ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಬಹುನಿರೀಕ್ಷಿತ ‘ತಮ್ಮ ಸುಖಾಗಮನ ಬಯಸುವ’ ಚಿತ್ರಕ್ಕೆ ನಾಯಕಿಯಾಗಿ ಸಂಜನಾ ಆನಂದ್ ಆಯ್ಕೆಯಾಗಿದ್ದಾರೆ. ಈ ಮೂಲಕ ಇಬ್ಬರು ಕಲಾವಿದರು ಇದೇ ಮೊದಲ ಬಾರಿಗೆ ತೆರೆಹಂಚಿಕೊಳ್ಳುತ್ತಿದ್ದಾರೆ. ರಾಮೇನಹಳ್ಳಿ ಜಗನ್ನಾಥ್ ನಿರ್ದೇಶಿಸುತ್ತಿರುವ ಈ ಕೌಟುಂಬಿಕ ಕಥಾಹಂದರದ ಚಿತ್ರವು ಸದ್ಯ ಭರದಿಂದ ಚಿತ್ರೀಕರಣಗೊಳ್ಳುತ್ತಿದ್ದು, ಬೆಂಗಳೂರಿನಲ್ಲಿ ತನ್ನ ಮೊದಲ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
‘ಹೊಂದಿಸಿ ಬರೆಯಿರಿ’ ಚಿತ್ರದ ಮೂಲಕ ಗಮನಸೆಳೆದಿದ್ದ ರಾಮೇನಹಳ್ಳಿ ಜಗನ್ನಾಥ್, ಈ ಬಾರಿಯೂ ಭಾವನೆಗಳಿಗೆ ಒತ್ತು ನೀಡುವ ಕಥೆಯನ್ನು ಆಯ್ದುಕೊಂಡಿದ್ದಾರೆ. ಗಣೇಶ್ ಅವರ ನಟನಾ ಶೈಲಿಯನ್ನು ಮನಸ್ಸಿನಲ್ಲಿಟ್ಟುಕೊಂಡೇ ಜಗನ್ನಾಥ್ ಈ ಚಿತ್ರದ ಕಥೆಯನ್ನು ಸಿದ್ಧಪಡಿಸಿದ್ದಾರೆ. ಗಣೇಶ್ ಅವರ ಐಕಾನಿಕ್ ಚಿತ್ರ ‘ಮುಂಗಾರು ಮಳೆ’ಯಿಂದ ಪ್ರೇರಿತರಾಗಿ ಅವರೊಂದಿಗೆ ಕೆಲಸ ಮಾಡುವ ಇಚ್ಛೆ ಹೊಂದಿದ್ದ ನಿರ್ದೇಶಕರಿಗೆ, ಈ ಸಿನಿಮಾ ಅತ್ಯಂತ ವಿಶೇಷ.
ಗೋಲ್ಡನ್ ಸ್ಟಾರ್ ಗಣೇಶ್ ಅವರ ಸ್ಯಾಂಡಲ್‌ವುಡ್‌ನಲ್ಲಿ 20 ವರ್ಷಗಳ ಯಶಸ್ವಿ ಪಯಣವನ್ನು ಸಂಭ್ರಮಿಸುವ ವಿಶೇಷ ಚಿತ್ರವಾಗಿ ಇದು ಹೊರಹೊಮ್ಮುತ್ತಿದೆ. ಗಣೇಶ್ ಅವರ ದಶಕಗಳ ಕೊಡುಗೆಗೆ ಗೌರವ ಸೂಚಿಸುವಂತೆ ಈ ಚಿತ್ರವನ್ನು ರೂಪಿಸಲಾಗುತ್ತಿದೆ. ವೈಷ್ಣವಿ ಫಿಲ್ಮ್ಸ್ ಲಾಂಛನದಲ್ಲಿ ಅಶ್ವಿನಿ ವಿಜಯ ಲೋಹಿತ್ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಸತೀಶ್ ಹೆಚ್. ಗೌಡ ಸಹ-ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ.
ಈ ಕೌಟುಂಬಿಕ ಚಿತ್ರಕ್ಕೆ ದೊಡ್ಡ ತಾರಾಬಳಗದ ಬಲವಿದೆ. ಅನುಭವಿ ನಟರಾದ ರಂಗಾಯಣ ರಘು, ಅಚ್ಯುತ್ ಕುಮಾರ್ ಮತ್ತು ಸಾಧು ಕೋಕಿಲ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಸಿದ್ದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡುತ್ತಿದ್ದರೆ, ನವೀನ್‌ಕುಮಾರ್ ಐ ಅವರ ಛಾಯಾಗ್ರಹಣ ಚಿತ್ರಕ್ಕಿರಲಿದೆ. ಹೊಸ ಜೋಡಿಯಾದ ಗಣೇಶ್ ಹಾಗೂ ಸಂಜನಾ ಆನಂದ್ ಅವರ ಕೆಮಿಸ್ಟ್ರಿ ಚಿತ್ರದ ಪ್ರಮುಖ ಆಕರ್ಷಣೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಸದ್ಯಕ್ಕೆ ಚಿತ್ರದ ಮುಖ್ಯ ಕಥಾವಸ್ತು ಹಾಗೂ ಪಾತ್ರಗಳ ವಿವರಗಳನ್ನು ಚಿತ್ರತಂಡ ಗುಟ್ಟಾಗಿಟ್ಟಿದೆ. ಇತ್ತೀಚಿನ ದಿನಗಳಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸಂಜನಾ ಆನಂದ್ ಅವರಿಗೆ ಈ ಸಿನಿಮಾ ದೊಡ್ಡ ಮೈಲಿಗಲ್ಲಾಗುವ ಸಾಧ್ಯತೆಯಿದೆ. ಮುಂದಿನ ದಿನಗಳಲ್ಲಿ ಚಿತ್ರದ ಉಳಿದ ತಾರಾಗಣ ಹಾಗೂ ಪಾತ್ರಗಳ ಕುರಿತು ಹೆಚ್ಚಿನ ಮಾಹಿತಿಗಳನ್ನು ಹಂಚಿಕೊಳ್ಳುವುದಾಗಿ ಚಿತ್ರತಂಡ ತಿಳಿಸಿದೆ.





