ಭಾರತದಾದ್ಯಂತ ನವರಾತ್ರಿ, ದುರ್ಗಾ ಪೂಜೆ ಹಾಗೂ ದಸರಾ ಹಬ್ಬದ ಸಂಭ್ರಮ ಈಗಷ್ಟೇ ಮುಗಿದಿದೆ. ಈ ಹಬ್ಬದ ದಿನಗಳಲ್ಲಿ ಉಪವಾಸದ ಊಟ (ವ್ರತದ ಊಟ) ಮತ್ತು ಸಿಹಿ ತಿನಿಸುಗಳಿಗೆ ಆನ್‌ಲೈನ್‌ನಲ್ಲಿ ಭಾರಿ ಬೇಡಿಕೆ ಕಂಡುಬಂದಿದೆ. ಪ್ರಮುಖ ಫುಡ್ ಡೆಲಿವರಿ ಪ್ಲಾಟ್‌ಫಾರ್ಮ್ ‘ಸ್ವಿಗ್ಗಿ’, ಈ ಹಬ್ಬದ ಸೀಸನ್‌ನಲ್ಲಿ ಭಾರತೀಯರು ಅತಿ ಹೆಚ್ಚು ಯಾವ ಆಹಾರವನ್ನು ಆರ್ಡರ್ ಮಾಡಿದ್ದಾರೆ ಎಂಬ ಕುತೂಹಲಕಾರಿ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ.
ಅಕ್ಟೋಬರ್ 17 ರಿಂದ 20ರವರೆಗೆ ಉಪವಾಸದ ಊಟಕ್ಕೆ ಅತಿ ಹೆಚ್ಚು ಬೇಡಿಕೆ ಇತ್ತು. ದೇಶಾದ್ಯಂತ ಸಬ್ಬಕ್ಕಿಯಿಂದ ಮಾಡಿದ ತಿನಿಸುಗಳು ಅತಿ ಹೆಚ್ಚು ಆರ್ಡರ್ ಆಗಿವೆ. ನವರಾತ್ರಿ ವೀಕೆಂಡ್‌ನಲ್ಲಿ (ಅಕ್ಟೋಬರ್ 17-18) ಸ್ವಿಗ್ಗಿಯಲ್ಲಿ ಪ್ರತಿ ಗಂಟೆಗೆ ಸರಾಸರಿ 1,794 ಸಬ್ಬಕ್ಕಿ ತಿನಿಸುಗಳು ಡೆಲಿವರಿಯಾಗಿವೆ.
ಇದರಲ್ಲಿ ಸಬ್ಬಕ್ಕಿ ಖಿಚಡಿ ಮತ್ತು ಸಬ್ಬಕ್ಕಿ ವಡೆ ಹಬ್ಬದ ಫೇವರಿಟ್ ಆಗಿ ಹೊರಹೊಮ್ಮಿವೆ. ಮುಂಬೈ ಮತ್ತು ಬೆಂಗಳೂರಿನಂತಹ ಮಹಾನಗರಗಳ ಜೊತೆಗೆ ಪುಣೆ ಹಾಗೂ ಜೈಪುರದಲ್ಲೂ ಇವುಗಳಿಗೆ ಹೆಚ್ಚಿನ ಬೇಡಿಕೆ ಇತ್ತು.
ಸಬ್ಬಕ್ಕಿ ಹೊರತಾಗಿ ನವರಾತ್ರಿ ವ್ರತದ ಥಾಲಿಗಳು, ಸಿಂಘಾರ, ಕುತ್ತು, ರಜಗಿರಾ, ಮಖಾನಾ ಹಾಗೂ ಸಮಕ್ ರೈಸ್ ಆಧಾರಿತ ತಿನಿಸುಗಳನ್ನು ಸಹ ಜನರು ಹೆಚ್ಚು ಇಷ್ಟಪಟ್ಟು ತರಿಸಿಕೊಂಡಿದ್ದಾರೆ.
ಪೂರ್ತಿ ಊಟದ ಪ್ಯಾಕೇಜ್ ಆದ ‘ನವರಾತ್ರಿ ಸ್ಪೆಷಲ್ ವ್ರತದ ಥಾಲಿ’ಗಳಿಗೆ ಭಾರಿ ಬೇಡಿಕೆ ಕಂಡುಬಂದಿದೆ. ವಿಶೇಷವಾಗಿ ಸಿಂಘಾರ ಪೂರಿ ಒಳಗೊಂಡ ಥಾಲಿ ಹಾಗೂ ರಜಗಿರಾ ಪೂರಿ ಮತ್ತು ಆಲೂ ಹಿಂಗ್ ಇರುವ ಥಾಲಿಗಳು ಹೆಚ್ಚು ಮಾರಾಟವಾಗಿವೆ.
ದೆಹಲಿ, ಬೆಂಗಳೂರು, ಗುರ್‌ಗಾಂವ್ ಮತ್ತು ನೋಯ್ಡಾದಲ್ಲಿ ಥಾಲಿಗಳಿಗೆ ಅತಿ ಹೆಚ್ಚು ಆರ್ಡರ್‌ಗಳು ಬಂದಿವೆ. ದೆಹಲಿ ಸಮೀಪದ ನೋಯ್ಡಾದಲ್ಲಿ ಗ್ರಾಹಕರೊಬ್ಬರು ಒಂದೇ ಬಾರಿಗೆ 11,072 ರೂ. ನೀಡಿ ಬರೋಬ್ಬರಿ 13 ನವರಾತ್ರಿ ಸ್ಪೆಷಲ್ ವ್ರತದ ಥಾಲಿಗಳನ್ನು ಆರ್ಡರ್ ಮಾಡಿದ್ದಾರೆ. ಇದು ಅಕ್ಟೋಬರ್ 17-18ರ ಅವಧಿಯಲ್ಲಿ ದೇಶದಲ್ಲೇ ದಾಖಲಾದ ಅತಿದೊಡ್ಡ ವ್ರತದ ಊಟದ ಆರ್ಡರ್ ಆಗಿದೆ.
