ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಮತ್ತೆ ತೆರೆ ಮೇಲೆ ಬರ್ತಾರಾ..? ಹೀಗೊಂದು ಕುತೂಹಲ ಗಾಂಧಿನಗರದ ಗಲ್ಲಿ ಗಲ್ಲಿಯಲ್ಲೂ ರಾರಾಜಿಸ್ತಿದೆ. ಅದಕ್ಕೆ ಕಾರಣ ನಿರ್ದೇಶಕ ವಿಜಯ್ ಪ್ರಸಾದ್ ಅವರ ಇತ್ತೀಚಿನ ಓಪನ್ ಚಾಲೆಂಜ್. ನೀರ್ ದೋಸೆ ವಿವಾದ, ಮುನಿಸು, ಕಾಂಟ್ರೋವರ್ಸಿಗಳನ್ನೆಲ್ಲಾ ಬದಿಗೊತ್ತಿ, ವಿಜಯ್ ಈಗ ರಮ್ಯಾಗೆ ಬಿಗ್ ಆಫರ್ ಒಂದನ್ನು ಕೊಟ್ಟಿದ್ದಾರೆ. ಅಷ್ಟಕ್ಕೂ ವಿಜಯ್ ಪ್ರಸಾದ್ ಈ ಪೋಸ್ಟ್ ಹಾಕಿದ್ದೇಕೆ..? ರಮ್ಯಾಗೆ ಕೊಟ್ಟ ಆ ಓಪನ್ ಚಾಲೆಂಜ್ ಏನು..? ಇದರ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ…
- ನಟಿ ರಮ್ಯಾಗೆ ಓಪನ್ ಚಾಲೆಂಜ್.. ಏನು ಪ್ರಸಾದ್ ಇದೆಲ್ಲಾ..?
- ಚಿತ್ರರಂಗಕ್ಕೆ ಮರಳುವುದಾದರೆ ತಿಳಿಸಿ.. ಸ್ಕ್ರಿಪ್ಟ್ ರೆಡಿ ಎಂದ ಡೈರೆಕ್ಟರ್
- ರಮ್ಯಾ ತಂದೆಯೊಂದಿಗಿನ ಒಡನಾಟ ನೆನೆದು ಭಾವುಕ ಪೋಸ್ಟ್
- ಹಳೆಯ ಮುನಿಸು.. ಕಾಗೆ ಹಾರಿಸ್ತಾರೆ ಅಂದ್ರೂ ನಾ ಹಾರೋಕೆ ರೆಡಿ
ಸಿನಿಮಾಗಳಿಂದ ದೂರವಿದ್ದರೂ ರಮ್ಯಾ ಅವರ ಸ್ಯಾಂಡಲ್ವುಡ್ ಕ್ವೀನ್ ಇಮೇಜ್ ಹಾಗೂ ಸ್ಟಾರ್ ಡಿಮ್ಯಾಂಡ್ ಕಮ್ಮಿಯಾಗಿಲ್ಲ. ವರ್ಷಗಳು ಕಳೆದರೂ ಅವರ ಸ್ಥಾನವನ್ನು ತುಂಬಲು ಮತ್ತೊಬ್ಬ ನಾಯಕಿ ಬಂದಿಲ್ಲ. ಇಂದಿಗೂ ಕನ್ನಡದಲ್ಲಿ ಯಾವುದೇ ದೊಡ್ಡ ಪ್ರಾಜೆಕ್ಟ್ ಅಥವಾ ಸ್ಟಾರ್ ನಟರ ಸಿನಿಮಾ ಸೆಟ್ಟೇರಿದರೂ, ಅಲ್ಲಿ ಮೊದಲ ನಾಯಕಿಯ ರೇಸ್ನಲ್ಲಿ ಕೇಳಿಬರುವ ಹೆಸರೇ ಮೋಹಕ ತಾರೆ ರಮ್ಯಾರದ್ದು. ವಿಜಯ್ ಪ್ರಸಾದ್ ಅವರಂತಹ ಕ್ರಿಯೇಟಿವ್ ನಿರ್ದೇಶಕ ಹಳೆಯ ವಿವಾದಗಳನ್ನೆಲ್ಲಾ ಪಕ್ಕಕ್ಕಿಟ್ಟು ಮತ್ತೆ ನೇರವಾಗಿ ಆಫರ್ ನೀಡುತ್ತಿರುವುದೇ ರಮ್ಯಾ ಅವರ ಮಾರ್ಕೆಟ್ ಮತ್ತು ಕ್ರೇಜ್ಗೆ ಸಾಕ್ಷಿ.
