ಲಂಡನ್: ಪೆಹಲ್ಗಾಂನಲ್ಲಿ ನಡೆದ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತವು ಆಪರೇಶನ್ ಸಿಂಧೂರ್ ಮೂಲಕ ಪಾಕಿಸ್ತಾನದ ಒಂಬತ್ತು ಉಗ್ರ ತರಬೇತಿ ಕೇಂದ್ರಗಳು ಮತ್ತು ತಾಣಗಳ ಮೇಲೆ ಮಿಸೈಲ್ ದಾಳಿ ನಡೆಸಿದೆ. ಈ ದಾಳಿಯಲ್ಲಿ 70 ಉಗ್ರರು ಸಾವನ್ನಪ್ಪಿದ್ದು, 60ಕ್ಕೂ ಹೆಚ್ಚು ಉಗ್ರರು ಗಾಯಗೊಂಡಿದ್ದಾರೆ. ಪಾಕಿಸ್ತಾನವು ಈ ಕಾರ್ಯಾಚರಣೆಯನ್ನು ಖಂಡಿಸಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ. ಚೀನಾ ಸೇರಿದಂತೆ ಕೆಲವು ದೇಶಗಳು ಪಾಕಿಸ್ತಾನಕ್ಕೆ ಬೆಂಬಲ ಸೂಚಿಸಿದರೆ, ಹಲವು ದೇಶಗಳು ಭಾರತದ ನಿರ್ಧಾರವನ್ನು ಸ್ವಾಗತಿಸಿವೆ. ಈ ನಡುವೆ, ಬ್ರಿಟನ್‌ನ ಮಾಜಿ ಪ್ರಧಾನಿ ರಿಷಿ ಸುನಕ್ ಅವರು ಆಪರೇಶನ್ ಸಿಂಧೂರ್‌ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ, ಕಾಶ್ಮೀರ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ.
ರಿಷಿ ಸುನಕ್ ಬೆಂಬಲದ ಹೇಳಿಕೆ
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಭಾರತದ ವಿರುದ್ಧ ಉಗ್ರ ದಾಳಿಗಳು ನಡೆಯುತ್ತಿರುವುದನ್ನು ರಿಷಿ ಸುನಕ್ ತಮ್ಮ ಟ್ವೀಟ್‌ನಲ್ಲಿ ಖಂಡಿಸಿದ್ದಾರೆ. “ಯಾವುದೇ ದೇಶವು ಭಯೋತ್ಪಾದಕ ದಾಳಿಯನ್ನು ಸಹಿಸಿಕೊಳ್ಳುವುದಿಲ್ಲ, ವಿಶೇಷವಾಗಿ ಇನ್ನೊಂದು ದೇಶದ ನಿಯಂತ್ರಣದಲ್ಲಿರುವ ಪ್ರದೇಶದಿಂದ ನಡೆಯುವ ದಾಳಿಗಳನ್ನು ಸಹಿಸಿಕೊಳ್ಳುವುದಿಲ್ಲ. ಭಾರತವು ಉಗ್ರರ ತಾಣಗಳನ್ನು ಧ್ವಂಸಗೊಳಿಸುವ ಮೂಲಕ ಸೂಕ್ತ ಉತ್ತರ ನೀಡಿದೆ. ಭಯೋತ್ಪಾದಕರಿಗೆ ಯಾವುದೇ ವಿನಾಯಿತಿ ಇಲ್ಲ,” ಎಂದು ಸುನಕ್ ಟ್ವೀಟ್ ಮಾಡಿದ್ದಾರೆ. ಈ ಹೇಳಿಕೆಯ ಮೂಲಕ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಉಗ್ರ ತಾಣಗಳಿರುವುದನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.
No nation should have to accept terrorist attacks being launched against it from land controlled by another country.
India is justified in striking terrorist infrastructure. There can be no impunity for terrorists.
— Rishi Sunak (@RishiSunak) May 7, 2025
ಪೆಹಲ್ಗಾಂ ದಾಳಿಯ ಖಂಡನೆ
ಪೆಹಲ್ಗಾಂನಲ್ಲಿ ನಡೆದ ಉಗ್ರ ದಾಳಿಯನ್ನು ರಿಷಿ ಸುನಕ್ ತೀವ್ರವಾಗಿ ಖಂಡಿಸಿದ್ದರು. ಈ ದಾಳಿಯಲ್ಲಿ 26 ಭಾರತೀಯರು ಮತ್ತು ಒಬ್ಬ ನೇಪಾಳಿ ಪ್ರಜೆ ಮೃತಪಟ್ಟಿದ್ದರು. “ನವ ದಂಪತಿಗಳು, ಮಕ್ಕಳು, ಕುಟುಂಬಗಳು ಸೇರಿದಂತೆ ಮುಗ್ಧರನ್ನು ಬಲಿತೆಗೆದುಕೊಂಡ ಈ ದಾಳಿ ತೀವ್ರ ನೋವುಂಟು ಮಾಡಿದೆ. ಭಯೋತ್ಪಾದಕತೆ ಗೆಲುವು ಸಾಧಿಸುವುದಿಲ್ಲ. ಬ್ರಿಟನ್ ಭಾರತದ ಜೊತೆ ಇದೆ,” ಎಂದು ಸುನಕ್ ಟ್ವೀಟ್‌ನಲ್ಲಿ ತಿಳಿಸಿದ್ದರು.
ಆಪರೇಶನ್ ಸಿಂಧೂರ್ ವಿವರ
ಮೇ 7, 2025 ರ ಮಧ್ಯರಾತ್ರಿ 1 ಗಂಟೆಗೆ ಭಾರತೀಯ ಸೇನೆಯು ಪಾಕಿಸ್ತಾನದ 9 ಉಗ್ರ ತಾಣಗಳ ಮೇಲೆ 25 ನಿಮಿಷಗಳಲ್ಲಿ 24 ಮಿಸೈಲ್ ದಾಳಿಗಳನ್ನು ನಡೆಸಿತು. ಈ ಕಾರ್ಯಾಚರಣೆಯಲ್ಲಿ ಒಂಬತ್ತು ಉಗ್ರ ತಾಣಗಳು ಸಂಪೂರ್ಣವಾಗಿ ಧ್ವಂಸಗೊಂಡವು. ಈ ದಾಳಿಯಿಂದ ಪಾಕಿಸ್ತಾನಕ್ಕೆ ತೀವ್ರ ಆಘಾತವಾಗಿದ್ದು, ದಾಳಿಯ ಬಳಿಕವೇ ಅವರಿಗೆ ಇದರ ಮಾಹಿತಿ ತಿಳಿದಿದೆ.
ಯುಕೆ ಸಚಿವರ ಪ್ರತಿಕ್ರಿಯೆ
ಬ್ರಿಟನ್‌ನ ಟ್ರೇಡ್ ಕಾರ್ಯದರ್ಶಿ ಜೋನಾಥನ್ ರೇನಾಲ್ಡ್ಸ್ ಈ ಕುರಿತು ಪ್ರತಿಕ್ರಿಯಿಸಿದ್ದು, “ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳ ಜೊತೆ ಬ್ರಿಟನ್ ಉತ್ತಮ ಸಂಬಂಧ ಹೊಂದಿದೆ. ಈ ಯುದ್ಧ ಪರಿಸ್ಥಿತಿಯಿಂದ ಎರಡೂ ದೇಶಗಳು ಹಿಂದೆ ಸರಿಯಬೇಕು ಮತ್ತು ಶಾಂತಿ ಸ್ಥಾಪನೆಯಾಗಬೇಕು,” ಎಂದಿದ್ದಾರೆ.