ಬೀದರ್ ಸೆ. 22: ಖರ್ಚಿಗೆ ಹಣ ನೀಡದ ವಿಚಾರಕ್ಕೆ ಮಗನೊಬ್ಬ ತನ್ನ ತಂದೆಯನ್ನೇ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಹಸ್ಸಿಕೇರಾ ಗ್ರಾಮದಲ್ಲಿ ನಡೆದಿದೆ. ಹಣದ ವಿಚಾರಕ್ಕೆ ತಂದೆ ಮತ್ತು ಮಗನ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು, ಈ ಘಟನೆ ಗ್ರಾಮದಲ್ಲಿ ಆತಂಕವನ್ನು ಉಂಟು ಮಾಡಿದೆ.
ಕೊಲೆಯಾದ ವ್ಯಕ್ತಿಯನ್ನು ದಿಲೀಪ್ ಕುರ್ನಾಲೆ (56) ಎಂದು ಗುರುತಿಸಲಾಗಿದೆ. ಅವರ ಪುತ್ರ ಕೃಷ್ಣಾ ಕುರ್ನಾಲೆ (27) ಹತ್ಯೆ ಆರೋಪಿಯಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಮಾಹಿತಿಯ ಪ್ರಕಾರ, ಕೃಷ್ಣಾ ವಿವಾಹವಾಗಿದ್ದರೂ ತಂದೆಯ ದುಡಿಮೆಯ ಹಣವನ್ನೇ ಅವಲಂಬಿಸಿಕೊಂಡಿದ್ದ ಎನ್ನಲಾಗಿದೆ. ಮದುವೆಯಾಗಿದ್ದೀಯಾ, ದೊಡ್ಡವನಾಗಿದ್ದೀಯಾ, ನನ್ನೊಂದಿಗೆ ಬಂದು ಹೊಲದಲ್ಲಿ ಕೆಲಸ ಮಾಡು ಎಂದು ದಿಲೀಪ್ ಮಗನಿಗೆ ಬುದ್ಧಿಮಾತು ಹೇಳುತ್ತಿದ್ದರು ಎನ್ನಲಾಗಿದೆ. ಆದರೆ ಕೃಷ್ಣಾ ತನ್ನ ಪಾಲಿನ ಆಸ್ತಿ ನೀಡಬೇಕು ಅಥವಾ ಖರ್ಚಿಗೆ ಹಣ ಕೊಡಬೇಕು ಎಂದು ತಂದೆಯನ್ನು ಒತ್ತಾಯಿಸುತ್ತಿದ್ದ ಎಂದು ತಿಳಿದು ಬಂದಿದೆ.
ನಿನ್ನೆ ಬೆಳಗ್ಗೆ ಕೃಷ್ಣಾ ತಂದೆಗೆ ತಿಳಿಸದೆ ಅವರ ಜೇಬಿನಲ್ಲಿದ್ದ ರೂ. 500 ಹಣವನ್ನು ತೆಗೆದುಕೊಂಡಿದ್ದಾನೆ ಎನ್ನಲಾಗಿದೆ. ಇದನ್ನು ಗಮನಿಸಿದ ದಿಲೀಪ್, ತನಗೆ ಹೇಳದೆ ಹಣ ಯಾಕೆ ತೆಗೆದುಕೊಂಡೆ ಎಂದು ಮಗನನ್ನು ಪ್ರಶ್ನಿಸಿದ್ದಾರೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ಆರಂಭವಾಗಿದೆ.
ಬಳಿಕ ಜಗಳ ವಿಕೋಪಕ್ಕೆ ತಿರುಗಿದ್ದು, ಕೃಷ್ಣಾ ತಂದೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ನಡುರಸ್ತೆಯಲ್ಲೇ ದಿಲೀಪ್ ಅವರ ತಲೆಗೆ ಕಲ್ಲಿನಿಂದ ನಾಲ್ಕು ಬಾರಿ ಹೊಡೆದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಳಿಕ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭಾಲ್ಕಿ ಡಿವೈಎಸ್ಪಿ ಬಲ್ಲಪ್ಪ ನಂದಗಾವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಠಾಣಾಕುಶನೂರ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.
ತಂದೆ ಮತ್ತು ಮಗನ ನಡುವಿನ ಹಣಕಾಸಿನ ವಿಚಾರದ ಜಗಳ ಇಷ್ಟೊಂದು ಘೋರ ಘಟನೆಗೆ ಕಾರಣವಾಗಿರುವುದು ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ. ಘಟನೆಯ ಹಿಂದಿನ ಸಂಪೂರ್ಣ ಕಾರಣಗಳು ಹಾಗೂ ಹತ್ಯೆಯ ಸಂದರ್ಭಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.