ಎಸ್, ವಿಜಯ್ ಪ್ರಸಾದ್ ನಿರ್ದೇಶನದ ಚೊಚ್ಚಲ ಸಿದ್ಲಿಂಗು ಚಿತ್ರದಲ್ಲಿ ಮಂಗಳಾ ಟೀಚರ್ ಪಾತ್ರದಲ್ಲಿ ರಮ್ಯಾ ಕಣ್ಣಾಡಿಸಿ, ಪ್ರೇಕ್ಷಕರ ಮನ ಗೆದ್ದಿದ್ದರು. ಈ ಚಿತ್ರದ ಸಕ್ಸಸ್ ಎಷ್ಟಿತ್ತೆಂದರೆ, ರಮ್ಯಾ ಅವರೇ ಖುದ್ದಾಗಿ ವಿಜಯ್ ಪ್ರಸಾದ್ ಅವರ ಮುಂದಿನ ಸಿನಿಮಾದಲ್ಲೂ ನನಗೊಂದು ಒಳ್ಳೆ ರೋಲ್ ಕೊಡಿ ಅಂತ ಆಸೆ ವ್ಯಕ್ತಪಡಿಸಿದ್ದರು. ಆದರೆ, ಜಗ್ಗೇಶ್ ಮತ್ತು ರಮ್ಯಾ ಕಾಂಬಿನೇಷನ್ನಲ್ಲಿ ಮೂಡಿಬರಬೇಕಿದ್ದ ನೀರ್ ದೋಸೆ ಶೂಟಿಂಗ್ ವೇಳೆ ರಮ್ಯಾ ರಾಜಕೀಯಕ್ಕೆ ಪ್ರವೇಶಿಸಿ ಸಂಸದೆಯಾದಾಗ ಇಬ್ಬರ ನಡುವೆ ಬಿರುಕು ಮೂಡಿತು. ಅರ್ಧಕ್ಕೆ ಸಿನಿಮಾ ಬಿಟ್ಟು ರಮ್ಯಾ ಹೊರನಡೆದಾಗ ವಿಜಯ್ ಪ್ರಸಾದ್ ತೀವ್ರ ಬೇಸರ ವ್ಯಕ್ತಪಡಿಸಿದ್ದಲ್ಲದೆ, ರಮ್ಯಾ ಇಲ್ಲದಿದ್ದರೂ ಈ ಸಿನಿಮಾ ಮುಗಿಸುತ್ತಿನಿ ಎಂದು ಸವಾಲಾಗಿ ಸ್ವೀಕರಿಸಿ ಹರಿಪ್ರಿಯಾ ಅವರನ್ನು ಕರೆತಂದು ಹಿಟ್ ಮಾಡಿದ್ದರು.
