ಸ್ಯಾನ್ ಜುವಾನ್: 75ನೇ ಆವೃತ್ತಿಯ ಪ್ರತಿಷ್ಠಿತ ಮಿಸ್ ಯೂನಿವರ್ಸ್ 2026 (Miss Universe 2026) ಸ್ಪರ್ಧೆಗೆ ತೆರೆ ಬಿದ್ದಿದೆ. ಪೋರ್ಟೊ ರಿಕೊದ 27 ವರ್ಷದ ಜೆನ್ನಿಫರ್ ಬ್ಯಾರೆಟೊ (Jennifer Barreto) ಈ ಬಾರಿಯ ವಿಶ್ವ ಸುಂದರಿಯಾಗಿ ಹೊರಹೊಮ್ಮಿದ್ದು, ಭವ್ಯ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಪೋರ್ಟೊ ರಿಕೊದ ತವರು ನೆಲ ಸ್ಯಾನ್ ಜುವಾನ್ನಲ್ಲಿ ನಡೆದ ಅಂತಿಮ ಸುತ್ತಿನಲ್ಲಿ ಜೆನ್ನಿಫರ್ ಅದ್ಭುತ ಪ್ರದರ್ಶನ ನೀಡಿ ಪ್ರಶಸ್ತಿ ಗೆದ್ದಿದ್ದಾರೆ. ಮೆಕ್ಸಿಕೊದ ಹಾಲಿ ವಿಶ್ವ ಸುಂದರಿ ಫಾತಿಮಾ ಬಾಷ್ ತಮ್ಮ ಉತ್ತರಾಧಿಕಾರಿಗೆ ಕಿರೀಟ ತೊಡಿಸಿದ್ದಾರೆ. ಇನ್ನು ಭಾರತವನ್ನು ಪ್ರತಿನಿಧಿಸಿದ್ದ ಕಜಿಯಾ ಲಿಜ್ ಮೆಜೊ ಟಾಪ್ 30ರಲ್ಲಿ ಸ್ಥಾನ ಪಡೆದರೂ, ಟಾಪ್ 12 ಸುತ್ತಿಗೆ ಪ್ರವೇಶ ಪಡೆಯುವಲ್ಲಿ ವಿಫಲರಾಗಿದ್ದಾರೆ.
ವಿಶ್ವದ ವಿವಿಧ ದೇಶಗಳ 116 ಸ್ಪರ್ಧಿಗಳು ಭಾಗವಹಿಸಿದ್ದ ಈ ಬಾರಿಯ ಸ್ಪರ್ಧೆಯಲ್ಲಿ ಆರಂಭದಿಂದಲೇ ಭಾರಿ ಪೈಪೋಟಿ ಕಂಡುಬಂದಿತ್ತು. ರಾಷ್ಟ್ರೀಯ ಉಡುಗೆ, ಈಜುಡುಗೆ, ಸಂಜೆಯ ಉಡುಗೆ ಹಾಗೂ ಅಂತಿಮ ಪ್ರಶ್ನೋತ್ತರ ಸುತ್ತುಗಳಲ್ಲಿ ಸ್ಪರ್ಧಿಗಳ ಸಾಮರ್ಥ್ಯವನ್ನು ಪರೀಕ್ಷಿಸಲಾಯಿತು. ಕೊನೆಗೆ ಪೋರ್ಟೊ ರಿಕೊದ ಜೆನ್ನಿಫರ್ ಬ್ಯಾರೆಟೊ ವಿಜೇತರಾಗಿ ಹೊರಹೊಮ್ಮಿದರು.
ಭಾರತಕ್ಕೆ ಎಷ್ಟನೇ ಸ್ಥಾನ?
ಈ ಬಾರಿ ಭಾರತವನ್ನು ಪ್ರತಿನಿಧಿಸಿದ್ದ ಕಜಿಯಾ ಲಿಜ್ ಮೆಜೊ (Kaziah Liz Mejo) ಉತ್ತಮ ಪ್ರದರ್ಶನದ ಮೂಲಕ ಟಾಪ್ 30 ಸ್ಪರ್ಧಿಗಳ ಪಟ್ಟಿಗೆ ಆಯ್ಕೆಯಾಗಿದ್ದರು. ಆದರೆ ಟಾಪ್ 30ರಿಂದ ಟಾಪ್ 12ಕ್ಕೆ ಆಯ್ಕೆ ಮಾಡುವ ಸುತ್ತಿನಲ್ಲಿ ಅವರು ಮುಂದಿನ ಹಂತಕ್ಕೆ ಪ್ರವೇಶ ಪಡೆಯಲಿಲ್ಲ. ಹೀಗಾಗಿ ಭಾರತದ ವಿಶ್ವ ಸುಂದರಿ ಕಿರೀಟದ ಕನಸು ಈ ಬಾರಿಯೂ ನನಸಾಗಿಲ್ಲ.
