ನೆಲಮಂಗಲ: ಬಹುದಿನಗಳಿಂದ ಮಳೆಯ ನಿರೀಕ್ಷೆಯಲ್ಲಿದ್ದ ನೆಲಮಂಗಲ ತಾಲೂಕಿನ ಜನರಿಗೆ ವರುಣ ಕೊನೆಗೂ ಕೃಪೆ ತೋರಿದ್ದಾನೆ. ನೆಲಮಂಗಲ, ದಾಬಸ್ಪೇಟೆ ಹಾಗೂ ದಾಸರಹಳ್ಳಿ ಸುತ್ತಮುತ್ತ ಇಂದು ಭಾರೀ ಮಳೆಯಾಗಿದ್ದು, ಬಿಟ್ಟುಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ.
ಕಳೆದೊಂದು ಗಂಟೆಯಿಂದ ಈ ಭಾಗಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಏಕಾಏಕಿ ಸುರಿದ ಭಾರೀ ಮಳೆಯಿಂದ ರಸ್ತೆಯಲ್ಲಿ ನೀರು ನಿಂತಿದ್ದು, ವಾಹನ ಸವಾರರು ಸಂಚರಿಸಲು ಪರದಾಡುವಂತಾಗಿದೆ. ಪ್ರಮುಖ ರಸ್ತೆಗಳಲ್ಲಿ ವಾಹನಗಳ ವೇಗ ಕುಂಠಿತಗೊಂಡಿದ್ದು, ಕೆಲವೆಡೆ ಸಂಚಾರ ದಟ್ಟಣೆಯೂ ಉಂಟಾಗಿದೆ.
ಇತ್ತ, ಮಳೆಗಾಗಿ ಎದುರು ನೋಡುತ್ತಿದ್ದ ತಾಲೂಕಿನ ರೈತರಿಗೆ ವರುಣನ ಆಗಮನ ಸಂತಸ ತಂದಿದೆ. ಮಳೆ ಕೊರತೆಯಿಂದ ಬೆಳೆ ಹಾಗೂ ಕೃಷಿ ಚಟುವಟಿಕೆಗಳ ಬಗ್ಗೆ ಆತಂಕದಲ್ಲಿದ್ದ ರೈತರ ಮೊಗದಲ್ಲಿ ಇದೀಗ ಮಂದಹಾಸ ಮೂಡಿದೆ.
ಬರಪೀಡಿತ ತಾಲೂಕು ಎಂಬ ಹಣೆಪಟ್ಟಿ ಹೊಂದಿರುವ ನೆಲಮಂಗಲದಲ್ಲಿ ಉತ್ತಮ ಮಳೆಯಾದರೆ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಜಮೀನುಗಳಲ್ಲಿ ತೇವಾಂಶ ಹೆಚ್ಚುವುದರ ಜೊತೆಗೆ ಬಿತ್ತನೆ ಹಾಗೂ ಮುಂದಿನ ಕೃಷಿ ಕಾರ್ಯಗಳಿಗೆ ಮಳೆ ಸಹಕಾರಿಯಾಗಲಿದೆ ಎಂಬ ನಿರೀಕ್ಷೆಯಲ್ಲಿ ರೈತರಿದ್ದಾರೆ.
ಆದರೆ ನಿರಂತರ ಮಳೆಯ ಹಿನ್ನೆಲೆಯಲ್ಲಿ ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.





