ಬೀದರ್ ಸೆ.22: ಬೀದರ್ ಜಿಲ್ಲೆಯಲ್ಲಿ ಸಂಜೆ ಗುಡುಗು ಸಹಿತ ಧಾರಾಕಾರ ಮಳೆಯಾಗಿದ್ದು, ಸಿಡಿಲು ಬಡಿದು ಎರಡು ಪ್ರತ್ಯೇಕ ಘಟನೆಗಳಲ್ಲಿ ಓರ್ವ ವ್ಯಕ್ತಿ ಹಾಗೂ 11 ಕುರಿಗಳು ಮೃತಪಟ್ಟಿರುವ ಘಟನೆ ನಡೆದಿದೆ.
ಚಿಟಗುಪ್ಪಾ ತಾಲೂಕಿನ ಉಡಮನಳ್ಳಿ ಗ್ರಾಮದಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ಝರಣಪ್ಪ (45) ಎಂಬವರು ಮೃತಪಟ್ಟಿದ್ದಾರೆ. ಸಿಡಿಲಿನ ಹೊಡೆತಕ್ಕೆ ಸ್ಥಳದಲ್ಲೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಇನ್ನೊಂದೆಡೆ, ಬೇಮಳಖೇಡ ಗ್ರಾಮದಲ್ಲೂ ಸಿಡಿಲು ಬಡಿದು 11 ಕುರಿಗಳು ಮೃತಪಟ್ಟಿವೆ. ಈ ಕುರಿಗಳು ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ತಳ್ಳೊಳ್ಳಿ ಗ್ರಾಮದ ವೆಂಕಪ್ಪ ಪೂಜಾರಿ ಎಂಬುವವರಿಗೆ ಸೇರಿದ್ದವು ಎಂದು ತಿಳಿದುಬಂದಿದೆ.
ಘಟನೆಗಳ ಮಾಹಿತಿ ತಿಳಿಯುತ್ತಿದ್ದಂತೆ ಕಂದಾಯ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಡಿಲು ಬಡಿತದಿಂದ ಉಂಟಾದ ಹಾನಿಯ ಕುರಿತು ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.
ಇನ್ನು ಬೀದರ್ ಜಿಲ್ಲೆಯ ಹಲವೆಡೆ ಸಂಜೆ ಭಾರೀ ಮಳೆಯಾಗಿದೆ. ಬೀದರ್ ನಗರ, ಚಿಟಗುಪ್ಪಾ, ಹುಮನಾಬಾದ್ ಸೇರಿದಂತೆ ವಿವಿಧೆಡೆ ಗುಡುಗು ಸಹಿತ ಧಾರಾಕಾರ ಮಳೆ ಸುರಿದಿದೆ. ಮಳೆಯಿಂದಾಗಿ ಕೆಲವೆಡೆ ಜನಜೀವನ ಅಸ್ತವ್ಯಸ್ತವಾಗಿದ್ದು, ಸಿಡಿಲಿನ ಆರ್ಭಟವೂ ಕಂಡುಬಂದಿದೆ.