ಕೇರಳ ಮೂಲದ 19 ವರ್ಷದ ಕಜಿಯಾ ಲಿಜ್ ಮೆಜೊ ಈ ವರ್ಷದ ಮಿಸ್ ಯೂನಿವರ್ಸ್ ಇಂಡಿಯಾ ಕಿರೀಟ ಗೆದ್ದು ಭಾರತವನ್ನು ಪ್ರತಿನಿಧಿಸುವ ಅವಕಾಶ ಪಡೆದಿದ್ದರು. ಮಿಸ್ ಯೂನಿವರ್ಸ್ ವೇದಿಕೆಯಲ್ಲಿ ಟಾಪ್ 30 ತಲುಪಿರುವುದು ಅವರ ಪಾಲಿಗೆ ಪ್ರಮುಖ ಸಾಧನೆಯಾಗಿದೆ.
ಯಾರು ಈ ನೂತನ ವಿಶ್ವ ಸುಂದರಿ ಜೆನ್ನಿಫರ್ ಬ್ಯಾರೆಟೊ?
27 ವರ್ಷದ ಜೆನ್ನಿಫರ್ ಬ್ಯಾರೆಟೊ ಕೇವಲ ಸೌಂದರ್ಯದ ಮೂಲಕವಷ್ಟೇ ಅಲ್ಲ, ತಮ್ಮ ಶೈಕ್ಷಣಿಕ ಸಾಧನೆ ಮತ್ತು ಸಮಾಜಮುಖಿ ಕೆಲಸಗಳ ಮೂಲಕವೂ ಗುರುತಿಸಿಕೊಂಡಿದ್ದಾರೆ. ಸಂಶೋಧನಾ ಮನೋವಿಜ್ಞಾನದಲ್ಲಿ ಪದವಿ ಪಡೆದಿರುವ ಅವರು, ಮನೋವಿಜ್ಞಾನ ಮತ್ತು ಕ್ಲಿನಿಕಲ್ ಸೋಶಿಯಲ್ ವರ್ಕ್ನಲ್ಲಿ ಸ್ನಾತಕೋತ್ತರ ಪದವಿಗಳನ್ನು ಹೊಂದಿದ್ದಾರೆ.
ಪ್ರಸ್ತುತ ಅವರು ಪ್ರಿವೆನ್ಷನ್ ಸ್ಪೆಷಲಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಾನಸಿಕ ಆರೋಗ್ಯ, ಕೌಟುಂಬಿಕ ಸುರಕ್ಷತೆ ಮತ್ತು ಮಕ್ಕಳ ರಕ್ಷಣೆಯಂತಹ ಸಾಮಾಜಿಕ ಕಾಳಜಿಯ ಕ್ಷೇತ್ರಗಳಲ್ಲಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ.
ರಕ್ಷಣಾ ಇಲಾಖೆ ಮತ್ತು ಸಮಾಜ ಸೇವೆಯಲ್ಲಿ ಗುರುತು
2021ರಲ್ಲಿ ಅಮೆರಿಕದ ಟೆಕ್ಸಾಸ್ನ ಫೋರ್ಟ್ ಹುಡ್ನಲ್ಲಿರುವ ರಕ್ಷಣಾ ಇಲಾಖೆಯಲ್ಲಿ ಜೆನ್ನಿಫರ್ ತಮ್ಮ ವೃತ್ತಿಜೀವನ ಆರಂಭಿಸಿದ್ದರು. ಫ್ಯಾಮಿಲಿ ಅಡ್ವೊಕಸಿ ಪ್ರೋಗ್ರಾಂ ಅಡಿಯಲ್ಲಿ ಶಿಕ್ಷಕಿಯಾಗಿ ಹಾಗೂ ಬಿಕ್ಕಟ್ಟು ನಿರ್ವಹಣಾ ಸಹ-ಪ್ರತಿಸ್ಪಂದಕರಾಗಿ ಸೇವೆ ಸಲ್ಲಿಸಿದ್ದರು.
