ಬೆಂಗಳೂರು: ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ನೂತನ ಅಧಿಕೃತ ನಿವಾಸವಾಗಿ ಸಿದ್ಧಗೊಂಡಿರುವ ಬೆಂಗಳೂರಿನ ಐತಿಹಾಸಿಕ ಕುಮಾರಕೃಪಾ ಅತಿಥಿ ಗೃಹ ಇದೀಗ ಹೊಸ ಹೆಸರಿನೊಂದಿಗೆ ಸುದ್ದಿಯಲ್ಲಿದೆ. ಸುಮಾರು 160 ವರ್ಷಗಳ ಇತಿಹಾಸ ಹೊಂದಿರುವ ಕುಮಾರಕೃಪಾ ಗೆಸ್ಟ್ ಹೌಸ್‌ಗೆ ‘ಗಂಗಾ’ ಎಂದು ಮರುನಾಮಕರಣ ಮಾಡಲಾಗಿದೆ. ಈಗಾಗಲೇ ಕಟ್ಟಡದ ಮುಂಭಾಗದಲ್ಲಿ ಹೊಸ ಹೆಸರಿನ ನಾಮಫಲಕವನ್ನೂ ಅಳವಡಿಸಲಾಗಿದೆ. ಸೋಮವಾರ ಮೊದಲ ಕಾರ್ತಿಕ ಸೋಮವಾರದ ಶುಭ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರು ತಮ್ಮ ನೂತನ ನಿವಾಸಕ್ಕೆ ಗೃಹಪ್ರವೇಶ ಮಾಡಲಿದ್ದಾರೆ.
ಮುಖ್ಯಮಂತ್ರಿಗಳ ಅಧಿಕೃತ ನಿವಾಸವಾಗಿ ಬಳಕೆಯಾಗಲಿರುವ ಈ ಐತಿಹಾಸಿಕ ಕಟ್ಟಡದಲ್ಲಿ ಗೃಹಪ್ರವೇಶದ ಹಿನ್ನೆಲೆ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಬೆಳಿಗ್ಗೆ ಶುಭ ಮುಹೂರ್ತ ಇರುವುದರಿಂದ ಪೂಜೆ, ಹೋಮ ಹಾಗೂ ಹವನ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ಹಮ್ಮಿಕೊಳ್ಳಲಾಗಿದೆ. ಭಾನುವಾರ ರಾತ್ರಿಯಿಂದಲೇ ನೂತನ ನಿವಾಸದಲ್ಲಿ ಪೂಜಾ ಕಾರ್ಯಗಳು ಆರಂಭವಾಗಿದ್ದು, ನೊಣವಿನಕೆರೆ ಅಜ್ಜಯ್ಯನವರ ನೇತೃತ್ವದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ.
‘ಗಂಗಾ’ ನಿವಾಸದಲ್ಲಿ ವಿಶೇಷ ಪೂಜೆ, ಹೋಮ-ಹವನ
ಕಾರ್ತಿಕ ಮಾಸದ ಮೊದಲ ಸೋಮವಾರದ ಶುಭ ದಿನದಂದೇ ನೂತನ ನಿವಾಸಕ್ಕೆ ಪ್ರವೇಶಿಸಲು ಡಿ.ಕೆ. ಶಿವಕುಮಾರ್ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಭಾನುವಾರ ರಾತ್ರಿಯಿಂದಲೇ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಮುಖ್ಯಮಂತ್ರಿ ಹಾಗೂ ಅವರ ಕುಟುಂಬ ಸದಸ್ಯರು ನೂತನ ನಿವಾಸದಲ್ಲೇ ಉಪಸ್ಥಿತರಿದ್ದು, ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗವಹಿಸಿದ್ದಾರೆ.
ಗೃಹಪ್ರವೇಶದ ಅಂಗವಾಗಿ ನಿವಾಸವನ್ನು ಸಜ್ಜುಗೊಳಿಸಲಾಗಿದ್ದು, ಹೊಸ ನಾಮಫಲಕ ಅಳವಡಿಸಿರುವುದು ಗಮನ ಸೆಳೆದಿದೆ. ಇಷ್ಟು ದಿನ ಕುಮಾರಕೃಪಾ ಗೆಸ್ಟ್ ಹೌಸ್ ಎಂದೇ ಗುರುತಿಸಿಕೊಂಡಿದ್ದ ಕಟ್ಟಡ ಇನ್ನು ಮುಂದೆ ‘ಗಂಗಾ’ ಎಂಬ ಹೆಸರಿನಲ್ಲಿ ಗುರುತಿಸಿಕೊಳ್ಳಲಿದೆ.
