತಾರ-1 ಶೂಟಿಂಗ್ ಸೆಟ್‌ನಲ್ಲಿ ಮತ್ತೊಂದು ಮಹಾ ಅವಘಡ ಸಂಭವಿಸಿದೆ. ಕೂದಲೆಳೆ ಅಂತರದಲ್ಲಿ ಸಾವಿನ ಅಂಚಿನಿಂದ ಪಾರಾಗಿದೆ ತಂಡ. ಇಷ್ಟಕ್ಕೂ ಆಗಿದ್ದೇನು..? ಆಗ್ತಿರೋದಾದ್ರೂ ಏನು ಅನ್ನೋದ್ರ ಜೊತೆಗೆ ಈ ವಾರಾಹಿ ರಸಹ್ಯ ಬಿಚ್ಚಿಡ್ತೀವಿ ನೋಡಿ.
ಅಯ್ಯೋ ವಿಧಿಯೇ..ಅಚಾನಕ್ ಆಗಿ ಒಂದೋ ಎರಡೋ ಇನ್ಸಿಡೆಂಟ್ಸ್ ಆಗೋದು ಸಾಮಾನ್ಯ. ಆದ್ರೆ ಬೇತಾಳನಂತೆ ಶನಿ ಹೆಗಲೇರಿ, ಪದೇ ಪದೆ ಕಾಡುವುದು ನಿಜಕ್ಕೂ ಅಚ್ಚರಿ ಅಷ್ಟೇ ಅಲ್ಲ. ಪರಮ ಅಚ್ಚರಿಗಳಲ್ಲೊಂದು. ಊಹೆಗೂ ನಿಲುಕದ ತರ್ಕಕ್ಕೆ ಸಿಗದ ಪ್ರಶ್ನೆಗಳು ಸದ್ಯ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರೋ ಕಾಂತಾರ-1 ಚಿತ್ರತಂಡಕ್ಕೆ ಎದುರಾಗಿವೆ.
ಬೆಳಕಲ್ಲ ಇದು ದರ್ಶನ್ ಅನ್ನೋ ಡೈಲಾಗ್, ಪಂಜುರ್ಲಿ ದೈವದ ಸುತ್ತ ಕಿಡಿ ಹೊತ್ತಿಕೊಂಡು ಉರಿಯುವ ವೃತ್ತಾಕಾರದ ಬೆಂಕಿ. ಅಲ್ಲಿ ಕಾಣುವ ದರ್ಶನ ನಿಜಕ್ಕೂ ಪವಾಡ ಸದೃಶ್ಯವಾಗಿದೆ. ತೆರೆ ಮೇಲೆ ನಾವೆಲ್ಲಾ ಸಿನಿಮಾ ನೋಡಿ ವ್ಹಾವ್ ಅಂತ ಹುಬ್ಬೇರಿಸುತ್ತೀವಿ. ಆದ್ರೆ ಅದಕ್ಕಾಗಿ ಅವರು ಮಾಡಿದ ತ್ಯಾಗ, ಪಟ್ಟ ಶ್ರಮ, ಸುರಿಸಿದ ಬೆವರು, ಹರಿಸಿದ ರಕ್ತ, ಚೆಲ್ಲಿದ ಉಸಿರು ಅಷ್ಟಿಷ್ಟಲ್ಲ.
