ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತ ನಟಿ ರನ್ಯಾ ರಾವ್ ಅವರ ಸಂಕಷ್ಟ ಜೈಲಿನೊಳಗಿದ್ದರೂ ಕೊನೆಗೊಂಡಿಲ್ಲ. ಈಗ ಆದಾಯ ತೆರಿಗೆ (ಐಟಿ) ಇಲಾಖೆ ಇವರನ್ನು ವಿಚಾರಣೆಗಾಗಿ ಮುಂದಾಗಿದೆ. ಜೂನ್ 11ರಿಂದ 13ರ ವರೆಗೆ ಮೂರು ದಿನ ರನ್ಯಾ ಅವರನ್ನು ವಿಚಾರಣೆ ಮಾಡುವುದಾಗಿ ಇಲಾಖೆಯ ಮೂಲಗಳು ತಿಳಿಸಿವೆ. ಇದರಿಂದ ನಟಿಯ ಮೇಲೆ ಗಂಭೀರ ಆರೋಪಗಳ ಕುರಿತಂತೆ ಇನ್ನಷ್ಟು ಮಾಹಿತಿ ಬಹಿರಂಗವಾಗುವ ಸಾಧ್ಯತೆ ಇದೆ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ಯಾ ರಾವ್ 14 ಕೆಜಿಗೂ ಅಧಿಕ ಬಂಡಲ್ ಚಿನ್ನದೊಂದಿಗೆ ಸಿಕ್ಕಿಬಿದ್ದರು. ತಕ್ಷಣವೇ ಅಧಿಕಾರಿಗಳು ಅವರನ್ನು ಬಂಧಿಸಿ ವಿಚಾರಣೆ ನಡೆಸಿದರು. ತನಿಖೆಯು ಮುಂದುವರೆದಂತೆ, ಈ ಪ್ರಕರಣದಲ್ಲಿ ಹಲವು ಮಹತ್ವದ ಸಂಗತಿಗಳು ಬೆಳಕಿಗೆ ಬಂದವು. ರನ್ಯಾ ಐಪಿಎಸ್ ಅಧಿಕಾರಿಯ ಪುತ್ರಿ ಎಂಬುದು ಬಹಿರಂಗವಾದ ನಂತರ, ಈ ಪ್ರಕರಣದಲ್ಲಿ ಪೊಲೀಸ್ ವ್ಯವಸ್ಥೆಯ ದುರುಪಯೋಗ ಕೂಡ ನಡೆದಿರುವುದು ಬಹಿರಂಗವಾಯಿತು.
ಹೆಚ್ಚು ಚಿನ್ನದ ಕಳ್ಳ ಸಾಗಣೆ ಪ್ರಕರಣಗಳಲ್ಲಿ ಇವರ ಹೆಸರು ಕೇಳಿಬಂದಿದ್ದು, ಈ ಹಿಂದೆ ಹಲವು ಬಾರಿ ಚಿನ್ನ ಕಳ್ಳ ಸಾಗಣೆ ಮಾಡಿ ಕೋಟ್ಯಂತರ ರೂಪಾಯಿಗಳ ಮೌಲ್ಯದ ವಂಚನೆ ಮಾಡಿರುವ ಶಂಕೆ ಇದೆ. ಇವರ ವಿರುದ್ಧ ಅಕ್ರಮ ಹಣ ವರ್ಗಾವಣೆ ಸೇರಿದಂತೆ ನಾನಾ ಕೇಸ್‌ಗಳು ದಾಖಲಾಗಿವೆ.
ಇದೀಗ ಈ ಕೇಸ್‌ಗೆ ಮತ್ತೊಂದು ಹೊಸ ತಿರುವು ನೀಡಿದಂತಾಗಿದೆ ಆದಾಯ ತೆರಿಗೆ ಇಲಾಖೆಯ ಎಂಟ್ರಿ. ಐಟಿ ಇಲಾಖೆ ಸದ್ಯ ನ್ಯಾಯಾಲಯದ ಅನುಮತಿಯಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ಅವರನ್ನು ವಿಚಾರಣೆ ಮಾಡಲು ಸಿದ್ಧವಾಗಿದೆ. ವಿಚಾರಣೆ ವೇಳೆ ಹೊಸ ಅರ್ಥಿಕ ಅಪರಾಧ ಮಾಹಿತಿ ಬಹಿರಂಗವಾಗಬಹುದು ಎಂದು ನಿಗಾ ವಹಿಸಲಾಗಿದೆ.
ರನ್ಯಾ ರಾವ್ ಅವರನ್ನು ವಿಶೇಷ ನ್ಯಾಯಾಲಯವು ಕೆಲವು ಪ್ರಕರಣಗಳಲ್ಲಿ ಜಾಮೀನು ನೀಡಿದರೂ, ಅವರು ಇನ್ನೂ ಜೈಲಿನಿಂದ ಬಿಡುಗಡೆಯಾಗಿಲ್ಲ. ಇದಕ್ಕೆ ಕಾರಣವೇನು ಅನ್ನೋದಾದರೆ, ಅವರ ವಿರುದ್ಧ ಭಾರತೀಯ ಕಾನೂನಿನ COFEPOSA ಅಡಿಯಲ್ಲಿ ದೂರು ದಾಖಲಾಗಿದೆ. ಈ ಕಾಯ್ದೆಯು ದೇಶದ ವಿರುದ್ಧದ ಆರ್ಥಿಕ ಅಪರಾಧಗಳಿಗೆ ಕಡಿವಾಣ ಹಾಕುವ ಉದ್ದೇಶ ಹೊಂದಿದ್ದು, ಅತ್ಯಂತ ಕಠಿಣವಾದದ್ದಾಗಿ ಪರಿಗಣಿಸಲಾಗಿದೆ.
ಈ ಕಾಯ್ದೆಯ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ರೆ, ಇತರ ಎಲ್ಲ ಪ್ರಕರಣಗಳಲ್ಲಿ ಜಾಮೀನು ದೊರಕಿದರೂ ಸಹ ಅವರನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ. ಇದರಿಂದಾಗಿ ರನ್ಯಾ ಅವರು ಇಂದಿಗೂ ಜೈಲಿನೊಳಗೇ ಉಳಿದುಕೊಳ್ಳಬೇಕಾಗಿದೆ.
ಮುಂದಿನ ಮೂರು ದಿನಗಳ ವಿಚಾರಣೆಯಲ್ಲಿ ಐಟಿ ಇಲಾಖೆ ಈ ಹಿಂದೆ ನಡೆದ ಚಿನ್ನ ಸಾಗಣೆ, ಹಣದ ಲೆಕ್ಕಾಚಾರ, ಇತರರೊಂದಿಗೆ ಹೊಂದಿರುವ ಸಂಪರ್ಕ ಸೇರಿದಂತೆ ಹಲವು ವಿಷಯಗಳ ಬಗ್ಗೆ ತನಿಖೆ ನಡೆಸಲಿದೆ. ಈ ವಿಚಾರಣೆ ವೇಳೆ ಇನ್ನೂ ಹೆಚ್ಚಿನ ಚಿಕ್ಕದಾದ ಮಾಹಿತಿ ಬಹಿರಂಗಗೊಳ್ಳುವ ಸಾಧ್ಯತೆ ಇದೆ.