ಮಾಧ್ಯಮಗಳಿಗೆ ಪ್ರವೇಶ ನಿರ್ಬಂಧ, ಬಿಗಿ ಪೊಲೀಸ್ ಭದ್ರತೆ
ಡಿ.ಕೆ. ಶಿವಕುಮಾರ್ ಅವರ ನೂತನ ನಿವಾಸದ ಗೃಹಪ್ರವೇಶ ಖಾಸಗಿ ಹಾಗೂ ಧಾರ್ಮಿಕ ಕಾರ್ಯಕ್ರಮವಾಗಿರುವ ಹಿನ್ನೆಲೆ ಮಾಧ್ಯಮ ಪ್ರತಿನಿಧಿಗಳಿಗೆ ಕಟ್ಟಡದ ಒಳಗೆ ಪ್ರವೇಶ ನಿರಾಕರಿಸಲಾಗಿದೆ. ಭದ್ರತಾ ದೃಷ್ಟಿಯಿಂದ ಪೊಲೀಸರು ಮುಖ್ಯ ದ್ವಾರದ ಬಳಿಯೇ ಮಾಧ್ಯಮದವರನ್ನು ತಡೆದಿದ್ದಾರೆ. ನಿವಾಸದ ಒಳಗೆ ನಡೆಯುತ್ತಿರುವ ಪೂಜಾ ಕಾರ್ಯಕ್ರಮಗಳ ಚಿತ್ರೀಕರಣಕ್ಕೂ ಅವಕಾಶ ನೀಡಲಾಗಿಲ್ಲ.
ಇನ್ನು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ನಿವಾಸದ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ. ಮುಖ್ಯ ದ್ವಾರದ ಬಳಿ ಪೊಲೀಸ್ ಸಿಬ್ಬಂದಿ ನಿಯೋಜನೆಗೊಂಡಿದ್ದು, ಒಳ ಪ್ರವೇಶಿಸುವವರ ಮೇಲೆ ನಿಗಾ ವಹಿಸಲಾಗಿದೆ. ಖಾಸಗಿ ಕಾರ್ಯಕ್ರಮವಾಗಿರುವುದರಿಂದ ಆಹ್ವಾನಿತರು ಹಾಗೂ ಕುಟುಂಬದ ಸದಸ್ಯರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ.
ನವೆಂಬರ್ ಅಂತ್ಯಕ್ಕೆ ಸಂಪೂರ್ಣ ಕುಟುಂಬ ಸ್ಥಳಾಂತರ?
ಸೋಮವಾರದಂದು ಸಾಂಕೇತಿಕವಾಗಿ ಗೃಹಪ್ರವೇಶ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಲಿವೆ. ಆದರೆ ಡಿ.ಕೆ. ಶಿವಕುಮಾರ್ ಅವರ ಕುಟುಂಬದ ಸಂಪೂರ್ಣ ಸ್ಥಳಾಂತರಕ್ಕೆ ಇನ್ನೂ ಕೆಲವು ದಿನಗಳು ಬೇಕಾಗಬಹುದು ಎನ್ನಲಾಗಿದೆ. ಮೂಲಗಳ ಪ್ರಕಾರ, ನವೆಂಬರ್ ತಿಂಗಳ ಕೊನೆಯ ವೇಳೆಗೆ ಸದಾಶಿವನಗರದಲ್ಲಿರುವ ಹಾಲಿ ನಿವಾಸದಿಂದ ಕುಟುಂಬದ ಸದಸ್ಯರು ‘ಗಂಗಾ’ ನಿವಾಸಕ್ಕೆ ಸಂಪೂರ್ಣವಾಗಿ ಸ್ಥಳಾಂತರಗೊಳ್ಳುವ ಸಾಧ್ಯತೆಯಿದೆ.