ಜೂನ್ 11 ಮೂರು ದಿನಗಳ ಹಿಂದೆಯಷ್ಟೇ ಕಾಂತಾರ-1 ಶೂಟಿಂಗ್‌ಗೆ ಅಂತ ಬಂದಿದ್ದ ಕೇರಳ ಮೂಲದ ಜೂನಿಯರ್ ಆರ್ಟಿಸ್ಟ್ ವಿಜು ವಿ.ಕೆ ಹೃದಯಾಘಾತದಿಂದ ಮೃತಪಟ್ಟರು. ಮರು ದಿನ ಎದ್ದು ಬಣ್ಣ ಹಚ್ಚಿ, ಕಾಂತಾರ-1 ಸಿನಿಮಾದ ಭಾಗವಾಗಬೇಕಿದ್ದ ಕಲಾವಿದ ಮಸಣ ಸೇರಿಬಿಟ್ಟ. ಅದಕ್ಕೂ ಮುನ್ನ ರಾಕೇಶ್ ಪೂಜಾರಿ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ರು. ಆ ಸಾವಿಗೂ ಮೊದಲು ಕಪಿಲ್ ಅನ್ನೋ ಮತ್ತೊಬ್ಬ ಕಾಂತಾರ-1 ಚಿತ್ರದಲ್ಲಿ ನಟಿಸಿದ್ದ ಜೂನಿಯರ್ ಆರ್ಟಿಸ್ಟ್ ನೀರು ಪಾಲಾಗಿ ಇಹಲೋಕ ತ್ಯಜಿಸಿದ್ರು.
ಕಾಂತಾರ-1 ತಂಡದಿಂದ ಒಬ್ಬರಾ ಇಬ್ಬರಾ..? ಸಾಲು ಸಾಲು ಸರಣಿ ಸಾವಿಗಳಾಗ್ತಿವೆ. ಇದರ ನಡುವೆ ಶತಾಯ ಗತಾಯ ಸಿನಿಮಾನ ಮಾಡಿ ಮುಗಿಸಲೇಬೇಕು ಅಂತ ರಿಷಬ್ ಶೆಟ್ಟಿ ಟೊಂಕಕಟ್ಟಿ ನಿಂತುಬಿಟ್ಟಿದ್ದಾರೆ. ಅದೇ ಕಾರಣದಿಂದ ಜೂನ್ 12ರಿಂದ ಕೊನೆಯ ಹಂತದ 15 ದಿನಗಳ ಚಿತ್ರೀಕರಣಕ್ಕೆ ಯೋಜನೆ ರೂಪಿಸಿ ಭರದಿಂದ ಶೂಟಿಂಗ್ ನಡೆಸುತ್ತಿತ್ತು ಚಿತ್ರತಂಡ. ನಿನ್ನೆ ಸಂಜೆ ಮತ್ತೊಂದು ಮಹಾ ಅವಘಡ ಸಂಭವಿಸಿಬಿಟ್ಟಿದೆ. ಮತ್ತದೇ ಕಾಂತಾರ ಸೆಟ್‌ನಲ್ಲಿ ಅನ್ನೋದು ಶಾಕಿಂಗ್ & ಬ್ರೇಕಿಂಗ್ ನ್ಯೂಸ್.
ತೀರ್ಥಹಳ್ಳಿಯ ಮಾಸ್ತಿಕಟ್ಟೆ ಬಳಿ ಇರೋ ಮಾಣಿ ಜಲಾಶಯದ ಬ್ಯಾಕ್ ವಾಟರ್‌ನಲ್ಲಿ ರಿಷಬ್ ಶೆಟ್ಟಿ ಕಾಂತಾರ-1 ಸಿನಿಮಾದ ಶೂಟಿಂಗ್ ನಡೆಸುತ್ತಿದ್ದರು. ದೋಣಿಯಲ್ಲಿ ಸಾಗಿ, ನೀರಿನ ಮಧ್ಯೆ ಒಂದು ಪ್ರಮುಖ ದೃಶ್ಯ ಚಿತ್ರಿಸುತ್ತಿದ್ದರು. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿದ್ದ ಹಿನ್ನೆಲೆ ಅವರೊಟ್ಟಿಗೆ ಕ್ಯಾಮೆರಾಮ್ಯಾನ್ ಅರವಿಂದ್ ಕಶ್ಯಪ್, ಕ್ಯಾಮೆರಾ ಅಸಿಸ್ಟೆಂಟ್ ಸೇರಿದಂತೆ ಸುಮಾರು 30 ಮಂದಿ ಇದ್ದರು ಎನ್ನಲಾಗಿದೆ.
