ಹಾಸನ: ನಾಡಿನ ಪ್ರಸಿದ್ಧ ಶಕ್ತಿ ದೇವತೆ ಹಾಸನಾಂಬೆ ದೇಗುಲದಲ್ಲಿ ಭಕ್ತರ ಸಂಭ್ರಮ ಮುಗಿಲುಮುಟ್ಟಿದೆ. ದೇವಿಯ ಸಾರ್ವಜನಿಕ ದರ್ಶನ ಆರಂಭವಾಗುತ್ತಿದ್ದಂತೆ ಹಾಸನದತ್ತ ಭಕ್ತರ ದಂಡೇ ಹರಿದುಬರುತ್ತಿದ್ದು, ದಿನದಿಂದ ದಿನಕ್ಕೆ ಜನಸಂದಣಿ ಹೆಚ್ಚಾಗುತ್ತಿದೆ. ಇಂದು (ನಾಲ್ಕನೇ ದಿನ) ಕೂಡ ದೇವಿಯ ದರ್ಶನ ಪಡೆಯಲು ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ.
ಮತ್ತೊಂದೆಡೆ, ಭಕ್ತರ ಸಂಖ್ಯೆ ಹೆಚ್ಚಾದಂತೆ ದೇಗುಲದ ಆದಾಯವೂ ಗಣನೀಯವಾಗಿ ಏರಿಕೆಯಾಗಿದೆ. ಸಾರ್ವಜನಿಕ ದರ್ಶನ ಆರಂಭವಾದ ಮೊದಲ ಮೂರು ದಿನಗಳಲ್ಲೇ ವಿವಿಧ ಮೂಲಗಳಿಂದ ಬರೋಬ್ಬರಿ ₹5 ಕೋಟಿಗೂ ಅಧಿಕ ಆದಾಯ ಸಂಗ್ರಹವಾಗಿದೆ.
ಹಾಸನಾಂಬೆ ದೇವಿಯ ದರ್ಶನಕ್ಕಾಗಿ ರಾಜ್ಯದ ವಿವಿಧ ಜಿಲ್ಲೆಗಳಷ್ಟೇ ಅಲ್ಲದೆ ಹೊರರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಿದ್ದಾರೆ. ಬೆಳಗ್ಗೆಯಿಂದಲೇ ದೇವಸ್ಥಾನದ ಸುತ್ತಮುತ್ತ ಭಕ್ತರ ಸಾಲುಗಳು ಕಂಡುಬರುತ್ತಿದ್ದು, ದೇವಿಯ ದರ್ಶನ ಪಡೆಯಲು ಜನರು ಗಂಟೆಗಟ್ಟಲೆ ಕಾಯುತ್ತಿದ್ದಾರೆ. ಧರ್ಮದರ್ಶನದ ಸಾಲಿನಲ್ಲಿ ಮಾತ್ರವಲ್ಲದೆ, ₹1,000 ಮತ್ತು ₹300 ವಿಶೇಷ ದರ್ಶನದ ಸಾಲುಗಳಲ್ಲಿಯೂ ಭಾರೀ ಸಂಖ್ಯೆಯಲ್ಲಿ ಭಕ್ತರು ಸೇರಿದ್ದಾರೆ.
ಧರ್ಮದರ್ಶನಕ್ಕೂ ಉದ್ದನೆಯ ಸರತಿ ಸಾಲು!
ಹಾಸನಾಂಬೆ ದರ್ಶನಕ್ಕೆ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ದೇವಸ್ಥಾನದ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನಜಂಗುಳಿ ಕಂಡುಬರುತ್ತಿದೆ. ಧರ್ಮದರ್ಶನದ ಸಾಲಿನಲ್ಲಿ ಸಾವಿರಾರು ಭಕ್ತರು ನಿಂತಿದ್ದು, ವಿಶೇಷ ದರ್ಶನದ ಟಿಕೆಟ್ ಪಡೆದವರೂ ದೇವಿಯ ದರ್ಶನಕ್ಕಾಗಿ ಕಾಯುತ್ತಿದ್ದಾರೆ.
ಮೂರು ದಿನಕ್ಕೆ ₹5 ಕೋಟಿಗೂ ಅಧಿಕ ಆದಾಯ!
