ಬೆಂಗಳೂರಿನ ಅನ್ನಪೂರ್ಣೇಶ್ವರಿ ಠಾಣೆ ಪೊಲೀಸರು ಹಾಸ್ಯ ನಟ ಮಡೆನೂರು ಮನು ಅವರನ್ನು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿಸಿದ್ದಾರೆ. ಈ ಘಟನೆ ಕನ್ನಡ ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸಂತ್ರಸ್ತೆಯ ಆರೋಪಗಳು ಗಂಭೀರವಾಗಿದೆ.
ಸಂತ್ರಸ್ತೆ ತಮಗಾದ ದೌರ್ಜನ್ಯದ ಬಗ್ಗೆ ಗ್ಯಾರಂಟಿ ನ್ಯೂಸ್‌ಗೆ ವಿವರವಾಗಿ ಹೇಳಿಕೊಂಡಿದ್ದಾರೆ. “ನಾವಿಬ್ಬರು ಏಳು ವರ್ಷಗಳಿಂದ ಸ್ನೇಹಿತರಾಗಿದ್ದೆವು. ಆತ ನನ್ನ ಬೆಸ್ಟ್ ಫ್ರೆಂಡ್ ಎಂದು ಭಾವಿಸಿದ್ದೆ. ಆದರೆ, ನನಗೆ ಅಪ್ಪ, ಅಮ್ಮ ಯಾರೂ ಇಲ್ಲದನ್ನ ಅವನು ದುರ್ಬಳಕೆ ಮಾಡಿಕೊಂಡ. 2022ರಲ್ಲಿ ಒಂದು ಕಾರ್ಯಕ್ರಮದ ಸಂದರ್ಭದಲ್ಲಿ ಆತ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದನು. ಇದರಿಂದ ನಾನು ಆಘಾತಕ್ಕೆ ಒಳಗಾದೆ. ಆತನ ವಿರುದ್ಧ ದೂರು ದಾಖಲಿಸಬೇಕೆ ಎಂದು ಗೊಂದಲಕ್ಕೆ ಒಳಗಾಗಿದ್ದೆ,” ಎಂದು ಸಂತ್ರಸ್ತೆ ತಿಳಿಸಿದ್ದಾರೆ.
ಇದಾದ ಎರಡ್ಮೂರು ದಿನಗಳ ನಂತರ ಆತ ಮತ್ತೆ ನನ್ನ ಬಳಿಗೆ ಬಂದಿದ್ದಾನೆ. “ನಿನಗೆ ಸರ್ಪ್ರೈಸ್ ಕೊಡ್ತೀನಿ, ಕಣ್ಣು ಮುಚ್ಚಿಕೋ,” ಎಂದು ಹೇಳಿದ್ದ. ಆಗ ನಾನು ಏನೋ ಕೊಡಲು ಬಂದಿದ್ದಾನೆ ಅನ್ಕೊಂಡೆ. ಕಣ್ಣು ಮುಚ್ಚಿದಾಗ, ಆತ ನನಗೆ ತಾಳಿ ಕಟ್ಟಿದ್ದಾನೆ. “ನನ್ನ ತಂದೆಗೆ ಇಬ್ಬರು ಪತ್ನಿಯರಿದ್ದರು, ನನಗೂ ಇಬ್ಬರು ಹೆಂಡ್ತಿಯರು. ನಾನು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ,” ಎಂದು ಆತ ಹೇಳಿದ್ದನು. ಆದರೆ ಈ ಸಂಬಂಧವನ್ನು ನಾನು ಒಪ್ಪಿಕೊಳಲಿಲ್ಲ. “ನೀನು ಈಗಾಗಲೇ ಮದುವೆಯಾಗಿದ್ದೀಯ, ಮಕ್ಕಳಿದ್ದಾರೆ. ಈ ತಾಳಿಗೆ ಯಾವ ಬೆಲೆ?” ಎಂದು ನಾನು ಪ್ರಶ್ನಿಸಿದ್ದೆ ಎಂದು ಹೇಳಿದಳು.
ಆದರೆ, ಆತನ ವರ್ತನೆ ಬದಲಾಗಿಲ್ಲ. “ನಾನು 15 ದಿನ ನಿನ್ನೊಂದಿಗೆ, 15 ದಿನ ಮನೆಯಲ್ಲಿ ಇರುತ್ತೇನೆ. ನನ್ನ ಹೆಂಡತಿ ನನಗೆ ಏನೂ ಹೇಳಲ್ಲ. ಹೊರಗಡೆ ಏನು ಬೇಕಾದರೂ ಮಾಡಿಕೊಂಡು ಬನ್ನಿ, ನಮಗೆ ಸಂಬಂಧವಿಲ್ಲ. ಆದರೆ ಮನೆಯಲ್ಲಿರುವ ಮಕ್ಕಳು ಮತ್ತು ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳಿ ಎಂದಿದ್ದಾಳೆ ಎಂದು ಅವನು ಹೇಳಿದ್ದ. ಅವನ ಈ ಮಾತಿಗೆ ನಾನು ಮೋಸ ಹೋದೆ. “ನನಗೆ ಎರಡು ಬಾರಿ ಗರ್ಭಪಾತವಾಗಿದೆ. ಆತ ನನ್ನನ್ನು ಶಾರೀರಿಕವಾಗಿ, ಮಾನಸಿಕವಾಗಿ ಬಳಸಿಕೊಂಡಿದ್ದಾನೆ. ನಂತರ ಬೆದರಿಕೆ ಹಾಕಿದ್ದಾನೆ, ಕೊಲೆಗೆ ಯತ್ನಿಸಿದ್ದಾನೆ,” ಎಂದು ಆಕೆ ಕಣ್ಣೀರಿಟ್ಟಿದ್ದಾಳೆ.
ಅವನಿಗೆ ಇತರ ಮಹಿಳೆಯರೊಂದಿಗೂ ಸಂಬಂಧವಿತ್ತು. ನಾನು ಇದನ್ನು ಪ್ರಶ್ನಿಸಿದಾಗ, ಅವನು ನನಗೆ ಚಿತ್ರಹಿಂಸೆ ನೀಡಿದ್ದಾನೆ. “ಮಾರ್ಚ್‌ನಲ್ಲಿ ಆತ ನನ್ನ ಖಾಸಗಿ ವಿಡಿಯೋ ತೆಗೆದು ಬ್ಲ್ಯಾಕ್‌ಮೇಲ್‌ಗೆ ಯತ್ನಿಸಿದ್ದ. ಅವನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೆ, ಒಮ್ಮೆ ಆತ್ಮಹತ್ಯೆಗೆ ಯತ್ನಿಸಿದ್ದೆ. ಆದರೆ, ಸ್ನೇಹಿತರ ಸಹಾಯದಿಂದ ಉಳಿದುಕೊಂಡಿದ್ದೀನಿ,” ಎಂದು ತಿಳಿಸಿದ್ದಾರೆ.
ಈ ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಿರುವ ಸಂತ್ರಸ್ತೆ, “ಆತನಿಗೆ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ.