ಅಮೆರಿಕ ಸೆ.10: ಅಕ್ರಮ ವಲಸಿಗರನ್ನು ದೇಶದಿಂದ ಹೊರಹಾಕುವ ಉದ್ದೇಶದಿಂದ ಟ್ರಂಪ್ ಆಡಳಿತ ಆರಂಭಿಸಿರುವ ಅಭಿಯಾನ ಇದೀಗ ಭಾರತೀಯ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ. ಅಮೆರಿಕದ ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆ ಬಿಡುಗಡೆ ಮಾಡಿರುವ ಡಿಜಿಟಲ್ ಜಾಹೀರಾತಿನಲ್ಲಿ ಭಾರತೀಯರು ಮತ್ತು ಸಿಖ್ ಸಮುದಾಯವನ್ನು ಜನಾಂಗೀಯವಾಗಿ ಗುರಿಯಾಗಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
If you approach this nation with hostile intent, know this. We will defend ourselves. We will defend Americanism. We will defend our home.
Report Illegal Aliens on American Roads: 866-347-2423 pic.twitter.com/gJcDPA4CTH
— Homeland Security (@DHSgov) September 9, 2026
ವಿವಾದಕ್ಕೆ ಕಾರಣವಾಗಿರುವ ಪೋಸ್ಟರ್ನಲ್ಲಿ ಗಡ್ಡಧಾರಿ ವ್ಯಕ್ತಿಯೊಬ್ಬನ ಚಿತ್ರವನ್ನು ಬಳಸಲಾಗಿದ್ದು, “ನಮ್ಮ ರಸ್ತೆಗಳಿಂದ ಆಚೆ ಹೋಗಿ, ನಿಮಗೆ ಡ್ರೈವಿಂಗ್ ಬರುವುದಿಲ್ಲ ಮಿಸ್ಟರ್ ಸಿಂಗ್” ಎಂಬ ಸಂದೇಶವನ್ನು ನೀಡಲಾಗಿದೆ ಎನ್ನಲಾಗಿದೆ. ‘ಸಿಂಗ್’ ಎಂಬ ಸಾಮಾನ್ಯ ಸಿಖ್ ಹೆಸರು ಬಳಸಿ ಸಮುದಾಯವನ್ನೇ ಅಪಮಾನಿಸಲಾಗಿದೆ ಎಂದು ಭಾರತೀಯ ಮೂಲದ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ.
ಇಷ್ಟೇ ಅಲ್ಲದೆ, ಕೃತಕ ಬುದ್ಧಿಮತ್ತೆ (AI) ಮೂಲಕ ಸಿದ್ಧಪಡಿಸಲಾಗಿದೆ ಎನ್ನಲಾದ ಮತ್ತೊಂದು ವಿಡಿಯೋದಲ್ಲೂ ಭಾರತೀಯ ಮೂಲದ ಕೆಲವರ ಹೆಸರುಗಳನ್ನು ಪ್ರಸ್ತಾಪಿಸಲಾಗಿದೆ. ಅಪಘಾತ ಪ್ರಕರಣಗಳಿಗೆ ಸಂಬಂಧಿಸಿದಂತೆ ಉಲ್ಲೇಖಿಸಲಾದ ಹರ್ಜಿಂದರ್ ಸಿಂಗ್, ರಾಜಿಂದರ್ ಕುಮಾರ್ ಮತ್ತು ಜಸ್ವೀರ್ ಸಿಂಗ್ ಅವರಂತಹ ಹೆಸರುಗಳನ್ನು ಬಳಸಿಕೊಂಡು ಅವರನ್ನು ‘ಏಲಿಯನ್ಸ್’ ಎಂದು ಬಿಂಬಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ಅಮೆರಿಕದಲ್ಲಿ ದಾಖಲೆಗಳಿಲ್ಲದೆ ವಾಸಿಸುತ್ತಿರುವ ವಲಸಿಗರು ಸ್ವಯಂಪ್ರೇರಿತವಾಗಿ ದೇಶ ತೊರೆದರೆ ಪ್ರಯಾಣ ವೆಚ್ಚದ ಜೊತೆಗೆ ಆರ್ಥಿಕ ಪ್ರೋತ್ಸಾಹ ನೀಡುವುದಾಗಿ ಸರ್ಕಾರದ ಅಭಿಯಾನದಲ್ಲಿ ತಿಳಿಸಲಾಗಿದೆ. ಅಕ್ರಮ ವಲಸಿಗರನ್ನು ಸ್ವಯಂಪ್ರೇರಿತವಾಗಿ ಹಿಂದಿರುಗುವಂತೆ ಉತ್ತೇಜಿಸುವುದು ಇದರ ಉದ್ದೇಶ ಎಂದು ಆಡಳಿತ ಹೇಳುತ್ತಿದೆ.
