ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ರೈತರು ಹಾಗೂ ವ್ಯಾಪಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಯಾವುದೇ ಪೂರ್ವ ಸೂಚನೆ ಇಲ್ಲದೆ ಮಾರುಕಟ್ಟೆಗೆ ಆಗಮಿಸಿದ ಅವರು, ಈರುಳ್ಳಿ ಮಂಡಿಯಲ್ಲಿ ಈರುಳ್ಳಿ ಮೂಟೆಯ ಮೇಲೆ ಕುಳಿತು ರೈತರ ಸಮಸ್ಯೆಗಳನ್ನು ಆಲಿಸಿದರು. ಮಾರುಕಟ್ಟೆಯಲ್ಲಿ ರೈತರಿಗೆ ಸಿಗುತ್ತಿರುವ ಬೆಲೆ, ತೂಕ, ಕಮಿಷನ್ ಹಾಗೂ ಮಧ್ಯವರ್ತಿಗಳ ಹಾವಳಿ ಸೇರಿದಂತೆ ಹಲವು ವಿಚಾರಗಳ ಕುರಿತು ಮಾಹಿತಿ ಪಡೆದರು.
ಎಪಿಎಂಸಿಗೆ ಭೇಟಿ ನೀಡಿದ ಸಂದರ್ಭದಲ್ಲಿ ರೈತರನ್ನು ಮಾತನಾಡಿಸಿದ ಡಿಕೆಶಿ, ತೂಕದಲ್ಲಿ ಮೋಸ ನಡೆಯುತ್ತಿದೆಯೇ? ಎಂದು ಪ್ರಶ್ನಿಸಿದರು. ಇದಕ್ಕೆ ರೈತರು ತೂಕದಲ್ಲಿ ಯಾವುದೇ ಮೋಸ ಇಲ್ಲ ಎಂದು ಉತ್ತರಿಸಿದರು. ಇದೇ ವೇಳೆ ಈ ಮಂಡಿಗೆ ಬರುವಂತೆ ಯಾರಾದರೂ ಒತ್ತಡ ಹೇರುತ್ತಾರೆಯೇ? ಬ್ರೋಕರ್ಗಳಿಂದ ಸಮಸ್ಯೆಯಾಗುತ್ತಿದೆಯೇ? ಕಮಿಷನ್ ಎಷ್ಟು ಪಡೆಯಲಾಗುತ್ತಿದೆ? ಎಂಬ ಪ್ರಶ್ನೆಗಳನ್ನು ಕೇಳಿ ಮಾರುಕಟ್ಟೆಯ ವಾಸ್ತವ ಸ್ಥಿತಿಯನ್ನು ತಿಳಿದುಕೊಂಡರು.
ಈರುಳ್ಳಿ ಮಂಡಿಯ ಪರಿಶೀಲನೆ ಬಳಿಕ ಬೆಳ್ಳುಳ್ಳಿ ಹಾಗೂ ತೆಂಗಿನಕಾಯಿ ಮಂಡಿಗಳಿಗೂ ತೆರಳಿದ ಡಿಕೆಶಿ, ಅಲ್ಲಿನ ರೈತರು ಮತ್ತು ವ್ಯಾಪಾರಿಗಳೊಂದಿಗೆ ಚರ್ಚಿಸಿದರು. ಈ ವೇಳೆ ಚಿತ್ರದುರ್ಗ ಸೇರಿದಂತೆ ವಿವಿಧ ಭಾಗಗಳಿಂದ ಬರುವ ರೈತರು ಎದುರಿಸುತ್ತಿರುವ ವ್ಯಾಪಾರದ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು.
ರೈತರೊಬ್ಬರು ಮಧ್ಯವರ್ತಿಗಳ ಹಾವಳಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. 65 ಕೆಜಿ ತೂಕದ ಈರುಳ್ಳಿ ಮೂಟೆಯನ್ನು 50 ಕೆಜಿ ಎಂದು ಲೆಕ್ಕ ಹಾಕಲಾಗುತ್ತಿದೆ ಎಂದು ಆರೋಪಿಸಿದರು. ವಿವಿಧ ಪ್ರದೇಶಗಳಲ್ಲಿ ವ್ಯಾಪಾರಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳಿರುವುದರಿಂದ ಯಶವಂತಪುರ ಎಪಿಎಂಸಿಗೆ ಬರುವ ಪರಿಸ್ಥಿತಿ ಇದೆ ಎಂದು ರೈತರು ಡಿಕೆಶಿ ಅವರಿಗೆ ವಿವರಿಸಿದರು.
ರೈತರೊಂದಿಗೆ ಮಾತನಾಡಿದ ಡಿಕೆಶಿ, ಅವರು ಎಲ್ಲಿಂದ ಬಂದಿದ್ದಾರೆ, ಬೆಳೆಗಳಿಗೆ ಸರಿಯಾದ ದರ ಸಿಗುತ್ತಿದೆಯೇ, ಎಷ್ಟು ಎಕರೆ ಜಮೀನು ಹೊಂದಿದ್ದಾರೆ ಹಾಗೂ ಎಕರೆಗೆ ಎಷ್ಟು ಆದಾಯ ಉಳಿಯುತ್ತದೆ ಎಂಬುದನ್ನು ವಿಚಾರಿಸಿದರು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಲಾಭ ಹೇಗಿದೆ ಎಂಬ ಮಾಹಿತಿಯನ್ನೂ ಪಡೆದರು.
ಆಲೂಗಡ್ಡೆ ಮಂಡಿಯಲ್ಲೂ ಪರಿಶೀಲನೆ
ನಂತರ ಆಲೂಗಡ್ಡೆ ಮಂಡಿಗೆ ತೆರಳಿದ ಡಿಕೆಶಿ, ಉತ್ಪನ್ನದ ಗುಣಮಟ್ಟ ಹಾಗೂ ವ್ಯಾಪಾರದ ಬಗ್ಗೆ ಮಾಹಿತಿ ಪಡೆದರು. ಆಲೂಗಡ್ಡೆಯನ್ನು ವ್ಯಾಪಾರಿಗಳು ಇಲ್ಲಿಂದ ಖರೀದಿಸಿ ಬೇರೆ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತಾರೆ ಎಂದು ಮಹಿಳಾ ರೈತರೊಬ್ಬರು ವಿವರಿಸಿದರು. ಇಲ್ಲಿ ಸುಮಾರು 6ರಷ್ಟು ಕಮಿಷನ್ ಪಡೆಯಲಾಗುತ್ತದೆ ಎಂಬ ಮಾಹಿತಿಯನ್ನೂ ಅವರು ನೀಡಿದರು.
ಹರಾಜಿನಲ್ಲಿ ಯಾವುದೇ ರೀತಿಯ ಮೋಸ ನಡೆಯುತ್ತಿದೆಯೇ ಎಂಬ ಬಗ್ಗೆಯೂ ಡಿಕೆಶಿ ಪ್ರಶ್ನಿಸಿದರು. ತಿಂಗಳಿಗೆ ಎಷ್ಟು ಬಾರಿ ಎಪಿಎಂಸಿಗೆ ಬರುತ್ತೀರಿ, ಇಷ್ಟು ಪ್ರಮಾಣದ ಮೂಟೆಗಳನ್ನು ಮಾರಾಟ ಮಾಡಲು ಎಷ್ಟು ದಿನ ಬೇಕಾಗುತ್ತದೆ ಎಂಬ ಪ್ರಶ್ನೆಗಳ ಮೂಲಕ ಮಾರುಕಟ್ಟೆಯ ವಹಿವಾಟಿನ ಕುರಿತು ಮಾಹಿತಿ ಪಡೆದರು.