ಹಬ್ಬ ಎಂದಮೇಲೆ ಸಿಹಿ ಇಲ್ಲದೆ ಪೂರ್ಣವಾಗುವುದಿಲ್ಲ. ಕಳೆದ ವರ್ಷದ ಹಬ್ಬದ ಸೀಸನ್‌ಗೆ ಹೋಲಿಸಿದರೆ ಈ ಬಾರಿ ಸಾಂಪ್ರದಾಯಿಕ ಸಿಹಿ ತಿನಿಸುಗಳ ಆರ್ಡರ್‌ಗಳಲ್ಲಿ ಶೇ. 36.4ರಷ್ಟು ಏರಿಕೆಯಾಗಿದೆ. ಇದರಲ್ಲಿ ರಸಗುಲ್ಲಾ ಭಾರತದ ನೆಚ್ಚಿನ ಸಿಹಿಯಾಗಿ ಅಗ್ರಸ್ಥಾನದಲ್ಲಿದೆ.
ಈ ನಾಲ್ಕು ದಿನಗಳಲ್ಲಿ ಪ್ರತಿ ಗಂಟೆಗೆ ಸರಾಸರಿ 495 ರಸಗುಲ್ಲಾ ಆರ್ಡರ್‌ಗಳನ್ನು ಸ್ವಿಗ್ಗಿ ಡೆಲಿವರಿ ಮಾಡಿದೆ. ದೆಹಲಿ, ಮುಂಬೈ ಮತ್ತು ಗುರ್‌ಗಾಂವ್‌ನಲ್ಲಿ ರಸಗುಲ್ಲಾಗೆ ಅತಿ ಹೆಚ್ಚು ಬೇಡಿಕೆ ಇತ್ತು. ಇದರ ಜೊತೆಗೆ ಗುಲಾಬ್ ಜಾಮೂನು, ಕಾಜು ಕಟ್ಲಿ, ಜಿಲೇಬಿ ಮತ್ತು ರಸಮಲಾಯಿ ಕೂಡ ಅತಿ ಹೆಚ್ಚು ಆರ್ಡರ್ ಆದ ಸಿಹಿ ತಿನಿಸುಗಳ ಪಟ್ಟಿಯಲ್ಲಿವೆ.
ಮುಂಬೈನ ಗ್ರಾಹಕರೊಬ್ಬರು ವಿವಿಧ ಬಗೆಯ ಮಿಠಾಯಿಗಳು ಮತ್ತು ‘ಕಾಫಿ ರಸಗುಲ್ಲಾ ತಿರಮಿಸು’ಗಾಗಿ ಬರೋಬ್ಬರಿ 9,870 ರೂಪಾಯಿ ಪಾವತಿಸಿದ್ದು, ಇದು ಸಿಹಿ ವಿಭಾಗದ ಅತಿ ದೊಡ್ಡ ಆರ್ಡರ್ ಆಗಿದೆ.
ಬೆಂಗಳೂರು, ಚೆನ್ನೈ, ಹೈದರಾಬಾದ್, ದೆಹಲಿಯಂತಹ ಮಹಾನಗರಗಳಷ್ಟೇ ಅಲ್ಲದೆ ಪಾಟ್ನಾ, ಡೆಹ್ರಾಡೂನ್, ಜೋಧಪುರ ಮತ್ತು ತಿರುವನಂತಪುರಂನಂತಹ ಬೆಳೆಯುತ್ತಿರುವ ನಗರಗಳಲ್ಲಿ ಸಿಹಿ ತಿನಿಸುಗಳಿಗೆ ಹೆಚ್ಚಿನ ಬೇಡಿಕೆ ಇತ್ತು.
ವಿಶೇಷವೆಂದರೆ, ಅಗರ್ತಲಾ, ಶಿಲ್ಲಾಂಗ್, ಮತ್ತು ಭಟಿಂಡಾದಂತಹ ಸಣ್ಣ ಪಟ್ಟಣಗಳಲ್ಲೂ ಆನ್‌ಲೈನ್ ಮೂಲಕ ಸಿಹಿ ಆರ್ಡರ್ ಮಾಡುವ ಟ್ರೆಂಡ್ ಹೆಚ್ಚಾಗಿರುವುದು ಕಂಡುಬಂದಿದೆ. ಒಟ್ಟಾರೆಯಾಗಿ ಭಾರತೀಯರ ಸಾಂಪ್ರದಾಯಿಕ ಆಚರಣೆಗಳೊಂದಿಗೆ ಆನ್‌ಲೈನ್ ಫುಡ್ ಡೆಲಿವರಿ ವ್ಯವಸ್ಥೆಯು ಹೇಗೆ ಬೆರೆತುಹೋಗಿದೆ ಎಂಬುದನ್ನು ಸ್ವಿಗ್ಗಿಯ ಈ ವರದಿ ಸ್ಪಷ್ಟಪಡಿಸಿದೆ.