ಭಾರ ಹೆಚ್ಚಾದ ಹಿನ್ನೆಲೆ ಬ್ಯಾಲೆನ್ಸ್ ತಪ್ಪಿದ ದೋಣಿ ಕಂಪ್ಲೀಟ್ ಉಲ್ಟಾ ಮುಗುಚಿ ಬಿದ್ದಿದೆ. ಮೂವತ್ತೂ ಮಂದಿ ದುಬಾರಿ ಕ್ಯಾಮೆರಾ, ಲೆನ್ಸ್, ಸೆಟ್ ಪ್ರಾಪರ್ಟೀಸ್ ಸಮೇತ ನೀರು ಪಾಲಾಗಿದ್ದಾರೆ. ಅದೃಷ್ಟವಶಾತ್ ಯಾರಿಗೂ ಏನೂ ಆಗಿಲ್ಲ. ಎಲ್ಲರೂ ಈಜುಕೊಂಡೇ ದಡ ಸೇರಿದ್ದಾರೆ ಎನ್ನಲಾಗ್ತಿದೆ. ನಿಜಕ್ಕೂ ಆ ದೇವರೇ ಕಾಪಾಡಿದ್ದಾರೆ. ಊಹಿಸೋಕೂ ಆಗದಂತಹ ಮಹಾ ದುರಂತವೊಂದನ್ನ ತಪ್ಪಿಸಿದ್ದಾರೆ.
ಶೂಟಿಂಗ್ ಸ್ಥಳದಿಂದ ತೀರ್ಥಹಳ್ಳಿಯತ್ತ ಆ್ಯಂಬುಲೆನ್ಸ್..! ಗೌಪ್ಯತೆ ಕಾಪಾಡ್ತಿರೋದ್ಯಾಕೆ ಕಾಂತಾರ-1 ಚಿತ್ರತಂಡ..?
ನಿನ್ನೆ ಕಾಂತಾರ ಶೂಟಿಂಗ್ ನಲ್ಲಿ ನಡೆದ ಘಟನೆ ಮಾತ್ರ ಇಂದಿಗೂ ನಿಗೂಢ. ಆದ್ರೆ ಅಲ್ಲಿ ಮಹಾ ಎಡವಟ್ಟು ನಡೆದಿರೋದಂತೂ ಸತ್ಯ ಎನ್ನಲಾಗ್ತಿದೆ. ಅದಕ್ಕೆ ಪುಷ್ಠಿ ನೀಡುವಂತೆ ಶೂಟಿಂಗ್ ನಡೆಯುತ್ತಿದ್ದ ಸ್ಥಳಕ್ಕೆ ಆ್ಯಂಬುಲೆನ್ಸ್ ಒಂದು ಬಂದು ಹೋಗಿದೆ. ಅದು ನೇರವಾಗಿ ತೀರ್ಥಹಳ್ಳಿಯ ಖಾಸಗಿ ಆಸ್ಪತ್ರೆಗೆ ತೆರಳಿದ್ದು, ಅಲ್ಲಿ ಯಾರೋ ಚಿಕಿತ್ಸೆ ಕೂಡ ಪಡೆಯುತ್ತಿದ್ದಾರೆ ಅನ್ನೋದು ಗುಮಾನಿ.
