ಬರೀ ಸೌತ್ನಲ್ಲಷ್ಟೇ ಅಲ್ಲ.. ಇಡೀ ಪ್ಯಾನ್ ಇಂಡಿಯಾ ಸದ್ದು ಮಾಡ್ತಿರೋದು ಒಂದೇ ವಿಷಯ. ತಮಿಳುನಾಡು ಸಿಎಂ ವಿಜಯ್-ತ್ರಿಶಾ ಮತ್ತೆ ಒಟ್ಟಿಗೆ ಕಾಣಿಸಿಕೊಂಡು ರಾಜಕೀಯ ಹಾಗೂ ಸಿನಿಮಾ ರಂಗದಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ. ಮದ್ವೆ ಕಾರ್ಯಕ್ರಮವೊಂದಕ್ಕೆ ಒಟ್ಟಿಗೆ ಬಂದಿರೋ ಈ ಜೋಡಿ, MGR-ಜಯಲಲಿತಾ ಗತಕಾಲದ ಇತಿಹಾಸವನ್ನ ಮತ್ತೆ ಮುನ್ನೆಲೆಗೆ ತರುವ ಮುನ್ಸೂಚನೆ ನೀಡಿದ್ದಾರೆ. ಹಾಗಾದ್ರೆ ತ್ರಿಶಾ ಮುಂದಿನ ನಡೆಯೇನು..? ಈ ಹಾಟ್ ಜೋಡಿಯ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ..
- ನೀನೆಲ್ಲೋ ನಾನಲ್ಲೇ.. ಪಬ್ಲಿಕ್ನಲ್ಲಿ ಮತ್ತೆ ವಿಜಯ್-ತ್ರಿಶಾ ಕಚಪಚ
- ಅಂದು MGR.. ಇಂದು ವಿಜಯ್.. ಜಯಲಲಿತಾ ಆಗ್ತಾರಾ ತ್ರಿಶಾ?
- ಸ್ನೇಹನಾ ರಾಜಕೀಯ ಲೆಕ್ಕಾಚಾರನಾ.. ಮರುಕಳಿಸುತ್ತಾ ಇತಿಹಾಸ?
- ಬಯೋಪಿಕ್ನಲ್ಲಿ ‘ಅಮ್ಮ’ನ ಪಾತ್ರ.. ರಾಜಕೀಯದತ್ತ ತ್ರಿಶಾ ಚಿತ್ತ..!
ಆಂಧ್ರಪ್ರದೇಶದ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಅವರ ಸಹೋದರ ವೈಎಸ್ ಅನಿಲ್ ರೆಡ್ಡಿ ಅವರ ಪುತ್ರಿ ವೈಎಸ್ ಶ್ರೇಯಾ ರೆಡ್ಡಿ ಮತ್ತು ಉಜ್ವಲ್ ಬಲೆನಿ ಅವರ ಮದುವೆಯ ಆರತಕ್ಷತೆ ಚೆನ್ನೈನಲ್ಲಿ ಜರುಗಿದ್ದು, ದೇಶದ ಪ್ರಮುಖ ರಾಜಕೀಯ ಗಣ್ಯರು ಸಾಕ್ಷಿಯಾಗಿದ್ದರು. ಆದರೆ ಇಡೀ ಕಾರ್ಯಕ್ರಮದ ಹೈಲೈಟ್ ಎಂದರೆ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಹಾಗೂ ನಟಿ ತ್ರಿಶಾ ಕೃಷ್ಣನ್ ಒಟ್ಟಿಗೆ ಆಗಮಿಸಿದ್ದು. ವಿಜಯ್ ಅವರ ತಾಯಿ ಶೋಬಾ ಚಂದ್ರಶೇಖರ್ ಕೂಡ ಇವರ ಜೊತೆಗಿದ್ದು, ನವದಂಪತಿಗೆ ಶುಭ ಕೋರಿದ ವೀಡಿಯೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ.
ವಿಜಯ್ ಮತ್ತು ತ್ರಿಶಾ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ನಿರ್ಮಾಪಕ ಸುರೇಶ್ ಪುತ್ರನ ಮದುವೆ, ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ, ಬ್ರಿಟನ್ನ ಸಿಲ್ವರ್ಸ್ಟೋನ್ ಕಾರ್ ರೇಸ್ ಮತ್ತು ವಿಜಯ್ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಐತಿಹಾಸಿಕ ಕ್ಷಣದಲ್ಲೂ ತ್ರಿಶಾ ಹಾಜರಿದ್ದರು. ಪ್ರತೀ ತಿಂಗಳೂ ಒಂದಲ್ಲ ಒಂದು ವೇದಿಕೆಯಲ್ಲಿ ವಿಜಯ್- ತ್ರಿಶಾ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದು, ತಮ್ಮ ನಡುವಿನ ಬಾಂಧವ್ಯದ ಬಗ್ಗೆ ಇಬ್ಬರೂ ಅಧಿಕೃತವಾಗಿ ತುಟಿ ಬಿಚ್ಚದಿದ್ದರೂ ಅಭಿಮಾನಿಗಳು ಹಾಗೂ ನೆಟ್ಟಿಗರು ಊಹಾಪೋಹಗಳ ಚರ್ಚೆಯನ್ನಂತೂ ಕಂಟಿನ್ಯೂ ಮಾಡಿದ್ದಾರೆ.
