ನವದೆಹಲಿ: ದೇಶದ ಕೋಟ್ಯಂತರ LPG ಗ್ರಾಹಕರಿಗೆ ಸಂಬಂಧಿಸಿದಂತೆ ಆಧಾರ್ ಆಧಾರಿತ ಬಯೋಮೆಟ್ರಿಕ್ ದೃಢೀಕರಣ ಅಥವಾ e-KYC ಕುರಿತು ಹಲವು ಸುದ್ದಿಗಳು ಹರಿದಾಡುತ್ತಿವೆ. ಬಯೋಮೆಟ್ರಿಕ್ e-KYC ಪೂರ್ಣಗೊಳಿಸದ ಗ್ರಾಹಕರ ಗ್ಯಾಸ್ ಕನೆಕ್ಷನ್ ಬ್ಲಾಕ್ ಆಗಲಿದೆ ಮತ್ತು ರಿಫಿಲ್ ಪೂರೈಕೆ ನಿಲ್ಲಲಿದೆ ಎಂಬ ರೀತಿಯ ವರದಿಗಳು ಗ್ರಾಹಕರಲ್ಲಿ ಗೊಂದಲ ಮೂಡಿಸಿವೆ. ಆದರೆ ಈ ಕುರಿತು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಈ ಹಿಂದೆ ಸ್ಪಷ್ಟನೆ ನೀಡಿದ್ದು, e-KYC ಪ್ರಕ್ರಿಯೆಯ ಉದ್ದೇಶ ಗ್ರಾಹಕರ ಗುರುತು ದೃಢೀಕರಣ, ಅರ್ಹ ಫಲಾನುಭವಿಗಳ ಗುರುತಿಸುವಿಕೆ ಹಾಗೂ LPG ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚಿಸುವುದಾಗಿದೆ.
ಆಧಾರ್ ಆಧಾರಿತ ಬಯೋಮೆಟ್ರಿಕ್ ದೃಢೀಕರಣವನ್ನು LPG ಗ್ರಾಹಕರಿಗೆ ಕೈಗೊಳ್ಳುವಂತೆ ತೈಲ ಮಾರುಕಟ್ಟೆ ಕಂಪನಿಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿತ್ತು. ಈ ಪ್ರಕ್ರಿಯೆಯ ಮೂಲಕ ನಕಲಿ, ಡುಪ್ಲಿಕೇಟ್ ಹಾಗೂ ಅನರ್ಹ ಸಂಪರ್ಕಗಳನ್ನು ಗುರುತಿಸಿ ವ್ಯವಸ್ಥೆಯಿಂದ ಹೊರಗಿಡುವ ಉದ್ದೇಶ ಹೊಂದಲಾಗಿದೆ. PAHAL ಯೋಜನೆಯಡಿ ಸಬ್ಸಿಡಿ ಸರಿಯಾದ ಫಲಾನುಭವಿಗಳಿಗೆ ತಲುಪುವಂತೆ ಮಾಡುವಲ್ಲಿಯೂ ಆಧಾರ್ ಆಧಾರಿತ ದೃಢೀಕರಣ ಪ್ರಮುಖ ಪಾತ್ರ ವಹಿಸುತ್ತದೆ.
e-KYC ಮಾಡದಿದ್ದರೆ ಗ್ಯಾಸ್ ಬಂದ್ ಆಗುತ್ತಾ?
ಈ ಪ್ರಶ್ನೆ ಇದೀಗ LPG ಗ್ರಾಹಕರಲ್ಲಿ ಪ್ರಮುಖವಾಗಿದೆ. 2026ರ ಮಾರ್ಚ್‌ನಲ್ಲಿ ಪೆಟ್ರೋಲಿಯಂ ಸಚಿವಾಲಯ ನೀಡಿದ ಸ್ಪಷ್ಟೀಕರಣದ ಪ್ರಕಾರ, ಈಗಾಗಲೇ ಬಯೋಮೆಟ್ರಿಕ್ ದೃಢೀಕರಣ ಮಾಡದಿರುವ ಕಾರಣಕ್ಕೆ ಮಾತ್ರ LPG ರಿಫಿಲ್ ಪೂರೈಕೆ ನಿಲ್ಲುವುದಿಲ್ಲ ಎಂದು ಸರ್ಕಾರ ತಿಳಿಸಿತ್ತು. e-KYC ಅಗತ್ಯವಿರುವವರು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂಬುದೇ ಸರ್ಕಾರದ ಸೂಚನೆಯಾಗಿದೆ.
