ಚಿಕ್ಕಮಗಳೂರು, ಸೆಪ್ಟೆಂಬರ್ 12: ಗೌರಿ-ಗಣೇಶ ಹಬ್ಬದ ಸಂಭ್ರಮಕ್ಕೆ ದಿನಗಣನೆ ಆರಂಭವಾಗಿದ್ದು, ಹಬ್ಬದ ಸಂದರ್ಭದಲ್ಲಿ ಪ್ರವಾಸಕ್ಕೆ ತೆರಳುವವರಿಗೆ ಚಿಕ್ಕಮಗಳೂರು ಜಿಲ್ಲಾಡಳಿತ ಮಹತ್ವದ ಸೂಚನೆ ನೀಡಿದೆ. ಸೆಪ್ಟೆಂಬರ್ 14ರಂದು ಒಂದು ದಿನದ ಮಟ್ಟಿಗೆ ಮುಳ್ಳಯ್ಯನಗಿರಿ ಸೇರಿದಂತೆ ಚಂದ್ರದ್ರೋಣ ಪರ್ವತ ಸಾಲಿನ ಪ್ರಮುಖ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಹಾಗೂ ಶ್ರೀ ಗುರು ನಾರುಕಂತೆ ಮಠಗಳಿಗೆ ಸುತ್ತಮುತ್ತಲಿನ 40 ಕ್ಕೂ ಹೆಚ್ಚು ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಭಕ್ತರು ಇಲ್ಲಿ ಹಣ್ಣು-ಕಾಯಿ ಮಾಡಿಸುವುದು ಹಾಗೂ ಚೌತಿ ಕಾಯಿ ಹೊಡೆಯುವಂತಹ ಸಾಂಪ್ರದಾಯಿಕ ಆಚರಣೆಗಳಲ್ಲಿ ಭಾಗವಹಿಸುತ್ತಾರೆ. ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಈ ಧಾರ್ಮಿಕ ಮತ್ತು ಸಾಂಪ್ರದಾಯಿಕ ಆಚರಣೆಗಳಿಗೆ ಯಾವುದೇ ಅಡಚಣೆಯಾಗದಂತೆ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಂಡಿದೆ.
ಹಬ್ಬದ ದಿನದಂದು ಭಕ್ತರ ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕೂಡ ಆಗಮಿಸಿದರೆ ಪ್ರಮುಖ ರಸ್ತೆಗಳು ಹಾಗೂ ಪ್ರವಾಸಿ ತಾಣಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗುವ ಸಾಧ್ಯತೆಯಿದೆ. ಇದರಿಂದ ಸಂಚಾರ ವ್ಯವಸ್ಥೆಗೆ ತೊಂದರೆಯಾಗುವುದರ ಜೊತೆಗೆ ಭಕ್ತರು ತಮ್ಮ ಧಾರ್ಮಿಕ ಆಚರಣೆಗಳನ್ನು ಸುಗಮವಾಗಿ ನಡೆಸಲು ಸಮಸ್ಯೆಯಾಗಬಹುದು. ಹೀಗಾಗಿ ಸಾರ್ವಜನಿಕರ ಹಾಗೂ ಭಕ್ತಾದಿಗಳ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾಡಳಿತ ಒಂದು ದಿನದ ಪ್ರವೇಶ ನಿರ್ಬಂಧವನ್ನು ಜಾರಿಗೊಳಿಸಿದೆ.
ಸೆಪ್ಟೆಂಬರ್ 14ರಂದು ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿ, ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಹಾಗೂ ಮಾಣಿಕ್ಯಧಾರಾ ಸೇರಿದಂತೆ ಚಂದ್ರದ್ರೋಣ ಪರ್ವತ ಪ್ರದೇಶದ ಪ್ರಮುಖ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ತೆರಳದಂತೆ ಸೂಚಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಅವರು ಪ್ರವಾಸಿಗರಿಗೆ ಮನವಿ ಮಾಡಿದ್ದು, ಸೆಪ್ಟೆಂಬರ್ 14ರಂದು ಈ ಪ್ರದೇಶಗಳಿಗೆ ಕೈಗೊಳ್ಳಬೇಕಿದ್ದ ಪ್ರವಾಸವನ್ನು ಮುಂದೂಡುವಂತೆ ತಿಳಿಸಿದ್ದಾರೆ. ಹಬ್ಬದ ದಿನದಂದು ಉಂಟಾಗಬಹುದಾದ ಜನದಟ್ಟಣೆ ಮತ್ತು ಸಂಚಾರ ದಟ್ಟಣೆಯನ್ನು ನಿಯಂತ್ರಿಸುವುದು ಜಿಲ್ಲಾಡಳಿತದ ಪ್ರಮುಖ ಉದ್ದೇಶವಾಗಿದೆ.
ಹೀಗಾಗಿ ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಚಿಕ್ಕಮಗಳೂರಿನ ಗಿರಿಧಾಮಗಳಿಗೆ ಪ್ರವಾಸದ ಯೋಜನೆ ಹಾಕಿಕೊಂಡಿರುವವರು ಜಿಲ್ಲಾಡಳಿತದ ಸೂಚನೆಯನ್ನು ಗಮನಿಸಿ ತಮ್ಮ ಪ್ರವಾಸವನ್ನು ಬೇರೆ ದಿನಕ್ಕೆ ಮುಂದೂಡುವುದು ಸೂಕ್ತವಾಗಿದೆ. ಸೆಪ್ಟೆಂಬರ್ 14ರಂದು ನಿರ್ಬಂಧಿತ ಪ್ರದೇಶಗಳಿಗೆ ತೆರಳುವ ಮುನ್ನ ಪ್ರವಾಸಿಗರು ಜಿಲ್ಲಾಡಳಿತದ ಮುಂದಿನ ಸೂಚನೆಗಳನ್ನು ಗಮನಿಸುವಂತೆ ಮನವಿ ಮಾಡಲಾಗಿದೆ.