ತಮಿಳುನಾಡಿನ ರಾಜಕೀಯ ಇತಿಹಾಸ ಗಮನಿಸಿದರೆ ಸಿನಿಮಾ ಮತ್ತು ರಾಜಕೀಯ ಬೆಸೆದುಕೊಂಡಿರುವುದು ಹೊಸದೇನಲ್ಲ. ಅಂದು ನಟ-ರಾಜಕಾರಣಿ ಎಂಜಿಆರ್ ಮತ್ತು ನಟಿ ಜಯಲಲಿತಾ ಅವರ ಬಾಂಧವ್ಯ ದೊಡ್ಡ ಸಂಚಲನವನ್ನೇ ಮೂಡಿಸಿತ್ತು. ಇಬ್ಬರೂ ಸಿನಿಮಾದಲ್ಲಿ ಬ್ಲಾಕ್ಬಸ್ಟರ್ ಜೋಡಿಯಾಗಿ ಮೆರೆದು, ನಂತರ AIADMK ಮೂಲಕ ರಾಜಕೀಯದಲ್ಲಿ ಹೊಸ ಇತಿಹಾಸ ಬರೆದಿದ್ದರು. ಇದೀಗ ಸಿಎಂ ವಿಜಯ್ ಮತ್ತು ತ್ರಿಶಾ ಅವರ ಸಾರ್ವಜನಿಕ ಒಡನಾಟ ನೋಡುತ್ತಿರುವ ತಮಿಳು ಜನತೆಗೆ ಎಂಜಿಆರ್-ಜಯಲಲಿತಾ ದಿನಗಳು ಕಣ್ಣ ಮುಂದೆ ಬಂದು ನಿಲ್ಲುತ್ತಿವೆ.
ಇನ್ನೊಂದೆಡೆ, ಪುರಟ್ಚಿ ತಲೈವರ್ ಎಂಜಿಆರ್ ಬಯೋಪಿಕ್ನಲ್ಲಿ ಜಯಲಲಿತಾ ಅವರ ಪಾತ್ರಕ್ಕಾಗಿ ತ್ರಿಶಾ ಅವರನ್ನು ಸಂಪರ್ಕಿಸಲಾಗುತ್ತಿದೆ ಎಂಬ ಬಿಸಿ ಬಿಸಿ ಸುದ್ದಿ ಹರಿದಾಡುತ್ತಿದೆ. ಈ ಹಿಂದೆ ಅಭಿಮಾನಿಗಳ ಜೊತೆ ಮಾತನಾಡುತ್ತಾ ಜಯಲಲಿತಾ ಅವರ ಬಯೋಪಿಕ್ನಲ್ಲಿ ನಟಿಸುವ ಆಸೆ ವ್ಯಕ್ತಪಡಿಸಿದ್ದ ತ್ರಿಶಾ ಹಲವು ವರ್ಷಗಳ ಹಿಂದೆ ತಮಾಷೆಯಾಗಿ ‘ನನಗೆ ಸಿಎಂ ಆಗುವ ಕನಸಿದೆ’ ಎಂದು ಹೇಳಿ ಭಾರಿ ಚರ್ಚೆಗೆ ಗ್ರಾಸವಾಗಿದ್ದರು. ಇದರಿಂದಾಗಿ ತ್ರಿಶಾ ಸಿನಿಮಾದಲ್ಲಷ್ಟೇ ಅಲ್ಲದೆ, ನಿಜ ಜೀವನದಲ್ಲೂ ಜಯಲಲಿತಾ ಹಾದಿ ತುಳಿದು ಸಿಎಂ ಸೀಟಿಗೆ ಸ್ಕೆಚ್ ಹಾಕುತ್ತಿದ್ದಾರಾ ಎಂಬ ಊಹಾಪೋಹಗಳು ಜೋರಾಗಿವೆ.
ತಮಿಳುನಾಡಿನ ಮುಖ್ಯಮಂತ್ರಿಯಾಗಿ ರಾಜ್ಯದ ಆಡಳಿತದ ಜವಾಬ್ದಾರಿ ಹೊತ್ತಿರುವ ವಿಜಯ್ ಅವರ ವೈಯಕ್ತಿಕ ಹಾಗೂ ಸಾರ್ವಜನಿಕ ಬದುಕಿನ ಮೇಲೆ ಇಡೀ ದೇಶದ ಕಣ್ಣಿದೆ. ಸಿಎಂ ಆದ ಮೇಲೆಯೂ ತ್ರಿಶಾ ಜೊತೆ ನಿರಂತರವಾಗಿ ಕಣ್ಣಿಗೆ ಬೀಳುತ್ತಿರುವುದು ಸಾರ್ವಜನಿಕವಾಗಿ ಮತ್ತು ರಾಜಕೀಯವಾಗಿ ಸಖತ್ ಗಾಸಿಪ್ಗಳಿಗೆ ಕಾರಣವಾಗಿದೆ. ನಿಜಕ್ಕೂ ಇತಿಹಾಸ ಮರುಕಳಿಸಲಿದೆಯಾ ಅಥವಾ ಇದು ಬರೀ ಹಳೆಯ ಸ್ನೇಹದ ಸಂಕೇತವೇ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದ್ದು, ಕಾಲಿವುಡ್ ರಾಜಕೀಯ ಪ್ರೇಮಿಗಳ ಕುತೂಹಲವನ್ನಂತೂ ಪೀಕ್ಗೆ ಕೊಂಡೊಯ್ದಿದೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