ಆದರೆ ಜಾಹೀರಾತಿನಲ್ಲಿನ ನಿರ್ದಿಷ್ಟ ಪದಪ್ರಯೋಗ ಮತ್ತು ಭಾರತೀಯ ಹೆಸರುಗಳ ಬಳಕೆಯ ಬಗ್ಗೆ ಹಿಂದೂ ಅಮೆರಿಕನ್ ಫೌಂಡೇಶನ್ ಸೇರಿದಂತೆ ಭಾರತೀಯ ಹಾಗೂ ಸಿಖ್ ಸಂಘಟನೆಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ. ಕೇವಲ ‘ಸಿಂಗ್’ ಎಂಬ ಹೆಸರಿನ ಆಧಾರದ ಮೇಲೆ ಇಡೀ ಸಮುದಾಯವನ್ನು ತಪ್ಪಿತಸ್ಥರಂತೆ ಬಿಂಬಿಸುವುದು ಸರಿಯಲ್ಲ ಎಂದು ಸಂಘಟನೆಗಳು ವಾದಿಸಿವೆ. ಈ ಕುರಿತು ಎಫ್ಬಿಐ ನಿರ್ದೇಶಕ ಕಾಶ್ ಪಟೇಲ್ ಅವರಿಗೆ ದೂರು ನೀಡುವ ಕುರಿತು ಕೂಡ ಚಿಂತನೆ ನಡೆದಿದೆ.
ಅಮೆರಿಕದ ಸರಕು ಸಾಗಣೆ ಕ್ಷೇತ್ರದಲ್ಲಿ ಭಾರತೀಯ ಮೂಲದ ಚಾಲಕರ ಪಾತ್ರವೂ ದೊಡ್ಡದಿದೆ ಎಂಬ ವಾದವನ್ನು ಸಂಘಟನೆಗಳು ಮುಂದಿಟ್ಟಿವೆ. ಕ್ಯಾಲಿಫೋರ್ನಿಯಾ ಮತ್ತು ಟೆಕ್ಸಾಸ್ನಂತಹ ರಾಜ್ಯಗಳಲ್ಲಿ ಭಾರತೀಯ ಮೂಲದ ಅನೇಕರು ಟ್ರಕ್ ಚಾಲಕರಾಗಿ ಕೆಲಸ ಮಾಡುತ್ತಿದ್ದು, ದೇಶದ ಸರಕು ಪೂರೈಕೆ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
9/11 ದಾಳಿಯ ಬಳಿಕ ಸಿಖ್ಖರನ್ನು ತಪ್ಪಾಗಿ ಗುರುತಿಸಿ ದಾಳಿ ನಡೆಸಿದ ಘಟನೆಗಳ ನೆನಪು ಇನ್ನೂ ಸಮುದಾಯದಲ್ಲಿ ಉಳಿದಿದೆ. ಹೀಗಿರುವಾಗ ಸರ್ಕಾರಿ ಇಲಾಖೆಯ ಪ್ರಚಾರದಲ್ಲೇ ಇಂತಹ ಚಿತ್ರಣ ಕಾಣಿಸಿಕೊಂಡಿರುವುದು ಮತ್ತೊಮ್ಮೆ ಜನಾಂಗೀಯ ದ್ವೇಷಕ್ಕೆ ಉತ್ತೇಜನ ನೀಡಬಹುದೇ ಎಂಬ ಆತಂಕಕ್ಕೆ ಕಾರಣವಾಗಿದೆ.





