ಚಿಕ್ಕೋಡಿ: ಮೇಖಳಿ ಗ್ರಾಮದ ರಾಮ ಮಂದಿರ ಮಠವನ್ನು ತಾಲೂಕಾಡಳಿತವು ಸಂಪೂರ್ಣ ಧ್ವಂಸಗೊಳಿಸಿದೆ. ಈ ಮಠವನ್ನು ಸ್ವಾಮಿ ಲೋಕೇಶ್ವರ ಎಂಬ ಕಪಟಿ ಸ್ವಾಮೀಜಿಯು ಸರ್ಕಾರಿ ಗಾಯರಾಣಾ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದರು. ಈತನ ವಿರುದ್ಧ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಜೈಲು ಶಿಕ್ಷೆಯಾಗುತ್ತಿದ್ದಂತೆ, ರಾಯಬಾಗ ತಹಶೀಲ್ದಾರ್ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗಿದೆ.
ಮೇಖಳಿ ಗ್ರಾಮದ ಸರ್ವೇ ನಂ. 225ರಲ್ಲಿ 8 ಎಕರೆ ಸರ್ಕಾರಿ ಜಮೀನನ್ನು ಲೋಕೇಶ್ವರ ಸ್ವಾಮೀಜಿ ಅತಿಕ್ರಮಣ ಮಾಡಿ, 8 ವರ್ಷಗಳ ಹಿಂದೆ ಈ ಮಠವನ್ನು ಕಟ್ಟಿದ್ದರು. ಆದರೆ, ಈ ಜಮೀನು ಗಾಯರಾಣಾ (ಗೋಮಾಳ) ಜಮೀನಾಗಿದ್ದು, ಇದರಲ್ಲಿ ಯಾವುದೇ ನಿರ್ಮಾಣಕ್ಕೆ ಅವಕಾಶವಿಲ್ಲ. ಈ ಅನಧಿಕೃತ ನಿರ್ಮಾಣದ ಜೊತೆಗೆ, ಸ್ವಾಮೀಜಿಯ ದುಷ್ಕೃತ್ಯದ ಆರೋಪವು ಅಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳಲು ಕಾರಣವಾಯಿತು.
ತೆರವು ಕಾರ್ಯಾಚರಣೆಯನ್ನು ಬೆಳಿಗ್ಗೆ ಆರಂಭಿಸಲಾಯಿತು. ರಾಯಬಾಗ ತಾಲೂಕಾಡಳಿತವು ಮೂರು ಜೆಸಿಬಿಗಳನ್ನು ಬಳಸಿ, ಮಠದ ಕಟ್ಟಡವನ್ನು ಸಂಪೂರ್ಣವಾಗಿ ಕೆಡವಿತು. ಈ ಕಾರ್ಯಾಚರಣೆಯನ್ನು ತಹಶೀಲ್ದಾರ್ ನೇತೃತ್ವದಲ್ಲಿ ನಡೆಸಲಾಗಿದ್ದು, ಸ್ಥಳೀಯ ಪೊಲೀಸ್ ಇಲಾಖೆಯ ಸಹಕಾರವೂ ಇದಕ್ಕೆ ದೊರೆತಿತು. ಕಾರ್ಯಾಚರಣೆಯ ಸಂದರ್ಭದಲ್ಲಿ, ಮಠದ ಒಳಗೆ ತಲವಾರು, ಕೊಡಾಲಿ ಮತ್ತು ಜಂಬಿಯಾದಂತಹ ಹಲವು ಆಯುಧಗಳು ಸಿಕ್ಕಿವೆ.
ಈ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಜೋರಾಗಿದೆ. ಕೆಲವರು ಈ ಕಾರ್ಯಾಚರಣೆಯನ್ನು ಸರ್ಕಾರದ ತಕ್ಷಣದ ಕ್ರಮವೆಂದು ಶ್ಲಾಘಿಸಿದರೆ, ಇನ್ನು ಕೆಲವರು ಸ್ಥಳೀಯ ಶಾಸಕರಿಂದ ಈ ಮಠಕ್ಕೆ ಶಾಸಕರ ಅನುದಾನದ ಮೂಲಕ ಹಣಕಾಸಿನ ನೆರವು ಒದಗಿಸಲಾಗಿತ್ತೆಂಬ ಆರೋಪವನ್ನು ಮಾಡಿದ್ದಾರೆ.