ಇನ್ನು ಇಷ್ಟೆಲ್ಲಾ ಆದ ಬಳಿಕವೂ ಸಹ ಚಿತ್ರತಂಡ ಸಿಕ್ಕಾಪಟ್ಟೆ ಗೌಪ್ಯತೆ ಕಾಪಾಡ್ತಿರೋದ್ಯಾಕೆ ಅನ್ನೋದು ಹಲವರ ಪ್ರಶ್ನೆಯಾಗಿದೆ. ಇದು ಶಿವಮೊಗ್ಗ ಜಿಲ್ಲಾಧಿಕಾರಿ ಗಮನಕ್ಕೆ ಬಂದಿದ್ದು, ತಮಗೆ ಶೂಟಿಂಗ್ ಬಗ್ಗೆ ಅಧಿಕೃತ ಮಾಹಿತಿ ಇಲ್ಲದಿರೋದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಪಿಸಿಯಿಂದ ಅನುಮತಿ ಪಡೆದು ಚಿತ್ರಿಸಿದರೂ ಸಹ ಜಿಲ್ಲಾಧಿಕಾರಿಗಳ ಗಮನಕ್ಕೆ ತೆರದೇ ಇರೋದು ಬೇಸರ ತಂದಿದೆ ಎಂದಿದ್ದಾರೆ. ಅದೇ ಕಾರಣದಿಂದ ಹೊಸನಗರ ತಹಶೀಲ್ದಾರ್‌ಗೆ ನಾಳೆ ಚಿತ್ರತಂಡಕ್ಕೆ ನೋಟಿಸ್ ನೀಡುವಂತೆ ಸೂಚಿಸಿದ್ದಾರಂತೆ ಡಿಸಿ.
ಇದು ಪದೇ ಪದೆ ಮರುಕಳಿಸುತ್ತಿರೋದು ನಿಜಕ್ಕೂ ದುರಂತವೇ ಸರಿ. ಅದರಲ್ಲೂ ಮೊದಲೇ ತಂಡವನ್ನು ಎಚ್ಚರಿಕೆಯಿಂದ ಇರಲು ಸೂಚಿಸಿದ್ದ ವಾರಾಹಿ ಪಂಜುರ್ಲಿ ದೈವ ಇದೀಗ ವರಾಹಿ ನದಿಗೆ ಅಡ್ಡಲಾಗಿ ಕಟ್ಟಿರೋ ಮಾಣಿ ಜಲಾಶಯದ ಬ್ಯಾಕ್ ವಾಟರ್‌ನಲ್ಲಿ ಹೀಗಾಗಿರೋದು ನಿಜಕ್ಕೂ ಎಲ್ಲರನ್ನ ನಿಟ್ಟುಸಿರು ಬಿಡುವಂತೆ ಮಾಡಿದೆ. ವಾರಾಹಿ ದೈವ ವರಾಹಿ ನದಿ ಅನ್ನೋದು ಕೂಡ ಕಾಕತಾಳೀಯ ಎನ್ನುವಂತಾಗಿದೆ. ಇವೆಲ್ಲವೂ ರಿಷಬ್‌ಗೆ ಒಂಥರಾ ಹಿಂಟ್ ನೀಡ್ತಿದೆಯಾ ದೈವ ಅನ್ನೋದು ಹಲವರ ಅಭಿಪ್ರಾಯವಾಗಿದೆ.
ಕೂಡಲೇ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ. ಗಣಪತಿ ಹೋಮ, ಮೃತ್ಯುಂಜಯ ಹೋಮದ ಜೊತೆಗೆ ಪಂಜುರ್ಲಿ ದೈವಕ್ಕೆ ಹರಕೆ ತೀರಿಸಬೇಕಿದೆ. ಎಲ್ಲವೂ ನಂಬಿಕೆಗಳ ಮೇಲೆ ಆಧಾರವಾಗಿದೆ. ಹಾಗಾಗಿ ಮುನಿದ ದೈವವನ್ನು ಸಂತೈಸುವ ಕಾರ್ಯ ಮಾಡಿದ್ರೆ ಮುಂದೆ ಆಗುವ ಅನಾಹುತಗಳನ್ನ ತಪ್ಪಿಸಬಹುದೋ ಏನೋ ಅನ್ನೋದು ದೈವವನ್ನು ನಂಬುವವರ ಅಭಿಪ್ರಾಯವಾಗಿದೆ.