ಬಿಹಾರದ 14 ವರ್ಷದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಐಪಿಎಲ್ 2025ರಲ್ಲಿ ಸಾಧಿಸಿದ ಐತಿಹಾಸಿಕ ಶತಕಕ್ಕೆ ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಬಿಹಾರದ ಪಾಟ್ನಾದಲ್ಲಿ ನಡೆದ ಖೇಲೋ ಇಂಡಿಯಾ ಯುವ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ವರ್ಚುವಲ್ ಮೂಲಕ ಮಾತನಾಡಿದ ಮೋದಿ, ವೈಭವ್‌ನ ಕಠಿಣ ಪರಿಶ್ರಮ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಭಾರತದ ಭವಿಷ್ಯವನ್ನು ಮೆಚ್ಚಿಕೊಂಡರು. ಜೊತೆಗೆ, ಕ್ರೀಡಾ ವಲಯಕ್ಕೆ 4000 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿರುವುದಾಗಿ ಘೋಷಿಸಿದರು.
ವೈಭವ್‌ನ ಐತಿಹಾಸಿಕ ಸಾಧನೆ
ಏಪ್ರಿಲ್ 28, 2025ರಂದು ರಾಜಸ್ಥಾನದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಐಪಿಎಲ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸಿ ಇತಿಹಾಸ ನಿರ್ಮಿಸಿದರು. 7 ಬೌಂಡರಿ ಮತ್ತು 11 ಸಿಕ್ಸರ್‌ಗಳೊಂದಿಗೆ 100 ರನ್ ಗಳಿಸಿದ ವೈಭವ್, ಐಪಿಎಲ್ ಇತಿಹಾಸದ ಎರಡನೇ ಅತಿ ವೇಗದ ಶತಕದ ದಾಖಲೆ ಬರೆದರು. ಕೇವಲ 14 ವರ್ಷ 32 ದಿನಗಳ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ವೈಭವ್, ಟಿ20 ಕ್ರಿಕೆಟ್‌ನಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ವಿಶ್ವ ದಾಖಲೆಗೆ ಪಾತ್ರರಾಗಿದ್ದಾರೆ.
Bihar’s pride & IPL’s youngest player, Vaibhav Suryavanshi has caught the attention of none other than PM Modi.
It’s clear—no talent goes unnoticed by him 🗿 pic.twitter.com/uGtO3zOr6v
— BALA (@erbmjha) May 4, 2025
ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ, “ಬಿಹಾರದ ಮಗ ವೈಭವ್ ಸೂರ್ಯವಂಶಿ ಐಪಿಎಲ್‌ನಲ್ಲಿ ದೇಶದ ಗಮನ ಸೆಳೆದಿದ್ದಾನೆ. ಕಿರಿಯ ವಯಸ್ಸಿನಲ್ಲಿ ಇಂತಹ ದೊಡ್ಡ ದಾಖಲೆ ಸೃಷ್ಟಿಸಿರುವುದು ಅವನ ಕಠಿಣ ಪರಿಶ್ರಮ ಮತ್ತು ವಿವಿಧ ಹಂತಗಳಲ್ಲಿ ಆಡಿದ ಅನುಭವದ ಫಲ. ಹೆಚ್ಚು ಆಟವಾಡಿದಷ್ಟೂ ಆಟಗಾರರು ಪ್ರಕಾಶಮಾನವಾಗಿ ಹೊಳೆಯುತ್ತಾರೆ,” ಎಂದು ಶ್ಲಾಘಿಸಿದರು.
ಕ್ರೀಡಾ ಕ್ಷೇತ್ರದಲ್ಲಿ ಭಾರತದ ಭವಿಷ್ಯ
ಕಾರ್ಯಕ್ರಮದಲ್ಲಿ ಮೋದಿ, ಭಾರತದ ಕ್ರೀಡಾ ಕ್ಷೇತ್ರದ ಪ್ರಗತಿಯನ್ನು ಒತ್ತಿಹೇಳಿದರು. “ಕ್ರೀಡೆ ಇಂದು ಕೇವಲ ಸ್ಪರ್ಧೆಯಲ್ಲ, ಭಾರತದ ಗುರುತಾಗಿದೆ. ಕ್ರೀಡಾ ಕ್ಷೇತ್ರದಲ್ಲಿ ದೇಶದ ಪ್ರಗತಿಯು ರಾಷ್ಟ್ರದ ಶಕ್ತಿಯನ್ನು ಹೆಚ್ಚಿಸುತ್ತದೆ. ಕ್ರೀಡೆಗಾಗಿ 4000 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದ್ದೇವೆ, ಇದರಿಂದ ಕ್ರೀಡಾಪಟುಗಳಿಗೆ ಉತ್ತಮ ಮೂಲಸೌಕರ್ಯ ಸಿಗಲಿದೆ. ಭಾರತದ ಕ್ರೀಡಾ ಭವಿಷ್ಯ ಉಜ್ವಲವಾಗಿದೆ,” ಎಂದು ಭರವಸೆ ನೀಡಿದರು.
ವೈಭವ್‌ನ ಸಾಧನೆಯನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕೂಡ ಮೆಚ್ಚಿಕೊಂಡಿದ್ದು, 10 ಲಕ್ಷ ರೂಪಾಯಿಗಳ ನಗದು ಬಹುಮಾನ ಘೋಷಿಸಿದ್ದಾರೆ.





