ಮೈಸೂರು: ಯೂಟ್ಯೂಬರ್ ಮಧು ಗೌಡ ಅವರ ಪತಿ ನಿಖಿಲ್ ರವೀಂದ್ರ ವಿರುದ್ಧ ಹಿಟ್ ಆ್ಯಂಡ್ ರನ್ ಆರೋಪ ಕೇಳಿಬಂದಿದೆ. ಮೈಸೂರಿನಲ್ಲಿ ನಿಖಿಲ್ ಬಳಸುತ್ತಿದ್ದ ಕಾರು ಬೈಕ್ ಸವಾರನಿಗೆ ಡಿಕ್ಕಿ ಹೊಡೆದು, ಆತ ಗಂಭೀರವಾಗಿ ಗಾಯಗೊಂಡಿದ್ದಾನೆ. ಅಪಘಾತದ ಬಳಿಕ ಕಾರು ನಿಲ್ಲಿಸದೆ ಸ್ಥಳದಿಂದ ತೆರಳಿದ್ದಾರೆ ಎಂಬ ಆರೋಪದ ಬೆನ್ನಲ್ಲೇ, ಅಪಘಾತ ನಡೆದಿರುವುದು ತಮಗೆ ತಿಳಿದಿರಲಿಲ್ಲ ಎಂದು ನಿಖಿಲ್ ಸ್ಪಷ್ಟನೆ ನೀಡಿದ್ದಾರೆ. ಈ ಸಂಬಂಧದ ಸಿಸಿಟಿವಿ ದೃಶ್ಯಗಳು ಹಾಗೂ ಸಂಧಾನಕ್ಕೆ ಯತ್ನಿಸಲಾಗಿದೆ ಎನ್ನಲಾದ ಆಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಮೈಸೂರಿನ ವಿ.ವಿ.ಪುರಂ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅಪಘಾತಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದು, ನಿಖಿಲ್ ಬಳಸಿದ್ದ ಕಾರನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.
ಅಪಘಾತ ಮಾಡಿದ್ದೇ ಗೊತ್ತಿರಲಿಲ್ಲ ಎಂದ ನಿಖಿಲ್
ಘಟನೆ ಕುರಿತು ವಿಡಿಯೋ ಮೂಲಕ ಪ್ರತಿಕ್ರಿಯಿಸಿರುವ ನಿಖಿಲ್, ಕಾರು ಬೈಕ್ಗೆ ಡಿಕ್ಕಿ ಹೊಡೆದಿರುವುದು ತಮ್ಮ ಗಮನಕ್ಕೆ ಬಂದಿರಲಿಲ್ಲ ಎಂದು ಹೇಳಿದ್ದಾರೆ. “ನಾನು ಡಿಕ್ಕಿ ಹೊಡೆದಿದ್ದು ಗೊತ್ತೇ ಆಗಿಲ್ಲ. ನನ್ನ ಕಾರಿಗೂ ಯಾವುದೇ ಸ್ಕ್ರಾಚ್ ಆಗಿರಲಿಲ್ಲ. ಇಬ್ಬರು ಬಂದು ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗಲೇ ಅಪಘಾತದ ವಿಚಾರ ತಿಳಿಯಿತು. ನಂತರ ವಿಡಿಯೋ ನೋಡಿದಾಗ ಅದು ನನ್ನ ಕಾರು ಎಂಬುದು ಗೊತ್ತಾಯಿತು” ಎಂದು ಸ್ಪಷ್ಟನೆ ನೀಡಿದ್ದಾರೆ.
ಆಯುಧ ಪೂಜೆ ದಿನ ಈ ಘಟನೆ ನಡೆದಿದ್ದು, ಬಳಿಕ ತಾವು ಬೆಂಗಳೂರಿಗೆ ತೆರಳಿದ್ದಾಗಿ ನಿಖಿಲ್ ತಿಳಿಸಿದ್ದಾರೆ. ಘಟನೆ ನಡೆದ ದಿನ ಎರಡು ಅಪಘಾತಗಳು ಸಂಭವಿಸಿದ್ದವು ಎಂದೂ ಅವರು ಹೇಳಿಕೊಂಡಿದ್ದಾರೆ. ಮೊದಲಿಗೆ ಬಂದ ಕರೆಗಳನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಯಾರೋ ತಮ್ಮನ್ನು ಆಟ ಆಡಿಸಲು ಕರೆ ಮಾಡುತ್ತಿದ್ದಾರೆ ಎಂದು ಭಾವಿಸಿ ನಿರ್ಲಕ್ಷಿಸಿದ್ದಾಗಿ ವಿಡಿಯೋದಲ್ಲಿ ಹೇಳಿದ್ದಾರೆ.