ಹಾಸನಾಂಬೆ ದೇಗುಲಕ್ಕೆ ಭಕ್ತರ ಪ್ರವಾಹ ಹೆಚ್ಚಾಗಿರುವ ಬೆನ್ನಲ್ಲೇ ಆದಾಯದಲ್ಲಿಯೂ ಭರ್ಜರಿ ಏರಿಕೆ ಕಂಡುಬಂದಿದೆ. ಸಾರ್ವಜನಿಕ ದರ್ಶನ ಆರಂಭವಾದ ಮೊದಲ ಮೂರು ದಿನಗಳಲ್ಲೇ ದೇವಸ್ಥಾನಕ್ಕೆ ₹5 ಕೋಟಿಗೂ ಅಧಿಕ ಆದಾಯ ಸಂಗ್ರಹವಾಗಿದೆ.
ಆನ್‌ಲೈನ್ ಟಿಕೆಟ್ ಬುಕ್ಕಿಂಗ್, ದೇವಸ್ಥಾನದಲ್ಲಿ ನೇರವಾಗಿ ಮಾರಾಟ ಮಾಡಲಾಗುತ್ತಿರುವ ವಿಶೇಷ ದರ್ಶನದ ಟಿಕೆಟ್‌ಗಳು ಹಾಗೂ ಲಾಡು ಪ್ರಸಾದ ಮಾರಾಟದಿಂದ ಈ ಆದಾಯ ಹರಿದುಬಂದಿದೆ. ₹1,000 ಮತ್ತು ₹300 ಮುಖಬೆಲೆಯ ವಿಶೇಷ ದರ್ಶನದ ಟಿಕೆಟ್‌ಗಳಿಗೆ ಭಕ್ತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ವರ್ಷಕ್ಕೊಮ್ಮೆ ನಡೆಯುವ ಹಾಸನಾಂಬೆ ಜಾತ್ರಾ ಮಹೋತ್ಸವದಲ್ಲಿ ದೇವಿಯ ದರ್ಶನಕ್ಕೆ ಹೆಚ್ಚಿನ ಮಹತ್ವವಿದೆ. ಹೀಗಾಗಿ ಭಕ್ತರು ತಮ್ಮ ಅನುಕೂಲಕ್ಕೆ ತಕ್ಕಂತೆ ಆನ್‌ಲೈನ್ ಮೂಲಕ ಮುಂಗಡ ಟಿಕೆಟ್ ಬುಕ್ ಮಾಡಿಕೊಳ್ಳುತ್ತಿದ್ದಾರೆ. ಇನ್ನು ನೇರವಾಗಿ ಟಿಕೆಟ್ ಖರೀದಿಸಿ ವಿಶೇಷ ದರ್ಶನ ಪಡೆಯುವವರ ಸಂಖ್ಯೆಯೂ ಹೆಚ್ಚಾಗಿದೆ.
ಹಾಸನಕ್ಕೆಇಂದು ಗಣ್ಯರ ದಂಡು!
ಹಾಸನಾಂಬೆ ದೇವಿಯ ದರ್ಶನ ಪಡೆಯಲು ಇಂದು ಹಲವು ಕ್ಷೇತ್ರಗಳ ಗಣ್ಯರು ಆಗಮಿಸಲಿದ್ದಾರೆ. ಕೇಂದ್ರ ಸಚಿವ ವಿ. ಸೋಮಣ್ಣ ಸೇರಿದಂತೆ ಮಠಾಧೀಶರು, ನ್ಯಾಯಾಧೀಶರು ಹಾಗೂ ವಿವಿಧ ಕ್ಷೇತ್ರಗಳ ಪ್ರಮುಖರು ದೇವಿಯ ದರ್ಶನ ಪಡೆಯುವ ನಿರೀಕ್ಷೆಯಿದೆ.
ಭಕ್ತರ ಸುರಕ್ಷತೆಗೆ ವಿಶೇಷ ವ್ಯವಸ್ಥೆ
ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಸರತಿ ಸಾಲುಗಳ ನಿರ್ವಹಣೆ, ಕುಡಿಯುವ ನೀರು, ಭದ್ರತೆ ಹಾಗೂ ಇತರ ಮೂಲಸೌಕರ್ಯಗಳ ಬಗ್ಗೆ ವಿಶೇಷ ಗಮನ ಹರಿಸಲಾಗಿದೆ. ದೂರದ ಊರುಗಳಿಂದ ಆಗಮಿಸುವ ಭಕ್ತರಿಗೆ ದರ್ಶನ ವ್ಯವಸ್ಥೆ ಅನುಕೂಲಕರವಾಗುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.





