ಬೆಂಗಳೂರು, ನವೆಂಬರ್ 4: ದೀಪಾವಳಿ ಹಬ್ಬದ ಖುಷಿಯಲ್ಲಿದ್ದ ಜನರಿಗೆ ರಾಜ್ಯ ಸರ್ಕಾರ ಶಾಕ್ ಮೇಲೆ ಶಾಕ್ ಕೊಟ್ಟಿದೆ. ಹಾಲು ಮತ್ತು ಮೊಸರು ದರ ಏರಿಕೆ ಮಾಡಿದ್ದ ರಾಜ್ಯ ಸರ್ಕಾರ ಇದೀಗ ಮತ್ತೊಂದು ದರ ಏರಿಕೆ ಬರೆ ಎಳೆದಿದೆ. ಹಬ್ಬದ ಸಂದರ್ಭದಲ್ಲೇ ಬಸ್ ಟಿಕೆಟ್ ಏರಿಕೆ ಮಾಡಿದ್ದು, ಇಂದು ಮಧ್ಯರಾತ್ರಿಯಿಂದಲೇ ಹೊಸ ಟಿಕೆಟ್ ದರ ಜಾರಿಯಾಗಿದೆ. ಸರ್ಕಾರಿ ಬಸ್ ಟಿಕೆಟ್ ದರ ಏರಿಕೆ ಬೆನ್ನಲ್ಲೇ ಖಾಸಗಿ ಬಸ್ ದರವೂ ಒಂದರಿಂದ ಎರಡು ಪಟ್ಟು ಏರಿಕೆಯಾಗಿದೆ.
ಖಾಸಗಿ ಬಸ್ ದರ ಏರಿಕೆ
ದೀಪಾವಳಿ ಹಬ್ಬಕ್ಕೆ ಊರಿಗೆ ಹೋಗುವವರಿಗೆ ಖಾಸಗಿ ಬಸ್ ಕೂಡ ದುಬಾರಿಯಾಗಲಿದೆ. ಖಾಸಗಿ ಸಾರಿಗೆ ಸಂಘಟನೆ ಅಧ್ಯಕ್ಷ ನಟರಾಜ್ ಶರ್ಮಾ ಮಾತನಾಡಿ, ಹಬ್ಬ ಕಳೆಯುವವರೆಗೆ ದರ ಏರಿಕೆ ಇರಲಿದೆ. ಹಬ್ಬ ಮುಗಿದ ಮೇಲೆ ಕೆಲವು ಬಸ್ ದರ ಕಡಿಮೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಬೆಂಗಳೂರಿನಿಂದ ಪ್ರಮುಖ ನಗರಗಳಿಗೆ ಪರಿಷ್ಕೃತ ದರ
-
ಬೆಂಗಳೂರು-ಕಾರ್ಕಳ: ಈಗಿನ ದರ ₹700-900; ಶುಕ್ರವಾರದ ದರ ₹1,800-2,400
-
ಬೆಂಗಳೂರು-ಕುಂದಾಪುರ: ಈಗಿನ ದರ ₹900-1,200; ಶುಕ್ರವಾರದ ದರ ₹1,900-2,800
-
ಬೆಂಗಳೂರು-ಹುಬ್ಬಳ್ಳಿ: ಈಗಿನ ದರ ₹900-1,200; ಶುಕ್ರವಾರದ ದರ ₹3,000
-
ಬೆಂಗಳೂರು-ಶಿವಮೊಗ್ಗ: ಈಗಿನ ದರ ₹700-1,100; ಶುಕ್ರವಾರದ ದರ ₹1,500-2,100
-
ಬೆಂಗಳೂರು-ಬೆಳಗಾವಿ: ಈಗಿನ ದರ ₹1,800; ಶುಕ್ರವಾರದ ದರ ₹2,799-5,000
ಸರ್ಕಾರದ ವಿರುದ್ಧ ವಾಗ್ದಾಳಿ
ಹಾಲು ಮತ್ತು ಬಸ್ ದರ ಏರಿಕೆ ಹಿನ್ನೆಲೆ ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿ ಆಡಳಿತಕ್ಕೆ ಕರ್ನಾಟಕ ಆಹುತಿ ಆಗಿದೆ. ಉಚಿತ ಹೆಸರಲ್ಲಿ ಜನರ ಜೇಬಿಗೆ ಕನ್ನ ಹಾಕುತ್ತಿದೆ. ಆರ್ಥಿಕವಾಗಿ ಸದೃಢವಾಗಿದ್ದ ರಾಜ್ಯವನ್ನು ಆರ್ಥಿಕ ಪತನದತ್ತ ಕೊಂಡೊಯ್ದು ದುರಾಡಳಿತದಿಂದ ಮೆರೆದು, ರಾಜ್ಯದ ಹಿತವನ್ನು ಹದಗೆಡಿಸಿದ ಕೆಟ್ಟ ಉದಾಹರಣೆಯ ಕರ್ನಾಟಕ ಕಾಂಗ್ರೆಸ್ ಸರ್ಕಾರ ಎಂದು ವಾಗ್ದಾಳಿ ನಡೆಸಿದ್ದಾರೆ.
