ಟೀಕೆ, ಟಿಪ್ಪಣಿಗಳ ನಡುವೆಯೂ ಸಿಎಂ ವಿಜಯ್ ಜೊತೆ ಸಿಕ್ಕಾಪಟ್ಟೆ ಸುದ್ದಿಯಲ್ಲಿರೋ ನಟಿ ತ್ರಿಷಾ.. ಇದೀಗ ನಮ್ಮ ಕರುನಾಡಿನ ಶಾರದಾ ಮಠ ಶೃಂಗೇರಿಗೆ ಭೇಟಿ ನೀಡಿದ್ದಾರೆ. ತಾಯಿ ಶಾರದೆ ದರ್ಶನ ಪಡೆದು.. ಬಹುದೊಡ್ಡ ಹರಕೆ ಕೂಡ ಮಾಡಿಕೊಂಡಿದ್ದಾರೆ. ಆಕೆ ಮಾಡಿಕೊಂಡ ಆ ಸೀಕ್ರೆಟ್ ಹರಕೆ ಯಾವುದು..? ಅದು ನೆರವೇರುತ್ತಾ ಇಲ್ವಾ ಅನ್ನೋದ್ರ ಕ್ಯೂರಿಯಸ್ ಕಹಾನಿ ಇಲ್ಲಿದೆ..
- ಶೃಂಗೇರಿ ಶಾರದಾ ಪೀಠದಲ್ಲಿ ತ್ರಿಷಾ.. ಹರಕೆ ಹೊತ್ತಿದ್ದೇನು ಗೊತ್ತಾ?
- ಡಿವೈನ್ ಪೋಸ್ಟ್.. ತಾಯಿ ಶಾರದೆ ರಾಜಗೋಪುರ ಮುಂದೆ ತ್ರಿಷಾ
- ದೇವಿಯ ದರ್ಶನದ ಹಿಂದೆ ತ್ರಿಷಾ ಪೊಲಿಟಿಕಲ್ ಲೆಕ್ಕಾಚಾರಗಳು?
- ತಮಿಳುನಾಡು ಪಾಲಿಟಿಕ್ಸ್.. ವಿಜಯ್ ಟಿವಿಕೆಗೆ ಗ್ರ್ಯಾಂಡ್ ಎಂಟ್ರಿ..!
ದಕ್ಷಿಣ ಭಾರತದ ಬಹುಭಾಷಾ ಸ್ಟಾರ್ ನಟಿ ತ್ರಿಷಾ ಕೃಷ್ಣನ್ ಕರ್ನಾಟಕದ ಪ್ರಸಿದ್ಧ ಆಧ್ಯಾತ್ಮಿಕ ಕ್ಷೇತ್ರವಾದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾ ಪೀಠಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದಿದ್ದಾರೆ. ಸಿನಿಮಾ ಶೂಟಿಂಗ್ ಮತ್ತು ಪ್ರಚಾರ ಕಾರ್ಯಗಳ ಬ್ಯುಸಿ ಶೆಡ್ಯೂಲ್ ನಡುವೆಯೂ ಆಧ್ಯಾತ್ಮಿಕ ಕ್ಷಣಗಳಿಗಾಗಿ ಸಮಯ ಮೀಸಲಿಟ್ಟಿರುವ ತ್ರಿಷಾ, ಸಂಜೆಯ ವೇಳೆಯಲ್ಲಿ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದ ಭವ್ಯ ರಾಜಗೋಪುರದ ಮುಂದೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಸರಳವಾದ ಸಲ್ವಾರ್ ಕಮೀಜ್ ಧರಿಸಿ, ದೇವಾಲಯದ ಆವರಣದಲ್ಲಿ ಬರಿಗಾಲಿನಲ್ಲಿ ನಿಂತಿರುವ ತ್ರಿಷಾ ಅವರ ಈ ಸಾಂಪ್ರದಾಯಿಕ ಲುಕ್ ಕಂಡು ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.
ಶೃಂಗೇರಿ ಶಾರದಾಂಬೆಯ ಸನ್ನಿಧಿಯಲ್ಲಿ ತೆಗೆದ ಸುಂದರ ಫೋಟೋವನ್ನು ತ್ರಿಷಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದು, ಉದ್ದುದ್ದ ಸಾಲುಗಳ ಬದಲು ಕೇವಲ ಒಂದೇ ಒಂದು ಪದವನ್ನು ಕ್ಯಾಪ್ಶನ್ ಆಗಿ ಬರೆದಿದ್ದಾರೆ ಅದುವೇ ‘DIVINE’ ದೈವಿಕ. ವಿಶೇಷ ಅಂದ್ರೆ, ಈ ಸ್ಟೋರಿಗೆ ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್ ಅವರ ಮಧುರ ಹಿನ್ನೆಲೆ ಸಂಗೀತವನ್ನು ಸೇರಿಸಿರುವುದು ಕನ್ನಡಿಗರ ಗಮನವನ್ನು ಮತ್ತಷ್ಟು ಸೆಳೆದಿದೆ. ಸೂಕ್ಷ್ಮ ಕೆತ್ತನೆಗಳಿಂದ ಕೂಡಿದ ರಾಜಗೋಪುರದ ಹಿನ್ನೆಲೆ ಮತ್ತು ಅಜನೀಶ್ ಸಂಗೀತ ಈ ಸ್ಟೋರಿಗೆ ವಿಶೇಷ ಕಳೆ ತಂದಿದೆ.
