ಜಾತಿಗಣತಿ ವಿವಾದವನ್ನು ಮುಂದಿಟ್ಟುಕೊಂಡು ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಜಾತಿಗಣತಿಯ ಹೆಸರಿನಲ್ಲಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಎರಡನ್ನೂ ಕುರಿಯಾಗಿಸಿದ್ದಾರೆ. ಹೀಗೆ ಜಾತಿ ವಿಚಾರವನ್ನು ಮುನ್ನೆಲೆಗೆ ತಂದು, ಇತರ ಪ್ರಮುಖ ವಿಷಯಗಳಿಂದ ಜನರ ಗಮನ ಬೇರೆಡೆ ತಿರುಗಿಸುತ್ತಿದ್ದಾರೆ” ಎಂದು ಆರೋಪಿಸಿದರು.
ಈ ಜಾತಿಗಣತಿ ಹಿಂದೂ ಧರ್ಮವನ್ನೇ ವಿಭಜನೆ ಮಾಡುವ ಉದ್ದೇಶದಿಂದ ನಡೀತಿದೆ.
“ಲಿಂಗಾಯತರು, ಒಕ್ಕಲಿಗರು, ಓಬಿಸಿ ಜನಸಂಖ್ಯೆ ಕಡಿಮೆ ಆಗಿದೆ ಅಂತ ನೋಡಿ ಆತಂಕ ಪಡಬೇಡಿ. ಹಿಂದೂಧರ್ಮದ ಒಟ್ಟಾರೆ ಸ್ಥಿತಿಯತ್ತ ಗಮನ ಹರಿಸಬೇಕು. ನಮ್ಮ-ನಿಮ್ಮ ಜಾತಿ ಕಡಿಮೆಯಾಯಿತೆಂದು ಮಂಗ್ಯಗಳು ಕಿತ್ತಾಡುವ ರೀತಿಯಲ್ಲಿ ವರ್ತನೆ ಮಾಡಿದರೆ, ಹಿಂದೂಧರ್ಮವೇ ಕುಸಿಯುತ್ತದೆ” ಎಂದು ಎಚ್ಚರಿಕೆ ನೀಡಿದರು.
ಸಿಎಂ ಸಿದ್ದರಾಮಯ್ಯ ಆಗ ಅಹಿಂದ ಅಂತಾ ಆಗ ಒಂದು ವರ್ಗ ಒಡೆದರು. ಈಗ ಜಾತಿಗಣತಿ ಹೆಸರಲ್ಲಿ ಇಡೀ ಹಿಂದೂ ಧರ್ಮ ಒಡೆಯುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳು ಹಳ್ಳ ಹಿಡಿದಿವೆ. ಬೆಲೆ ಏರಿಕೆಯಾಗಿದೆ. ಮುಡಾ ಹಗರಣ, ವಾಲ್ಮೀಕಿ ಹಗರಣ ನಡೆದಿದೆ.
ಇವೆಲ್ಲವನ್ನು ಮರೆ ಮಾಚಲು ಜಾತಿಗಣತಿ ಬಿಚ್ಚಿಟ್ಟಿದ್ದಾರೆ. ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಮಾಡುತ್ತಿರುವ ನಾಟಕ ಇದು. ಲಿಂಗಾಯತರಿಗೆ, ಒಕ್ಕಲಿಗರು, ಒಬಿಸಿ ಎಲ್ಲದರಲ್ಲೂ ಉಪಜಾತಿ ಲೆಕ್ಕ ಹಾಕಲಾಗಿದೆ. ಮುಸ್ಲಿಂ, ಕ್ರಿಶ್ಚಿಯನ್‌ರಲ್ಲಿ ಉಪಜಾತಿ ಯಾಕೆ ಲೆಕ್ಕ ಹಾಕಿಲ್ಲ ಎಂದು ಪ್ರಶ್ನಿಸಿದರು.
ನಿಮ್ಮ ಪಕ್ಷದಲ್ಲೇ ಜಾತಿಗಣತಿ ಗೊಂದಲ ಇದೆ. ಒಂದು ಕಡೆ ಡಿಕೆ ಶಿವಕುಮಾರ್ ಒಕ್ಕಲಿಗ ಶಾಸಕರ ಸಭೆ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಶ್ಯಾಮನೂರು ಶಿವಶಂಕರಪ್ಪ ಲಿಂಗಾಯತರ ಸಭೆ ಕರೆದಿದ್ದಾರೆ ಎಂದು ಹೇಳಿದರು.