ಬೈಕ್ ಸವಾರನಿಗೆ ಗಂಭೀರ ಗಾಯ
ನಿಖಿಲ್ ಬಳಸಿದ್ದ ಕಾರು ಬೈಕ್ನಲ್ಲಿ ಪ್ರಯಾಣಿಸುತ್ತಿದ್ದ ಅಭಿಷೇಕ್ ಅವರಿಗೆ ಡಿಕ್ಕಿ ಹೊಡೆದಿದೆ ಎಂಬ ಆರೋಪವಿದೆ. ಡಿಕ್ಕಿಯ ರಭಸಕ್ಕೆ ಅಭಿಷೇಕ್ ಅವರ ಕೈ ಮತ್ತು ಕಾಲಿಗೆ ಗಾಯಗಳಾಗಿದ್ದು, ಮೂಳೆ ಮುರಿತವಾಗಿದೆ ಎನ್ನಲಾಗಿದೆ. ಅಪಘಾತದ ಬಳಿಕ ಕಾರು ನಿಲ್ಲಿಸದೆ ತೆರಳಲಾಗಿದೆ. ಗಾಯಾಳುವಿನ ಆರೋಗ್ಯ ವಿಚಾರಿಸಲು ಅಥವಾ ನೆರವು ನೀಡಲು ಮುಂದಾಗಲಿಲ್ಲ ಎಂಬ ಆರೋಪವೂ ಕೇಳಿಬಂದಿದೆ.
ಅಭಿಷೇಕ್ ಅವರು ತಮ್ಮ ಮಗುವಿನ ನಾಮಕರಣ ಕಾರ್ಯಕ್ರಮದ ಸಿದ್ಧತೆಯಲ್ಲಿ ತೊಡಗಿದ್ದರು ಎನ್ನಲಾಗಿದೆ.
ಸಂಧಾನಕ್ಕೆ ಯತ್ನಿಸಿದ್ದರಾ?
ಅಪಘಾತದ ಬಳಿಕ ನಿಖಿಲ್ ಅವರನ್ನು ಸಂಪರ್ಕಿಸಿ ಪ್ರಕರಣವನ್ನು ಪೊಲೀಸ್ ಠಾಣೆಗೆ ಕೊಂಡೊಯ್ಯುವ ಬದಲು ಸಂಧಾನದ ಮೂಲಕ ಬಗೆಹರಿಸಲು ಪ್ರಯತ್ನಿಸಲಾಗಿದೆ ಎನ್ನಲಾದ ಆಡಿಯೋವೊಂದು ವೈರಲ್ ಆಗಿದೆ. ಆಡಿಯೋದಲ್ಲಿ ಮಾತನಾಡುವ ವ್ಯಕ್ತಿಯೊಬ್ಬರು ನಿಖಿಲ್ ಅವರನ್ನು ಪೊಲೀಸ್ ಠಾಣೆಗೆ ಬರುವಂತೆ ಒತ್ತಾಯಿಸಿರುವುದು ಕೇಳಿಬರುತ್ತದೆ.
ಇದಕ್ಕೆ ಪ್ರತಿಕ್ರಿಯಿಸಿರುವ ನಿಖಿಲ್, ಪೊಲೀಸರನ್ನು ಮಧ್ಯೆ ತರಬೇಡಿ ಎಂದು ಹೇಳಿರುವುದಾಗಿ ಆಡಿಯೋದಲ್ಲಿ ಕೇಳಿಬರುತ್ತದೆ ಎನ್ನಲಾಗಿದೆ. ಗಾಯಾಳು ಹಾಗೂ ಅವರ ಕುಟುಂಬದವರನ್ನು ಕರೆದುಕೊಂಡು ಬಂದು ಮಾತನಾಡುವಂತೆಯೂ ಅವರು ಸೂಚಿಸಿದ್ದಾರೆ ಎನ್ನಲಾಗಿದೆ. ಮತ್ತೊಂದು ಆಡಿಯೋದಲ್ಲಿ ಮೊದಲು ಠಾಣೆಗೆ ಬಂದು, ನಂತರ ಪ್ರಕರಣ ದಾಖಲಿಸಬೇಕೇ ಬೇಡವೇ ಎಂಬುದನ್ನು ನಿರ್ಧರಿಸೋಣ ಎಂಬ ಮಾತುಗಳು ಕೇಳಿಬರುತ್ತವೆ.
ಕಾರು ತಮ್ಮ ಬಾಮೈದ ತೆಗೆದುಕೊಂಡು ಹೋಗಿದ್ದ ಎಂದು ನಿಖಿಲ್ ಹೇಳಿರುವುದಾಗಿ ಆಡಿಯೋದಲ್ಲಿ ಉಲ್ಲೇಖವಾಗಿದೆ. ಆದರೆ, ಈ ಆಡಿಯೋಗಳ ಸತ್ಯಾಸತ್ಯತೆ ಮತ್ತು ಸಂಭಾಷಣೆಯ ಸಂಪೂರ್ಣ ಹಿನ್ನೆಲೆ ಅಧಿಕೃತವಾಗಿ ದೃಢಪಟ್ಟಿಲ್ಲ.
ಕಾರು ವಶಕ್ಕೆ ಪಡೆದ ಪೊಲೀಸರು
ಅಪಘಾತಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ನಿಖಿಲ್ ಬಳಸಿದ್ದ ಕಾರನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ. ಸಿಸಿಟಿವಿ ದೃಶ್ಯಗಳು, ಗಾಯಾಳುವಿನ ಹೇಳಿಕೆ ಹಾಗೂ ವೈರಲ್ ಆಗಿರುವ ಆಡಿಯೋಗಳ ಆಧಾರದ ಮೇಲೆ ತನಿಖೆ ಮುಂದುವರಿದಿದೆ.