ಅಷ್ಟಕ್ಕೂ ತ್ರಿಷಾ ದಿಢೀರ್ ಅಂತ ಶೃಂಗೇರಿ ಶಾರದಾ ಪೀಠಕ್ಕೆ ಭೇಟಿ ನೀಡಿ ಹರಕೆ ಹೊತ್ತಿದ್ದಾದ್ರೂ ಯಾಕೆ ಎಂಬ ಚರ್ಚೆ ಈಗ ಗಾಂಧಿನಗರದಿಂದ ಚೆನ್ನೈವರೆಗೂ ಜೋರಾಗಿದೆ. ತಮಿಳುನಾಡು ರಾಜಕೀಯಕ್ಕೆ ತ್ರಿಷಾ ಎಂಟ್ರಿ ಕೊಡಲಿದ್ದಾರೆ ಎಂಬ ವದಂತಿಗಳು ಹಾಗೂ ಅಭಿಮಾನಿಗಳ ಘೋಷಣೆಗಳು ಇತ್ತೀಚೆಗೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಈ ರಾಜಕೀಯ ಪ್ರವೇಶದ ಊಹಾಪೋಹಗಳ ಬೆನ್ನಲ್ಲೇ ತ್ರಿಷಾ ಶಾರದಾಂಬೆಯ ದರ್ಶನ ಪಡೆದಿರುವುದರಿಂದ, ತಮ್ಮ ಹೊಸ ಹೆಜ್ಜೆಗೆ ದೇವಿಯ ಆಶೀರ್ವಾದ ಪಡೆಯಲು ಮತ್ತು ವಿಶೇಷ ಹರಕೆ ತೀರಿಸಲು ಬಂದಿರಬಹುದು ಎಂಬ ಗುಸುಗುಸು ಶುರುವಾಗಿದೆ.
ತ್ರಿಷಾ ಅವರಿಗೆ ಕರ್ನಾಟಕ ಮತ್ತು ಕನ್ನಡ ಚಿತ್ರರಂಗದ ಜೊತೆ ಮೊದಲಿನಿಂದಲೂ ವಿಶೇಷ ನಂಟಿದೆ. 2014ರಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಸೂಪರ್‌ಹಿಟ್ ಸಿನಿಮಾ ಪವರ್ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದ ತ್ರಿಷಾ, ಇಲ್ಲಿಯೂ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಈಗ ಕರ್ನಾಟಕದ ಶೃಂಗೇರಿಗೆ ಭೇಟಿ ನೀಡಿ, ಕನ್ನಡದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರ ಟ್ಯೂನ್ ಬಳಸಿರುವುದು ಕನ್ನಡಿಗರ ಮನಸ್ಸಿಗೆ ಮತ್ತಷ್ಟು ಹತ್ತಿರವಾಗಿದೆ.
ಸದ್ಯ ಕಾಲಿವುಡ್, ಟಾಲಿವುಡ್ ಮತ್ತು ಮಾಲಿವುಡ್‌ನ ಬಿಗ್ ಬಜೆಟ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ತ್ರಿಷಾ ಕೃಷ್ಣನ್, ಬಿಡುವಿನ ವೇಳೆಯಲ್ಲಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುವುದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಒಟ್ಟಿನಲ್ಲಿ ಶೃಂಗೇರಿ ಶಾರದಾ ಪೀಠದ ಮುಂದೆ ತ್ರಿಷಾ ಹಂಚಿಕೊಂಡಿರುವ ಆ ಒಂದು ಫೋಟೋ ಸದ್ಯ ಇಂಟರ್‌ನೆಟ್‌ನಲ್ಲಿ ಸಖತ್ ವೈರಲ್ ಆಗಿದ್ದು, ಸಿನಿಮಾ ಜೊತೆಗೆ ಅವರ ರಾಜಕೀಯ ನಡೆಯ ಬಗ್ಗೆಯೂ ಕುತೂಹಲ ಹೆಚ್ಚಿಸಿದೆ. ಟೀಕೆ, ಟಿಪ್ಪಣಿಗಳ ನಡುವೆ ಸಿಎಂ ವಿಜಯ್ ಜೊತೆ ಎಲ್ಲೆಡೆ ಕಾಣಿಸಿಕೊಳ್ಳೋ ತ್ರಿಷಾ.. ಟಿವಿಕೆ ಪಕ್ಷ ಸೇರುವ ಮೂಲಕ ಜಯಲಲಿತಾ ರೀತಿ ಪಾಲಿಟಿಕ್ಸ್‌ಗೆ ಪದಾರ್ಪಣೆ ಮಾಡಲಿದ್ದಾರೆ ಎನ್ನಲಾಗ್ತಿದೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





