ನವದೆಹಲಿ: ಶಾಂತಿಯುತ ಪ್ರತಿಭಟನೆ ನಡೆಸುವವರನ್ನು ಕಾನೂನುಬದ್ಧ ಕಾರಣಗಳಿಲ್ಲದೆ ಬಂಧಿಸುವಂತಿಲ್ಲ. ದೆಹಲಿಯಲ್ಲಿ ಮೆಟ್ರೋ ಮತ್ತು ರೈಲು ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಬೇಕು, ಇಂಟರ್ನೆಟ್ ಸಂಪರ್ಕಕ್ಕೆ ಅನಗತ್ಯವಾಗಿ ಅಡ್ಡಿಪಡಿಸಬಾರದು ಹಾಗೂ ಸಾರ್ವಜನಿಕರ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ನಡೆದ ಪ್ರತಿಭಟನೆಯ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಮೆಟ್ರೋ ನಿಲ್ದಾಣಗಳನ್ನು ಮುಚ್ಚಿದ್ದು, ಸಾರ್ವಜನಿಕ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ. ರಜಾದಿನವಾದ ಭಾನುವಾರವೂ ವಿಶೇಷ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹೆಸರಿನಲ್ಲಿ ಸಾರ್ವಜನಿಕರಿಗೆ ಅನಗತ್ಯ ತೊಂದರೆ ನೀಡಬಾರದು ಎಂದು ಸೂಚಿಸಿದೆ.
ಅಗತ್ಯವಿಲ್ಲದ ಬ್ಯಾರಿಕೇಡ್ಗಳನ್ನು ತೆರವುಗೊಳಿಸಲು ಸೂಚನೆ
ದೆಹಲಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಸಾರ್ವಜನಿಕರು ಹಾಗೂ ವಾಹನಗಳ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. ತುರ್ತು ಪರಿಸ್ಥಿತಿಯಲ್ಲಿ ಅಗತ್ಯವಿರುವ ನಿರ್ಬಂಧಗಳನ್ನು ಹೊರತುಪಡಿಸಿ, ಉಳಿದ ಬ್ಯಾರಿಕೇಡ್ಗಳನ್ನು ತೆರವುಗೊಳಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) 2023ರ ಸೆಕ್ಷನ್ 163ರ ಅಡಿಯಲ್ಲಿ ವಿಧಿಸಲಾಗಿರುವ ನಿರ್ಬಂಧಗಳ ಬಗ್ಗೆಯೂ ನ್ಯಾಯಾಲಯ ಗಮನ ಸೆಳೆದಿದೆ. ಸುಪ್ರೀಂ ಕೋರ್ಟ್ ಸೇರಿದಂತೆ ಇತರ ನ್ಯಾಯಾಲಯಗಳಿಗೆ ಪ್ರವೇಶಿಸುವ ಮತ್ತು ಅಲ್ಲಿಂದ ಹೊರಬರುವ ಸಾರ್ವಜನಿಕರಿಗೆ ಯಾವುದೇ ಅಡ್ಡಿಯಾಗಬಾರದು. ನ್ಯಾಯಾಲಯದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅನಗತ್ಯ ನಿರ್ಬಂಧ ಫಲಕಗಳನ್ನು ತೆರವುಗೊಳಿಸಬೇಕು ಎಂದು ಸೂಚಿಸಿದೆ.
ದೆಹಲಿ ಪೊಲೀಸರಿಗೆ ನೋಟಿಸ್
ಪ್ರತಿಭಟನೆ ಹಿನ್ನೆಲೆಯಲ್ಲಿ ಮೆಟ್ರೋ ಮತ್ತು ರೈಲು ಸೇವೆಗಳಿಗೆ ಅಡ್ಡಿಪಡಿಸಲಾಗಿದೆ ಹಾಗೂ ಇಂಟರ್ನೆಟ್ ಸೇವೆಗಳ ಮೇಲೂ ನಿರ್ಬಂಧ ವಿಧಿಸಲಾಗಿದೆ ಎಂಬ ಆರೋಪಗಳ ಕುರಿತು ಸುಪ್ರೀಂ ಕೋರ್ಟ್ ದೆಹಲಿ ಪೊಲೀಸರು, ಕೇಂದ್ರ ಗೃಹ ಕಾರ್ಯದರ್ಶಿ ಮತ್ತು ದೆಹಲಿ ಮೆಟ್ರೋ ರೈಲು ನಿಗಮಕ್ಕೆ (DMRC) ನೋಟಿಸ್ ಜಾರಿ ಮಾಡಿದೆ. ಮಂಗಳವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿ, ಮುಂದಿನ ವಿಚಾರಣೆಯನ್ನು ಅಕ್ಟೋಬರ್ 13ಕ್ಕೆ ನಿಗದಿಪಡಿಸಿದೆ.
ವಿಚಾರಣೆ ವೇಳೆ ದೆಹಲಿ ಪೊಲೀಸರ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಮೆಟ್ರೋ ಮತ್ತು ರೈಲು ಸೇವೆಗಳು ಪುನರಾರಂಭಗೊಂಡಿದ್ದು, ಇಂಟರ್ನೆಟ್ ಸೇವೆಗಳನ್ನೂ ಮರುಸ್ಥಾಪಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಪ್ರತಿಭಟನಾಕಾರರ ಬಂಧನದ ಬಗ್ಗೆಯೂ ವಿಚಾರಣೆ
ಸಿಜೆಪಿ (CJP) ಸಂಸ್ಥಾಪಕ ಅಭಿಜಿತ್ ದಿಪ್ಕೆ, ಸಹ-ಸಂಚಾಲಕ ಸೌರವ್ ದಾಸ್ ಮತ್ತು ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಅವರನ್ನು ಬಂಧಿಸಿದ ಸುಮಾರು 24 ಗಂಟೆಗಳ ಬಳಿಕ ಬಿಡುಗಡೆ ಮಾಡಲಾಗಿದೆ. ಮುಂದಿನ ಒಂದು ವರ್ಷದವರೆಗೆ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ತರುವ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ ಎಂಬ ಷರತ್ತಿನ ಮೇಲೆ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ನ್ಯಾಯಾಲಯದ ವಿಚಾರಣೆಯಲ್ಲಿ ತಿಳಿದುಬಂದಿದೆ.
ಪ್ರತಿಭಟನೆ ನಡೆಸುವ ಹಕ್ಕು ನಾಗರಿಕರಿಗೆ ಇದೆ. ಆದರೆ ಪ್ರತಿಭಟನೆಯು ಕಾನೂನಿನ ಚೌಕಟ್ಟಿನೊಳಗೆ ನಡೆಯಬೇಕು ಎಂದು ಪೀಠ ಸ್ಪಷ್ಟಪಡಿಸಿದೆ. ಅದೇ ಸಮಯದಲ್ಲಿ ಶಾಂತಿಯುತ ಮತ್ತು ನಿಶಸ್ತ್ರ ಪ್ರತಿಭಟನಾಕಾರರನ್ನು ಕಾನೂನುಬದ್ಧ ಕಾರಣಗಳಿಲ್ಲದೆ ಬಂಧಿಸುವಂತಿಲ್ಲ ಎಂದು ಹೇಳಿದೆ.