2024ರಲ್ಲಿಯೂ ಸಚಿವಾಲಯ ಇದೇ ರೀತಿಯ ಸ್ಪಷ್ಟನೆ ನೀಡಿತ್ತು. LPG ಗ್ರಾಹಕರು ತಮ್ಮ ಬಯೋಮೆಟ್ರಿಕ್ ಆಧಾರ್ ದೃಢೀಕರಣವನ್ನು ಗ್ಯಾಸ್ ಸಿಲಿಂಡರ್ ವಿತರಿಸುವ ಸಿಬ್ಬಂದಿಯ ಮೂಲಕ, ಸಂಬಂಧಿತ LPG ವಿತರಕರ ಕಚೇರಿಯಲ್ಲಿ ಅಥವಾ ಆಯಾ ತೈಲ ಕಂಪನಿಗಳ ಮೊಬೈಲ್ ಆ್ಯಪ್‌ಗಳ ಮೂಲಕ ಪೂರ್ಣಗೊಳಿಸಬಹುದಾಗಿದೆ ಎಂದು ತಿಳಿಸಲಾಗಿತ್ತು.
e-KYC ಯಾಕೆ ಮುಖ್ಯ?
LPG ವಿತರಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚಿಸುವುದು, ಅರ್ಹ ಗ್ರಾಹಕರಿಗೆ ಸಬ್ಸಿಡಿ ತಲುಪಿಸುವುದು ಹಾಗೂ ಒಂದೇ ವ್ಯಕ್ತಿಯ ಹೆಸರಿನಲ್ಲಿ ಇರುವ ಬಹು ಸಂಪರ್ಕಗಳನ್ನು ಗುರುತಿಸುವುದು e-KYC ಮತ್ತು ಆಧಾರ್ ದೃಢೀಕರಣದ ಪ್ರಮುಖ ಉದ್ದೇಶಗಳಾಗಿವೆ. ಸರ್ಕಾರದ ಮಾಹಿತಿಯ ಪ್ರಕಾರ, ಡುಪ್ಲಿಕೇಟ್ LPG ಸಂಪರ್ಕಗಳನ್ನು ಗುರುತಿಸಲು ಆಧಾರ್, ಬ್ಯಾಂಕ್ ಖಾತೆ, ರೇಷನ್ ಕಾರ್ಡ್, ಹೆಸರು ಮತ್ತು ವಿಳಾಸ ಸೇರಿದಂತೆ ಹಲವು ಮಾಹಿತಿಗಳನ್ನು ಬಳಸಲಾಗುತ್ತದೆ.
2025ರ ಡಿಸೆಂಬರ್ ವೇಳೆಗೆ PMUY ಗ್ರಾಹಕರಲ್ಲಿ ಶೇ.71ರಷ್ಟು ಮತ್ತು PMUY ಹೊರಗಿನ ಗ್ರಾಹಕರಲ್ಲಿ ಶೇ.62ರಷ್ಟು ಮಂದಿ ಬಯೋಮೆಟ್ರಿಕ್ ಆಧಾರ್ ದೃಢೀಕರಣ ಪೂರ್ಣಗೊಳಿಸಿದ್ದರು ಎಂದು ಕೇಂದ್ರ ಸರ್ಕಾರ ತಿಳಿಸಿತ್ತು.
ಗ್ರಾಹಕರು ಏನು ಮಾಡಬೇಕು?
ತಮ್ಮ LPG ಸಂಪರ್ಕಕ್ಕೆ e-KYC ಅಗತ್ಯವಿದೆಯೇ ಎಂಬುದನ್ನು ಗ್ರಾಹಕರು ಸಂಬಂಧಿತ LPG ವಿತರಕರು ಅಥವಾ ಅಧಿಕೃತ ತೈಲ ಕಂಪನಿಗಳ ಡಿಜಿಟಲ್ ಸೇವೆಗಳ ಮೂಲಕ ಪರಿಶೀಲಿಸಬಹುದು. ಅಗತ್ಯವಿದ್ದರೆ ಬಯೋಮೆಟ್ರಿಕ್ ದೃಢೀಕರಣವನ್ನು ಪೂರ್ಣಗೊಳಿಸುವುದು ಸೂಕ್ತ.
ಪ್ರಧಾನಮಂತ್ರಿ ಉಜ್ವಲ ಯೋಜನೆ (PMUY)ಯ ಅಧಿಕೃತ ವೆಬ್‌ಸೈಟ್‌ನಲ್ಲಿಯೂ LPG ಗ್ರಾಹಕರಿಗೆ e-KYC ಸೇರಿದಂತೆ ವಿವಿಧ ಸೇವೆಗಳ ಮಾಹಿತಿ ಲಭ್ಯವಿದೆ.