ಆರ್ಥಿಕ ದಿವಾಳಿತನಕ್ಕೆ ತಳ್ಳಿದೆ
ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದ ಪ್ರಗತಿ ಸಂಪೂರ್ಣವಾಗಿ ಶೂನ್ಯವಾಗಿಸಿದೆ. ಆಡಳಿತ ಎಂದರೆ ಬೊಕ್ಕಸ ಭರ್ತಿ ಮಾಡಿ ಬೆಳೆಸುವುದು ಎಂಬುದನ್ನು ಮರೆತು ಅಸಂಘಟಿತ ಮತ್ತು ಅವೈಜ್ಞಾನಿಕ ಉಚಿತ ಭರವಸೆಗಳ ಮೂಲಕ ರಾಜ್ಯದ ಸಾರಿಗೆ ಸಂಸ್ಥೆಗಳನ್ನು ಹಾಗೂ ಆರ್ಥಿಕತೆಯನ್ನು ತಮ್ಮ ದುರುದ್ದೇಶಕ್ಕಾಗಿ ಮುಳುಗಿಸಿದೆ. ಮೊದಲು “ಉಚಿತ ಪ್ರಯಾಣ” ಎಂದು ಆರ್ಭಟಿಸಿ ಪ್ರಚಾರ ಗಿಟ್ಟಿಸಿಕೊಂಡ ಸರ್ಕಾರ, ಇಂದು ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕೂ ಸಾರಿಗೆ ಸಂಸ್ಥೆಗಳನ್ನು ಸಂಪೂರ್ಣವಾಗಿ ಆರ್ಥಿಕ ದಿವಾಳಿತನಕ್ಕೆ ತಳ್ಳಿದೆ. ಸಾರಿಗೆ ಸಂಸ್ಥೆಗಳ ಬಳಿ ಬಸ್‌ಗಳಿಗೆ ಡೀಸೆಲ್ ಹಾಕಿಸಲೂ ಹಣವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಉಚಿತ ಗ್ಯಾರಂಟಿ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡು, ನಿಗಮಗಳನ್ನು ನಷ್ಟದ ಕೂಪಕ್ಕೆ ತಳ್ಳಲಾಗಿದೆ.
ಜನಸಾಮಾನ್ಯರ ಮೇಲೆ ಚಾವಟಿ ಏಟು
ಹಿಂದೆ ಲಾಭದಲ್ಲಿದ್ದ ಹಾಗೂ ಯಶಸ್ವಿಯಾಗಿ ನಡೆಯುತ್ತಿದ್ದ ನಮ್ಮ ರಾಜ್ಯದ ಹೆಮ್ಮೆಯ ಸಾರಿಗೆ ಸಂಸ್ಥೆಗಳು ಕಾಂಗ್ರೆಸ್ ಆಡಳಿತಕ್ಕೆ ಬಂದ ಮೂರುವರೆ ವರ್ಷಗಳಲ್ಲೇ ಸಂಪೂರ್ಣ ನಷ್ಟದಲ್ಲಿ ಮುಳುಗಿಹೋಗಿವೆ. ಈ ಆಡಳಿತಾತ್ಮಕ ವೈಫಲ್ಯವನ್ನು ಮುಚ್ಚಿಕೊಳ್ಳಲು, ಈಗ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಭಾರಿ ಪ್ರಮಾಣದ ಬಸ್ ಟಿಕೆಟ್ ದರ ಏರಿಕೆ ಮಾಡಿ ಜನಸಾಮಾನ್ಯರ ಮೇಲೆ ಚಾವಟಿ ಏಟು ನೀಡಿ ಸಂತೋಷದಲ್ಲಿ ಕಾಂಗ್ರೆಸ್ ಸರ್ಕಾರ ತೇಲುತ್ತಿದೆ. ಕೆಎಂಎಫ್ ನಂದಿನಿ ಹಾಲು, ಮೊಸರು ಇತಿಹಾಸದಲ್ಲೇ ಕಾಣದ ಅತಿ ದೊಡ್ಡ ಪ್ರೈಸ್ ಹೈಕ್ ಮಾಡಲಾಯಿತು.
“ದಂಡ ವಸೂಲಿ ಯಾವ ಸೀಮೆಯ ಗ್ಯಾರಂಟಿ?”
ಇದೀಗ ಬಡವರು, ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಪ್ರತಿದಿನ ಬಳಸುವ ಬಸ್ ಟಿಕೆಟ್ ದರಗಳನ್ನು ಅತಿರೇಕವಾಗಿ ಹೆಚ್ಚಿಸಲಾಗಿದೆ. ಒಂದೆಡೆ ‘ಉಚಿತ’ ಎಂದು ಹೇಳಿ ಇನ್ನೊಂದೆಡೆ ದೈನಂದಿನ ಅತ್ಯಗತ್ಯ ವಸ್ತುಗಳ ಮತ್ತು ಸೇವೆಗಳ ಬೆಲೆ ಏರಿಸಿ ಜನರ ಜೇಬಿನಿಂದ ಹತ್ತು ಪಟ್ಟು ದಂಡ ವಸೂಲಿ ಮಾಡುವುದು ಯಾವ ಸೀಮೆಯ ಗ್ಯಾರಂಟಿ? ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ.





