ದಾವಣಗೆರೆ/ವಿಜಯನಗರ: ಪ್ರೇಮ ವಿವಾಹದ ವಿಚಾರವಾಗಿ ಎರಡು ಸಮುದಾಯಗಳ ನಡುವೆ ಭೀಕರ ಸಂಘರ್ಷ ನಡೆದಿರುವ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಸತ್ತೂರು ಗೊಲ್ಲರಹಟ್ಟಿ ಗ್ರಾಮದಲ್ಲಿ ನಡೆದಿದೆ. ಪ್ರೀತಿಸಿ ಮದುವೆಯಾದ ಯುವಕ ಮತ್ತು ಯುವತಿಯ ವಿಚಾರವಾಗಿ ಎರಡೂ ಸಮುದಾಯಗಳ ಜನರ ನಡುವೆ ಗಲಾಟೆ ವಿಕೋಪಕ್ಕೆ ತಿರುಗಿದ್ದು, ದೊಣ್ಣೆ, ಕೋಲು ಹಾಗೂ ಕಲ್ಲುಗಳಿಂದ ಪರಸ್ಪರ ಹಲ್ಲೆ ನಡೆಸಲಾಗಿದೆ. ಈ ಘಟನೆಯಲ್ಲಿ ಐದಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಪ್ರೇಮ ವಿವಾಹವೇ ಸಂಘರ್ಷಕ್ಕೆ ಕಾರಣ?
ಸತ್ತೂರು ಗೊಲ್ಲರಹಟ್ಟಿ ಗ್ರಾಮದ ಯುವಕ ಮತ್ತು ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಯುವಕ ಮತ್ತು ಯುವತಿ ಬೇರೆ ಬೇರೆ ಸಮುದಾಯ ಎಂದು ತಿಳಿದುಬಂದಿದೆ. ಇಬ್ಬರೂ ಪ್ರೀತಿಸಿ ಮದುವೆಯಾಗುವ ನಿರ್ಧಾರ ಕೈಗೊಂಡು, ಸುಮಾರು ಮೂರು-ನಾಲ್ಕು ದಿನಗಳ ಹಿಂದೆ ಮನೆ ಬಿಟ್ಟು ತೆರಳಿದ್ದರು. ಬಳಿಕ ಇಬ್ಬರೂ ವಿವಾಹವಾಗಿದ್ದರು.
ಆದರೆ, ಈ ಮದುವೆಯ ವಿಚಾರ ಯುವತಿಯ ಸಮುದಾಯದ ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ವಿಚಾರವಾಗಿ ಎರಡೂ ಸಮುದಾಯಗಳ ನಡುವೆ ಮಾತಿನ ಚಕಮಕಿ ಆರಂಭವಾಗಿದ್ದು, ನಂತರ ಯುವಕನ ಕುಟುಂಬದವರ ಮೇಲೆ ಹಲ್ಲೆ ನಡೆಸಲಾಗಿದೆ.
50ಕ್ಕೂ ಹೆಚ್ಚು ಜನರ ಗುಂಪಿನಿಂದ ಮನೆಗೆ ನುಗ್ಗಿ ಹಲ್ಲೆ?
ಮಾಹಿತಿಯ ಪ್ರಕಾರ, ಒಂದು ಸಮುದಾಯದ ಸುಮಾರು 50ಕ್ಕೂ ಹೆಚ್ಚು ಜನರ ಗುಂಪು ಇನ್ನೊಂದು ಸಮುದಾಯದವರ ಮನೆಗಳಿಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಗ್ರಾಮದಲ್ಲಿ ಸುಮಾರು 80 ಮನೆಗಳು ಒಂದೇ ಸಮುದಾಯಕ್ಕೆ ಸೇರಿದ್ದರೆ, 25 ಮನೆಗಳು ಇನ್ನೊಂದು ಸಮುದಾಯದವರದ್ದಾಗಿವೆ ಎನ್ನಲಾಗಿದೆ.
ದೊಣ್ಣೆ, ಕೋಲು ಹಾಗೂ ಕಲ್ಲುಗಳನ್ನು ಹಿಡಿದು ಬಂದ ಗುಂಪು ಮನೆಗಳ ಮೇಲೆ ದಾಳಿ ನಡೆಸಿ, ಮನೆಯಲ್ಲಿದ್ದವರ ಮೇಲೂ ಹಲ್ಲೆ ಮಾಡಿದೆ ಎಂಬ ಆರೋಪವಿದೆ. ಮಹಿಳೆಯರು, ಮಕ್ಕಳು ಎನ್ನದೆ ಹಲ್ಲೆ ನಡೆಸಲಾಗಿದೆ ಎಂದು ಯುವಕನ ಕುಟುಂಬಸ್ಥರು ದೂರಿದ್ದಾರೆ. ಈ ವೇಳೆ ಜಾತಿ ನಿಂದನೆ ಮಾಡಿ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ಹಲವರಿಗೆ ಗಂಭೀರ ಗಾಯ
ಈ ಸಂಘರ್ಷದಲ್ಲಿ ಉಮಾಪತಿ, ಚನ್ನಪ್ಪ, ನವೀನ್, ಪ್ರಶಾಂತ್, ಆಲೂರು ಸಿದ್ದಪ್ಪ, ಹೇಮಣ್ಣ ಹಾಗೂ ಭಾಗ್ಯಮ್ಮ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣ ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ಉಮಾಪತಿ ಎಂಬ ವೃದ್ಧನಿಗೆ ಗಂಭೀರ ಗಾಯಗಳಾಗಿದ್ದು, ಅವರ ಆರೋಗ್ಯ ಸ್ಥಿತಿಯ ಬಗ್ಗೆ ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಒಟ್ಟು ಐದಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದ್ದು, ಘಟನೆಯಿಂದ ಸಂತ್ರಸ್ತ ಕುಟುಂಬಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಮೊಬೈಲ್ನಲ್ಲಿ ಸೆರೆಯಾಯ್ತು ಹಲ್ಲೆಯ ದೃಶ್ಯ!
ಗ್ರಾಮದಲ್ಲಿ ನಡೆದಿರುವ ಈ ಮಾರಾಮಾರಿಯ ದೃಶ್ಯಗಳು ಸಿಸಿ ಕ್ಯಾಮೆರಾ ಹಾಗೂ ಕೆಲವರ ಮೊಬೈಲ್ ಫೋನ್ಗಳಲ್ಲಿ ಸೆರೆಯಾಗಿವೆ. ದೊಣ್ಣೆ ಮತ್ತು ಕಲ್ಲುಗಳನ್ನು ಹಿಡಿದು ಗುಂಪು ಗುಂಪಾಗಿ ಬಂದು ಹಲ್ಲೆ ನಡೆಸಿರುವ ದೃಶ್ಯಗಳಿವೆ.
ಆರೋಪಿಗಳ ವಿರುದ್ಧ ಕ್ರಮಕ್ಕೆ ಸಂತ್ರಸ್ತರ ಆಗ್ರಹ
ಘಟನೆ ಸಂಬಂಧ ಯುವಕನ ಕುಟುಂಬಸ್ಥರು ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಆಗ್ರಹಿಸಿದ್ದಾರೆ. ಪ್ರೇಮ ವಿವಾಹದ ವಿಚಾರವನ್ನು ಮುಂದಿಟ್ಟುಕೊಂಡು ಕುಟುಂಬದವರ ಮೇಲೆ ದಾಳಿ ನಡೆಸಿರುವುದು ಖಂಡನೀಯ ಎಂದು ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಘಟನೆ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.