ವರ್ಷಗಳ ನಂತರ ಈ ಹಳೆಯ ಮುನಿಸನ್ನೆಲ್ಲಾ ಮರೆತು ನಿರ್ದೇಶಕ ವಿಜಯ್ ಪ್ರಸಾದ್ ಫೇಸ್ಬುಕ್ನಲ್ಲಿ ಹಾಕಿರುವ ಪೋಸ್ಟ್ ಈಗ ಸ್ಯಾಂಡಲ್ವುಡ್ನಲ್ಲಿ ಸಖತ್ ಚರ್ಚೆಗೆ ಗ್ರಾಸವಾಗಿದೆ. “ಇದು ನನ್ನ ಅಸಹಾಯಕತೆಯೂ ಅಲ್ಲ, ದೌರ್ಬಲ್ಯವೂ ಅಲ್ಲ, ಒಬ್ಬ ಬರಹಗಾರನ ಮತ್ತು ನಿರ್ದೇಶಕನ ಆತ್ಮವಿಶ್ವಾಸ.. ನೀವು ಕಾಗೆ ಹಾರಿಸುವಲ್ಲಿ ನಿಸ್ಸೀಮರು ಎಂದು ಜಗತ್ತು ಹೇಳಿದರೂ ನಾನು ಹಾರಾಡಲೂ ಸಿದ್ಧ ಎಂದು ಬರೆದುಕೊಂಡಿದ್ದಾರೆ. ರಮ್ಯಾ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುವ ಬಗ್ಗೆ ಆಗಾಗ ಸುದ್ದಿ ಹರಿದಾಡುತ್ತಿರುವ ಈ ಸಮಯದಲ್ಲಿ, ಅವರ ತಂದೆಯವರೊಂದಿಗಿನ ಹಳೆಯ ನೆನಪು ಮತ್ತು ಪರಿಶುದ್ಧ ಒಡನಾಟವನ್ನು ನೆನಪಿಸಿಕೊಂಡು ಈ ಓಪನ್ ಆಫರ್ ನೀಡಿದ್ದಾರೆ.
ತಮ್ಮ ಪೋಸ್ಟ್ನಲ್ಲಿ ರಮ್ಯಾ ಅವರ ತಂದೆ ದಿ. ಆರ್. ಮೋಹನ್ ಅವರನ್ನು ನೆನಪಿಸಿಕೊಂಡಿರುವ ವಿಜಯ್ ಪ್ರಸಾದ್, ನಿಮ್ಮ ತಂದೆಯವರೊಂದಿಗೆ ಇದ್ದ ನಮ್ಮ-ನಿಮ್ಮ ಪರಿಶುದ್ಧ ಒಡನಾಟದ ಕಾರಣಕ್ಕೆ ಈ ಮಾತು. ಚಿತ್ರರಂಗಕ್ಕೆ ನೀವು ಮರಳುವುದಾದರೆ ತಿಳಿಸಿ, ಸಂಪೂರ್ಣ ಚಿತ್ರಕಥೆ ನಿಮ್ಮ ಮುಂದೆ ಇಡಲು ಸಿದ್ಧ ದೋಣಿ ಸಾಗಲಿ, ಮುಂದೆ ಹೋಗಲಿ… ಎಂದು ಬರೆದು ರಮ್ಯಾ ಸ್ಯಾಂಡಲ್ವುಡ್ಗೆ ರೀ-ಎಂಟ್ರಿ ಕೊಟ್ರೆ ತಮ್ಮದೇ ನಿರ್ದೇಶನದ ಮೂಲಕವೇ ಆಗಬೇಕು ಎಂಬಂತೆ ನೇರ ಆಹ್ವಾನ ನೀಡಿದ್ದಾರೆ. ಹಳೆಯ ಕಹಿ ಘಟನೆಗಳನ್ನು ಬದಿಗೊತ್ತಿ, ಈ ಜೋಡಿ ಮತ್ತೆ ಒಂದಾಗಿ ಬೆಳ್ಳಿಪರದೆಯ ಮೇಲೆ ಹೊಸ ಮ್ಯಾಜಿಕ್ ಮಾಡುತ್ತಾ..? ರಮ್ಯಾ ಈ ಚಾಲೆಂಜ್ ಒಪ್ಪಿಕೊಳ್ತಾರ ಅಥವಾ ಕೌಂಟರ್ ಕೊಡ್ತಾರಾ ಎಂಬುದನ್ನು ಕಾಲವೇ ಉತ್ತರಿಸಬೇಕಿದೆ.
ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್





