ಶಿವಮೊಗ್ಗ ಸೆ.12: ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಶಿವಮೊಗ್ಗ ಜಿಲ್ಲೆಯ ಈಸೂರಿನಿಂದ ಶಿಕಾರಿಪುರದವರೆಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಪಾದಯಾತ್ರೆ ನಡೆಸಲಾಯಿತು. ಪಾದಯಾತ್ರೆ ಬಳಿಕ ಶಿಕಾರಿಪುರದಲ್ಲಿ ನಡೆದ ಸಭೆಯಲ್ಲಿ ಸಚಿವ ಮಧು ಬಂಗಾರಪ್ಪ ಮಾತನಾಡಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸದ ಬಿ.ವೈ. ರಾಘವೇಂದ್ರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕಸ್ತೂರಿ ರಂಗನ್ ವರದಿ ಜಾರಿಯಾದರೆ ಪಶ್ಚಿಮ ಘಟ್ಟಗಳ ಸುಮಾರು 20 ಸಾವಿರ ಎಕರೆ ಪ್ರದೇಶಕ್ಕೆ ಹಾನಿಯಾಗುವುದರ ಜೊತೆಗೆ ರೈತರ ಬದುಕು ಸಂಕಷ್ಟಕ್ಕೆ ಸಿಲುಕಲಿದೆ ಎಂದು ಮಧು ಬಂಗಾರಪ್ಪ ಆರೋಪಿಸಿದರು. ರೈತರು ಮತ್ತು ಬಡವರ ಹಿತ ಕಾಪಾಡುವುದು ಕಾಂಗ್ರೆಸ್ ಪಕ್ಷದ ಬದ್ಧತೆ ಎಂದು ಅವರು ಹೇಳಿದರು.
ಸಂಸದ ಬಿ.ವೈ. ರಾಘವೇಂದ್ರ ಅವರು ದೆಹಲಿಗೆ ತೆರಳಿ ಪ್ರಧಾನಿ ಜೊತೆ ಫೋಟೋ ತೆಗೆಸಿಕೊಂಡು ಪ್ರಚಾರ ಪಡೆಯುವುದನ್ನು ಹೊರತುಪಡಿಸಿ ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಒಂದು ದಿನವೂ ಸಭೆಯಲ್ಲಿ ಮಾತನಾಡಿಲ್ಲ ಎಂದು ಸಚಿವರು ಟೀಕಿಸಿದರು. ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಿಕಾರಿಪುರ ಶಾಸಕ ಬಿ.ವೈ. ವಿಜಯೇಂದ್ರ ಅವರು ಬಗರ್ ಹುಕುಂ ಸಮಿತಿಯ ಅಧ್ಯಕ್ಷರಾಗಿದ್ದರೂ ಈವರೆಗೆ ಒಂದು ಸಭೆಯನ್ನೂ ನಡೆಸಿಲ್ಲ ಎಂದು ಆರೋಪಿಸಿದರು.
“ನಾನು ಸಭೆಯಲ್ಲಿ ಕುಳಿತಾಗಲೇ 30ಕ್ಕೂ ಹೆಚ್ಚು ಬಗರ್ ಹುಕುಂ ಸಮಸ್ಯೆಗಳ ಅರ್ಜಿಗಳು ಬಂದಿವೆ. ಆದರೆ ಸೊರಬದಲ್ಲಿ ಈ ಕುರಿತು ಒಂದು ಅರ್ಜಿಯೂ ಬಂದಿಲ್ಲ. ಹಾಗಾದರೆ ಇಲ್ಲಿನ ಶಾಸಕರು, ಸಮಿತಿಯ ಅಧ್ಯಕ್ಷರು ಯಾರು?” ಎಂದು ಮಧು ಬಂಗಾರಪ್ಪ ಪ್ರಶ್ನಿಸಿದರು. ವಿಜಯೇಂದ್ರ ಅವರು ಶಾಸಕರಾಗಿ ಈವರೆಗೆ ಸಭೆ ಕರೆಯದಿರುವುದು ನಾಚಿಕೆಗೇಡಿನ ಸಂಗತಿ ಎಂದರು.
ವಿಜಯೇಂದ್ರ ವಿರುದ್ಧ ವೈಯಕ್ತಿಕ ವಾಗ್ದಾಳಿ ನಡೆಸಿದ ಮಧು ಬಂಗಾರಪ್ಪ, ತಂದೆ ಯಡಿಯೂರಪ್ಪ ಅವರನ್ನು ಜೈಲಿಗೆ ಕಳುಹಿಸುವ ಪರಿಸ್ಥಿತಿ ನಿರ್ಮಾಣವಾಗಲು ವಿಜಯೇಂದ್ರ ಅವರ ಪಾತ್ರವಿದೆ ಎಂದು ಆರೋಪಿಸಿದರು. ಬೀದಿಯಲ್ಲಿ ಪಾದಯಾತ್ರೆ ನಡೆಸಿ ಪ್ರಚಾರ ಪಡೆಯುವ ಬದಲು ಅಧಿವೇಶನಕ್ಕೆ ಬಂದು ಕಸ್ತೂರಿ ರಂಗನ್, ಶರಾವತಿ ಹಾಗೂ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲಿ ಎಂದು ಸವಾಲು ಹಾಕಿದರು.
ತಾವು ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಪಾದಯಾತ್ರೆ ನಡೆಸಿ ನೀರಾವರಿ ಯೋಜನೆಗಳಿಗೆ ಅನುದಾನ ತಂದಿದ್ದಾಗಿ ಮಧು ಬಂಗಾರಪ್ಪ ಹೇಳಿದರು. ತಮ್ಮ ತಂದೆ ಎಸ್. ಬಂಗಾರಪ್ಪ ಅವರ ಆಡಳಿತದ ಅವಧಿಯಲ್ಲಿ ಜಾರಿಯಾದ ಉಚಿತ ವಿದ್ಯುತ್ ಯೋಜನೆಯಿಂದ ರೈತರು ಆರ್ಥಿಕವಾಗಿ ಸದೃಢರಾಗಿದ್ದಾರೆ ಎಂದು ಹೇಳಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಎದುರಾಗುವ ಸಾಧ್ಯತೆಯಿದ್ದು, ರಾಜ್ಯದ ಸುಮಾರು 100 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸುವ ಪ್ರಕ್ರಿಯೆಯಲ್ಲಿ ಶಿಕಾರಿಪುರ ಸೇರಿದಂತೆ ಜಿಲ್ಲೆಯ ಮತ್ತಷ್ಟು ತಾಲೂಕುಗಳು ಸೇರಬಹುದು ಎಂದು ಸಚಿವರು ತಿಳಿಸಿದರು.