ಕೌಟುಂಬಿಕ ಹಿಂಸಾಚಾರ ಮತ್ತು ಮಕ್ಕಳ ಮೇಲಿನ ದೌರ್ಜನ್ಯದಿಂದ ಸಂಕಷ್ಟ ಅನುಭವಿಸುವ ಸೇನಾ ಕುಟುಂಬಗಳಿಗೆ ನೆರವಾಗುವ ಕೆಲಸದಲ್ಲಿ ಅವರು ತೊಡಗಿಸಿಕೊಂಡಿದ್ದರು. ಇದರ ಜೊತೆಗೆ ಕಾರ್ಲ್ ಆರ್. ಡಾರ್ನಾಲ್ ಆರ್ಮಿ ಮೆಡಿಕಲ್ ಸೆಂಟರ್ನಲ್ಲಿ ಸ್ವಯಂಸೇವಕಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಪೋರ್ಟೊ ರಿಕೊದ ಪೀಡಿಯಾಟ್ರಿಕ್ ಡಯಾಬಿಟಿಸ್ ಅಸೋಸಿಯೇಷನ್ನೊಂದಿಗೆ ಸಮಾಜ ಸೇವೆಯಲ್ಲೂ ಸಕ್ರಿಯರಾಗಿದ್ದಾರೆ.
ಪೋರ್ಟೊ ರಿಕೊಗೆ ಆರನೇ ವಿಶ್ವ ಸುಂದರಿ ಕಿರೀಟ
ಜೆನ್ನಿಫರ್ ಬ್ಯಾರೆಟೊ ಅವರ ಗೆಲುವಿನೊಂದಿಗೆ ಪೋರ್ಟೊ ರಿಕೊ ಆರನೇ ಬಾರಿಗೆ ಮಿಸ್ ಯೂನಿವರ್ಸ್ ಪ್ರಶಸ್ತಿ ಗೆದ್ದಿದೆ. ಈ ಹಿಂದೆ 1970ರಲ್ಲಿ ಮಾರಿಸೋಲ್ ಮಲಾರೆಟ್, 1985ರಲ್ಲಿ ಡೆಬೊರಾ ಕಾರ್ತಿ-ಡೆಯು, 1993ರಲ್ಲಿ ದಯನಾರಾ ಟೊರೆಸ್, 2001ರಲ್ಲಿ ಡೆನಿಸ್ ಕ್ವಿನೋನ್ಸ್ ಹಾಗೂ 2006ರಲ್ಲಿ ಜುಲೇಯ್ಕಾ ರಿವೆರಾ ವಿಶ್ವ ಸುಂದರಿ ಪಟ್ಟ ಅಲಂಕರಿಸಿದ್ದರು. ಇದೀಗ ಸುಮಾರು 20 ವರ್ಷಗಳ ಬಳಿಕ ಪೋರ್ಟೊ ರಿಕೊಗೆ ಮತ್ತೊಮ್ಮೆ ವಿಶ್ವ ಸುಂದರಿ ಕಿರೀಟ ಒಲಿದಿದೆ.
ಭಾರತದ ನಾಲ್ಕನೇ ಕಿರೀಟ
ಭಾರತ ಈವರೆಗೆ ಮೂರು ಬಾರಿ ಮಿಸ್ ಯೂನಿವರ್ಸ್ ಕಿರೀಟ ಗೆದ್ದಿದೆ. 1994ರಲ್ಲಿ ಸುಶ್ಮಿತಾ ಸೇನ್, 2000ರಲ್ಲಿ ಲಾರಾ ದತ್ತಾ ಮತ್ತು 2021ರಲ್ಲಿ ಹರ್ನಾಜ್ ಸಂಧು ಈ ಸಾಧನೆ ಮಾಡಿದ್ದರು.
2021ರಲ್ಲಿ ಹರ್ನಾಜ್ ಸಂಧು ಗೆಲುವಿನ ನಂತರ ಭಾರತಕ್ಕೆ ಮತ್ತೊಂದು ವಿಶ್ವ ಸುಂದರಿ ಕಿರೀಟ ಒಲಿದಿಲ್ಲ. ಇದೀಗ 2026ರ ಸ್ಪರ್ಧೆಯಲ್ಲೂ ಕಜಿಯಾ ಲಿಜ್ ಮೆಜೊ ಟಾಪ್ 30ಕ್ಕೆ ಸೀಮಿತವಾಗಿರುವುದರಿಂದ ಭಾರತದ ನಾಲ್ಕನೇ ಕಿರೀಟದ ನಿರೀಕ್ಷೆ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿದೆ.





